Advertisement
ಆದರೆ ಇಲ್ಲಿ ಎಲ್ಲವೂ ಕ್ಷೇಮ ಎಂಬ ಒಕ್ಕಣೆಯನ್ನು ನಾವಿಂದು ಪ್ರಜಾಪ್ರತಿನಿಧಿತ್ವ, ಶಾಸನ ಸಭೆಗಳ ಕಾರ್ಯ ನಿರೂಪಣೆ ಬಗೆಗೆ ಬರೆಯುವಂತಿಲ್ಲ. ನಮ್ಮಲ್ಲಿ ಸ್ವಿಡ್ಜರ್‌ಲ್ಯಾಂಡಿನ ಸಂವಿಧಾನ ನಿರೂಪಿಸಿದ ಯಾವುದೇ ನೇರ ಅಥವಾ ಪ್ರತ್ಯಕ್ಷ ಪ್ರಜಾಪ್ರಭುತ್ವದ ವಿಧಿ ಬಿಂದುಗಳಿಲ್ಲ. ಬದಲಾಗಿ ಚುನಾವಣ ಸಂದರ್ಭ, ಮತ”ದಾನ’ದ ಗುಂಡಿ ಒತ್ತುವ ಪ್ರಕ್ರಿಯೆ ಮುಗಿದ ಬಳಿಕ ಮುಂದಿನ ಪಂಚವಾರ್ಷಿಕ ಅವಧಿಯಲ್ಲಿ ಜನಸಾಮಾನ್ಯರು ಬಹುತೇಕ ಮೂಕ ಪ್ರೇಕ್ಷಕರಂತೆಯೇ ಸರಿ. ಹೊಸದಿಲ್ಲಿಯ ಸಂಸತ್ತಿನಿಂದ ಹಿಡಿದು ಹಳ್ಳಿಯ ಪಂಚಾಯತ್‌ವರೆಗೆ ನಮ್ಮ ಪ್ರತಿನಿಧಿಗಳದ್ದೇ ಕಾರುಬಾರು. ಅಧಿವೇಶನದುದ್ದಕ್ಕೂ ಕಲಾಪದಲ್ಲಿ ಗದ್ದಲ, ಪ್ರತಿಭಟನೆ, ಆಹೋರಾತ್ರಿ ಧರಣಿ, ಕಿರುಚಾಟ, ಅಂಗಿ ಹರಿದಾಟ, ಕೈ ಕೈ ಮಿಲಾಯಿಸುವಿಕೆ, ಅಪಶಬ್ದಗಳ ಧಾರಾಳ ಬಳಕೆ – ಇವೆಲ್ಲವುಗಳನ್ನು ನಮ್ಮ ಸ್ವಾತಂತ್ರ್ಯೋತ್ತರ ಭಾರತದ ಕಿರು ಇತಿಹಾಸ ಧಾರಾಳವಾಗಿ ದಾಖಲಿಸಿದೆ. ಇಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳು ವಾಹನದ ಎರಡು ಗಾಲಿಗಳಂತೆ ಪೂರಕ ಚಲನೆಗೆ ಸಿದ್ಧವಾಗಬೇಕು ಎಂಬ ಜನತಂತ್ರೀಯ ಮೂಲ ಸಿದ್ಧಾಂತದ ಅರಿವು ಜಾರುವ ದಾರಿಯಲ್ಲಿದೆ.
Related Articles
Advertisement
ವಿಪಕ್ಷಗಳ ಪ್ರಧಾನ ಭೂಮಿಕೆ ಇರುವುದು ಸರಕಾರದ ಚುಕ್ಕಾಣಿ ಹಿಡಿದವರು ದಾರಿ ತಪ್ಪದಂತೆ ಎಚ್ಚರ ಕಾಯ್ದುಕೊಳ್ಳುವುದು. ಬ್ರಿಟನ್‌ನಲ್ಲಿ ನೆರಳು ಸಚಿವ ಸಂಪುಟ (Shadow cabinet) ಎಂಬ ವಿಪಕ್ಷೀಯ ಸಾಂಪ್ರದಾಯಿಕ ವ್ಯವಸ್ಥೆಯಿದೆ. ಟ್ರೆಜರಿ ಬೆಂಚಿನ ಒಬ್ಬೊಬ್ಬ ಸಚಿವನ ಕಾರ್ಯ ವಿಧಾನದ ಮೇಲೆಯೂ ಕಣ್ಣಿರಿಸಲು ದ್ವಿಪಕ್ಷ ಪದ್ಧತಿಯ ಆ ರಾಷ್ಟ್ರ ನಿರೂಪಿಸಿಕೊಂಡ ಬಗೆ ಅದು. ವಿಪಕ್ಷಗಳ ಪಾತ್ರ ಆಡಳಿತ ವ್ಯವಸ್ಥೆ ಹದಗೆಟ್ಟು ಜಾರುವ ದಾರಿಯಲ್ಲಿದ್ದಾಗ ಬ್ರೇಕ್‌ನಂತೆ ಇರಬೇಕೇ ವಿನಾ ಉತ್ತಮ ಆಡಳಿತದ ಏರುಗತಿಯಲ್ಲಿದ್ದಾಗ “ತಡೆ’ ಒಡ್ಡುವ ಕಾರ್ಯತಂತ್ರ ಎನಿಸಬಾರದು. ಪ್ರತಿನಿಧಿತ್ವವನ್ನು ಮರೆತು “ಕೋರಂ’ ಕೂಡಾ ಇಲ್ಲದಷ್ಟು ಸದಸ್ಯರ ಗೈರು ಹಾಜರಿ, ಕೇವಲ ಸಹಿ ನಮೂದಿಸಿ ಸದನದಿಂದ ನಿರ್ಗಮನ ಹಾಗೂ ಕೋಲಾಹಲ ಸೃಜಿಸಿ ಅಮೂಲ್ಯ ಸಮಯ ನುಂಗುವ ಪರಿ- ಇವೆಲ್ಲವೂ ನಮ್ಮ ವ್ಯವಸ್ಥೆಯ ಗಂಭೀರ, ಅನಪೇಕ್ಷಣೀಯ ಇತಿ ವೃತ್ತಾಂತಗಳು. ಲಕ್ಷಗಳಲ್ಲಿ ಅಲ್ಲ ಕೋಟಿ ರೂಪಾಯಿಗಳಲ್ಲಿ ತೆರಿಗೆಯ, ಜನಸಾಮಾನ್ಯರ, ಖಜಾನೆಯ ಹಣ, ಕಲಾಪಗಳನ್ನು ಬಲಿ ತೆಗೆದುಕೊಳ್ಳುವಿಕೆಯಿಂದ ನೀರುಪಾಲಾಗುತ್ತಿ ರುವುದು ವಾಸ್ತವಿಕ ಕಟುಸತ್ಯ.
ಈ ಬಗ್ಗೆ ಸಾರ್ವಜನಿಕ ದಿವ್ಯಮೌನ, ಇದೊಂದು ಮಾಮೂಲು ಸಂಗತಿ ಎನ್ನುವ ಚತುರ್ಥ ರಂಗ- ಮಾಧ್ಯಮಗಳ ದಿವ್ಯ ನಿರ್ಲಕ್ಷ್ಯ. ಇವೆಲ್ಲವೂ 75ರ ಪ್ರೌಢಿಮೆಯ ನಮ್ಮ ಜನತಂತ್ರ ವ್ಯವಸ್ಥೆಗೆ ಶೋಭೆಯಲ್ಲ. ಕೇಂದ್ರ ಹಾಗೂ ರಾಜ್ಯಗಳ ಸದನಗಳ ಸಭಾಪತಿ ಸ್ಥಾನವನ್ನು ಅಲಂಕರಿಸಿದವರೂ ಸಮದೃಷ್ಟಿಯ, ಸಂಸದೀಯ ಪರಿಜ್ಞಾನದ, ಮಿತ-ಚತುರ ಭಾಷಿ “ಸ್ಪೀಕರ್’ ಆಗಿರಬೇಕು. ಬಜೆಟ್ ಮೇಲಿನ ಚರ್ಚೆ, ವಂದನಾ ನಿರ್ಣಯ, ಪ್ರಶ್ನೋತ್ತರ, ನಿಲುವಳಿ ಸೂಚನೆ, ವಿಶೇಷ ಚರ್ಚಾ ಸೂಚನೆ , ಶೂನ್ಯ ವೇಳೆ – ಹೀಗೆ ಒಂದಲ್ಲ ಹಲವು ಸಂಸದೀಯ ಅವಕಾಶಗಳ ಜತೆಗೇ ಅವಿಶ್ವಾಸ ಠರಾವಿನ ವರೆಗಿನ ಅಸ್ತ ಪ್ರಯೋಗಕ್ಕೆ ವಿಪಕ್ಷಗಳಿಗೆ ವಿಪುಲ ಅವಕಾಶವಿದೆ. ಆದರೆ ಅವೆಲ್ಲವುಗಳನ್ನು ಜಾಣ್ಮೆಯಿಂದ ಉಪಯೋಗಿಸುವ ಸಂಸದೀಯ ಪಟುತ್ವ ಮಾತ್ರ ಇಂದಿನ ಹಾಗೂ ಮುಂದಿನ ಆವಶ್ಯಕತೆ. ಬದಲಾಗಿ ಕಲಾಪ ನುಂಗುವ, ಸಾರ್ವಜನಿಕ ಹಿತಕ್ಕೆ ಒಂದಿ ನಿತೂ ಪ್ರಯೋಜನಕರವಲ್ಲದ ಖಜಾನೆಯ ಹಣ ಮತ್ತು ಅಮೂಲ್ಯ ಸಮಯ ಪೋಲು ಮಾಡುವ ಪರಿ ತೀರಾ ಅನಪೇಕ್ಷಣೀಯ. ಇದೇ ತೆರದಲ್ಲಿ ರಾಜಕೀಯ ವಾಸ್ತವಿಕತೆ ಬರಲಿರುವ ನಾಳೆಗಳ “ಸದನ-ಸಂಸ್ಕಾರ’ಗಳೂ ಮುಂದುವರಿದರೆ ಸಮಗ್ರ ಸಂಸದೀಯ ವ್ಯವಸ್ಥೆಯೇ ಬಹುತೇಕ “ಶೂನ್ಯ ಸಂಪಾದನೆ’ಯ ಪಥಗಾಮಿಯಾದೀತು.
– ಡಾ| ಪಿ. ಅನಂತಕೃಷ್ಣ ಭಟ್, ಮಂಗಳೂರು