“ಜನತಾ ಬಜಾರ್’ ಮಳಿಗೆಗಳ ಬಗ್ಗೆ ನಿಮಗೆ ಗೊತ್ತಿರಬಹುದು. ಗ್ರಾಹಕರು ಮತ್ತು ವರ್ತಕರನ್ನು ಒಂದೇ ಸೂರಿನಡಿ ತಂದು ವ್ಯಾಪಾರ-ವಹಿವಾಟು ನಡೆಸುವ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ “ಜನತಾ ಬಜಾರ್’ ಈಗ ಚಿತ್ರವೊಂದರ ಶೀರ್ಷಿಕೆಯಾಗಿ ತೆರೆಮೇಲೆ ಬರುತ್ತಿದೆ. ಇತ್ತೀಚೆಗೆ ಕನ್ನಡದಲ್ಲಿ ಆಡು ಭಾಷೆಯ ಪದಗಳು, ಊರಿನ ಹೆಸರು, ಜಾಗಗಳ ಹೆಸರು ಚಿತ್ರಗಳ ಶೀರ್ಷಿಕೆಯಾಗುತ್ತಿರುವ ಸಮಯದಲ್ಲಿ ಅಂಥದ್ದೇ ಸಾಲಿಗೆ ಈಗ “ಜನತಾ ಬಜಾರ್’ ಚಿತ್ರ ಕೂಡ ಸೇರ್ಪಡೆಯಾಗುತ್ತಿದೆ. ಇನ್ನು ಸಂಪೂರ್ಣ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ಈ ಚಿತ್ರ ಶೇಕಡ 80ರಷ್ಟು ಕಥೆ ಮಾರ್ಕೇಟ್‌ನಲ್ಲಿಯೇ ನಡೆಯುವುದರಿಂದ ಚಿತ್ರತಂಡ ತಮ್ಮ ಚಿತ್ರಕ್ಕೆ “ಜನತಾ ಬಜಾರ್’ ಎಂದು ಹೆಸರಿಟ್ಟಿದೆಯಂತೆ.
ಸದ್ಯ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ತನ್ನ ಮುಹೂರ್ತವನ್ನು ನೆರವೇರಿಸಿಕೊಂಡು ಚಿತ್ರೀಕರಣಕ್ಕೆ ಹೊರಟಿದೆ. ಹಲವು ರಾಜಕೀಯ ಮುಖಂಡರು ಮತ್ತು ಚಿತ್ರರಂಗದ ಗಣ್ಯರು ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದು ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಈಗಾಗಲೇ ಹಲವು ಚಿತ್ರ ನಿರ್ದೇಶಕರ ಬಳಿ ಕೆಲಸ ಮಾಡಿದ ಅನುಭವವಿರುವ ಮಂಗಳೂರು ಮೂಲದ ಆರ್.ಜೆ ಪ್ರದೀಪ್ “ಜನತಾ ಬಜಾರ್’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಚಿತ್ರದ ಬಗ್ಗೆ ಮಾತನಾಡಿದ ಚಿತ್ರತಂಡ, “ಇಡೀ ಚಿತ್ರದ ಬಹುಭಾಗ ಮಾರ್ಕೇಟ್‌ನಲ್ಲಿ ನಡೆಯುತ್ತದೆ. ವಿಧವೆಯೊಬ್ಬಳು ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ಒಂದು ಮಾರ್ಕೇಟ್‌ನಲ್ಲಿ ವ್ಯಾಪಾರ ನಡೆಸಿಕೊಂಡು ಹೋಗುತ್ತಿರುವಾಗ, ಒಮ್ಮೆ ಒಬ್ಬ ವ್ಯಕ್ತಿಯಿಂದ ಅವಳ ಕುಟುಂಬ ತೊಂದರೆಗೆ ಸಿಲುಕಿಕೊಳ್ಳುತ್ತದೆ. ಇದನ್ನು ಆ ಮಹಿಳೆ ಮತ್ತು ಆಕೆಯ ಮಕ್ಕಳು ಹೇಗೆ ಎದುರಿಸುತ್ತಾರೆ? ಅದರಿಂದ ಯಾವ ರೀತಿಯಲ್ಲಿ ಹೊರಗೆ ಬರುತ್ತಾರೆ ಎಂಬುದು ಚಿತ್ರದ ಕಥೆಯ ಒಂದು ಎಳೆ. ಇದನ್ನು ಹೇಗೆ ಅನ್ನೋದನ್ನ ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ತೋರಿಸಲಿದ್ದೇವೆ. ಚನ್ನರಾಯಪಟ್ಟಣದ ಮಾರ್ಕೇಟ್‌ನಲ್ಲಿ ಚಿತ್ರದ ಬಹುಭಾಗ ಚಿತ್ರೀಕರಣ ನಡೆಸಲು ಯೋಜಿಸಲಾಗಿದೆ. ಉಳಿದಂತೆ ಹಾಸನ, ಸಕಲೇಶಪುರ, ಶ್ರವಣಬೆಳಗೊಳ, ಚಿಕ್ಕಮಗಳೂರಿನ ಸುಂದರ ತಾಣಗಳಲ್ಲಿ ಸುಮಾರು 35 ದಿನಗಳ ಚಿತ್ರೀಕರಣ ನಡೆಸಲಾಗಿದೆ’ ಎಂದು ವಿವರಣೆ ಕೊಟ್ಟಿತು.
ಇನ್ನು “ಜನತಾ ಬಜಾರ್’ ಚಿತ್ರದಲ್ಲಿ ರಾಹುಲ್ ಅರ್ಜುನ್, ಅದಿತಿ, ಕುಮಾರ್, ಅಶ್ವಿತಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ವಿನಯ್, ರಘು, ಪ್ರಜ್ವಲ್, ಕಿರಣ್, ಪವನ್ ಮತ್ತಿತರರು ಚಿತ್ರದ ಇತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ನಾಲ್ಕು ಹಾಡುಗಳಿಗೆ ವೈಭವ್ ರಾಗ ಸಂಯೋಜಿಸುತ್ತಿದ್ದು, ಸುಪ್ರಿತಾ ಸಂತೋಷ್, ಅಂಜನ್ ಕುಮಾರ್, ಶಿವರಾಜ್ ಸಾಹಿತ್ಯವಿದೆ. ಚಿತ್ರಕ್ಕೆ ರಾಜೇಶ್ ಗೌಡ ಛಾಯಾಗ್ರಹಣ, ಪವನ್ ದೇವ್ ಸಂಕಲನವಿದೆ. ವೃತ್ತಿಯಲ್ಲಿ ಬಿಲ್ಡರ್ ಆಗಿರುವ ಕೆ.ಎಂ ಮುರಳಿ “ಜನತಾ ಬಜಾರ್’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.