Advertisement

“ಜನತಾ ಕರ್ಫ್ಯೂ’ಗೆ ಕಡಲ ನಗರಿ ಅಕ್ಷರಶಃ ಸ್ತಬ್ಧ

12:27 AM Mar 23, 2020 | Sriram |

ಮಹಾನಗರ: ಎಲ್ಲರ ಊಹೆಯನ್ನೂ ಮೀರುತ್ತಿರುವ ಮಹಾಮಾರಿ ಕೋವಿಡ್‌ 19 ನಿಯಂತ್ರಣದ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಕರೆಯ ಮೇರೆಗೆ ರವಿವಾರ ದೇಶಾದ್ಯಂತ ಆಚರಿಸಲಾದ “ಜನತಾ ಕರ್ಫ್ಯೂ’ ಯಶಸ್ವಿಯಾಗಿದ್ದು, ಕಡಲ ನಗರಿ ಮಂಗಳೂರು ಅಕ್ಷರಶಃ ಸ್ತಬ್ಧವಾಗಿದೆ.

Advertisement

ಜಾಗತಿಕವಾಗಿ ಕಾಡುತ್ತಿರುವ ಕೋವಿಡ್‌ 19 ದಿಂದ ಪಾರಾಗಲು ಸ್ವಯಂ ನಿಯಂತ್ರಣದ ಸಂಕಲ್ಪದಿಂದ ಮನೆಯಿಂದ ಹೊರಗೆ ಬಾರದೆ ನಗರದ ಜನರು ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಿದರು. ಪರಿಣಾಮವಾಗಿ ಸದಾ ವಾಹನಗಳಿಂದ ಗಿಜಿಗುಡುತ್ತಿದ್ದ ಹಾಗೂ ವ್ಯಾಪಾರ ವಹಿವಾಟಿನ ಮೂಲಕ ಸುದ್ದಿಯಲ್ಲಿದ್ದ ಮಂಗಳೂರು ರವಿವಾರ ಮುಂಜಾನೆಯಿಂದ ರಾತ್ರಿಯವರೆಗೆ ಸಂಪೂರ್ಣ ಬಿಕೋ ಎನ್ನುತ್ತಿತ್ತು. ಅಲ್ಲೊಂದು-ಇಲ್ಲೊಂದು ದ್ವಿಚಕ್ರ, ಕಾರನ್ನು ಹೊರತುಪಡಿಸಿ ಬೇರಾವುದೇ ವಾಹನಗಳು ರಸ್ತೆಗಳಿಯಲಿಲ್ಲ.

ಜನನಿಬಿಡ ಸ್ಥಳಗಳಾದ ಸ್ಟೇಟ್‌ಬ್ಯಾಂಕ್‌, ಮೀನು ಮಾರುಕಟ್ಟೆ, ಬಂದರು, ಹಂಪನಕಟ್ಟೆ, ಜ್ಯೋತಿ, ಕಂಕನಾಡಿ, ಪಂಪ್‌ವೆಲ್‌, ಪಿವಿಎಸ್‌, ನವಭಾರತ್‌ ಸರ್ಕಲ್‌, ಎಂ.ಜಿ. ರಸ್ತೆ, ಲಾಲ್‌ಬಾಗ್‌, ಲೇಡಿಹಿಲ್‌, ಉರ್ವ, ಉರ್ವಸ್ಟೋರ್‌, ಕೊಟ್ಟಾರ, ನಂತೂರು, ಶಕ್ತಿನಗರ, ಕುಲಶೇಖರ, ಪಡೀಲ್‌, ಕುದ್ರೋಳಿ, ಮಣ್ಣಗುಡ್ಡ ಸಹಿತ ಎಲ್ಲ ಜಾಗದಲ್ಲಿಯೂ ರವಿವಾರ ಬಿಕೋ ವಾತಾವರಣ. ಒಂದೆರಡು ವಾಹನಗಳನ್ನು ಬಿಟ್ಟರೆ ಸಂಪೂರ್ಣ ರಸ್ತೆ ಖಾಲಿ ಖಾಲಿ. ಇಲ್ಲಿನ ಎಲ್ಲ ಅಂಗಡಿ ಮುಂಗಟ್ಟು, ಮಳಿಗೆ, ಹೊಟೇಲ್‌ ಎಲ್ಲವೂ ಬಾಗಿಲು ಹಾಕಿದ್ದವು. ಒಂದೆರಡು ಜನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರೆ ವಿನಾ ಎಲ್ಲೂ ಜನಸಂಚಾರವಿರಲಿಲ್ಲ.

ಮಂಗಳೂರಿನಿಂದ ದೂರದ ಊರುಗಳಿಗೆ ತೆರಳುವ ರೈಲು, ನಗರದಲ್ಲೇ ಸಂಚರಿಸುವ ಸಿಟಿ, ಖಾಸಗಿ ಬಸ್‌ಗಳು, ರಿಕ್ಷಾ, ಮ್ಯಾಕ್ಸಿಕ್ಯಾಬ್‌, ಸರಕು ಸಾಗಾಣೆ ಲಾರಿ, ಪ್ರವಾಸಿ ವಾಹನ, ಅಂತಾರಾಷ್ಟ್ರೀಯ ವಿಮಾನ ಹಾರಾಟ ಸ್ಥಗಿತಗೊಂಡಿತ್ತು. ಹೀಗಾಗಿ ಎಲ್ಲೂ ಜನರು ಕಾಣಲೇ ಇಲ್ಲ.

ಮುಂಜಾನೆ ಭರ್ಜರಿ ವ್ಯಾಪಾರ!
ರವಿವಾರ ಮುಂಜಾನೆ 4ರಿಂದ ನಗರದಲ್ಲಿ ಕೆಲವು ಅಂಗಡಿಗಳು ತೆರೆದಿದ್ದವು. ಈ ಹಂತದಲ್ಲಿ ಸಾರ್ವಜನಿಕರು ಹಾಲು, ಪತ್ರಿಕೆ ಸಹಿತ ದಿನಬಳಕೆ ವಸ್ತುಗಳನ್ನು ಖರೀದಿಸಲು ಮುಗಿಬಿದ್ದರು. ಹೀಗಾಗಿ ಮುಂಜಾನೆ ವ್ಯಾಪಾರ ಕೆಲವು ಅಂಗಡಿಗಳಲ್ಲಿ ಭರ್ಜರಿಯಾಗಿತ್ತು. ಬೆಳಗ್ಗೆ 7 ಗಂಟೆಯಾಗುತ್ತಲೇ ಅಂಗಡಿ ಬಂದ್‌ ಮಾಡಿ ಎಲ್ಲರೂ ಮನೆಯತ್ತ ಮುಖಮಾಡಿದರು. ಬಳಿಕ ಬಿಕೋ ಪರಿಸ್ಥಿತಿ. ಈ ಮಧ್ಯೆ ಬಹುತೇಕ ಜನರು ಶನಿವಾರ ರಾತ್ರಿಯೇ ಅಗತ್ಯ ಸಾಮಗ್ರಿಗಳನ್ನು ಮನೆಗೆ ಕೊಂಡೊಯ್ದ ಕಾರಣದಿಂದ ಬಹುತೇಕ ಜನರಿಗೆ ಸಮಸ್ಯೆ ಆಗಿರಲಿಲ್ಲ.

Advertisement

ಆಲಯಗಳು ಬಂದ್‌!
ಇದೇ ಮೊದಲ ಬಾರಿಗೆ ಎಂಬಂತೆ ಶ್ರೀ ಮಂಗಳಾದೇವಿ, ಶ್ರೀ ಕ್ಷೇತ್ರ ಕದ್ರಿ, ಕುದ್ರೋಳಿ ಕ್ಷೇತ್ರ ಸೇರಿದಂತೆ ಬಹುತೇಕ ಆಲಯಗಳನ್ನು ಕೊರೊನಾ ಕಾರಣದಿಂದ ಬಂದ್‌ ಮಾಡಲಾಗಿತ್ತು. ಇಲ್ಲಿ ದೇವರ ಪೂಜೆಗೆ ಮಾತ್ರ ಅವಕಾಶವಿತ್ತು. ಉಳಿದಂತೆ ಸಾರ್ವಜನಿಕರ ಆಗಮನ, ಪೂಜಾ ಸೇವೆಗೂ ಅವಕಾಶವಿರಲಿಲ್ಲ. ಮಸೀದಿ, ಚರ್ಚ್‌ಗಳಿಗೂ ಸಾರ್ವಜನಿಕರು ಆಗಮಿಸಲಿಲ್ಲ.

ಬಸ್‌ನಿಲ್ದಾಣದಲ್ಲಿದ್ದ ಹಾಗೂ ಸಾರಿಗೆ ವ್ಯವಸ್ಥೆ ಇಲ್ಲದೆ ಸಮಸ್ಯೆ ಅನುಭವಿಸಿದರಿಗೆ ಚಾ-ತಿಂಡಿ, ಊಟದ ವ್ಯವಸ್ಥೆಗಾಗಿ ಅವರು ಪರದಾಡುವಂತಾಯಿತು. ಟ್ರಾಫಿಕ್‌ ಪೊಲೀಸರು ಕೂಡ ಮಧ್ಯಾಹ್ನದ ಊಟಕ್ಕಾಗಿ ಸಮಸ್ಯೆ ಎದುರಿಸಿದರು. ಕೆಲವರು ಆಸ್ಪತ್ರೆಯ ಕ್ಯಾಂಟೀನ್‌ಗಳನ್ನು ಆಶ್ರಯಿಸಿದ್ದರು.

ಸಂಸದರು, ಶಾಸಕರ ಮನೆ ವಾಸ್ತವ್ಯ
ಮನೆಯೊಳಗೆ ಇದ್ದು ಕೊರೊನಾ ಮಣಿಸುವಂತೆ ಪ್ರಧಾನಿ ಕರೆಯ ಮೇರೆಗೆ ಸಾರ್ವಜನಿಕರು ಮನೆಯಲ್ಲಿಯೇ ರವಿವಾರ ವಿಶ್ರಾಂತಿ ಪಡೆದು ಜಾಗೃತಿಯ ಸಂದೇಶ ಮೆರೆದರು. ಇದರಂತೆ ಜನಪ್ರತಿನಿಧಿಗಳು ಕೂಡ ಹೊರಗೆ ಬಾರದೆ ಮನೆಯಲ್ಲಿಯೇ ರವಿವಾರ ಕಾಲಕಳೆದರು. ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಉರ್ವ ಸಮೀಪದ ತನ್ನ ಮನೆಯಲ್ಲಿ, ಶಾಸಕ ವೇದವ್ಯಾಸ ಕಾಮತ್‌ ಅವರು ಮಣ್ಣಗುಡ್ಡದಲ್ಲಿರುವ ಮನೆಯಲ್ಲಿ, ಡಾ| ಭರತ್‌ ಶೆಟ್ಟಿ ವೈ. ಅವರು ಕೊಂಚಾಡಿಯ ಮನೆಯಲ್ಲಿ, ಶಾಸಕ ಯು.ಟಿ. ಖಾದರ್‌ ಬೆಂಗಳೂರಿನ ಮನೆಯಲ್ಲಿ ವಿಶ್ರಾಂತಿ ಪಡೆದರು.

ಮಂಗಳೂರಿಗೆ
ಮೊದಲ ಅನುಭವ!
ರಾಜಕೀಯ, ಕೋಮು ಸಂಬಂಧಿತ ಅಥವಾ ಇತರ ಸಂಘಟನೆಗಳ ವಿಚಾರಗಳ ನೆಪದಲ್ಲಿ ನಗರ ಹಲವು ಬಾರಿ ಈ ಹಿಂದೆ ಬಂದ್‌-ಕರ್ಫ್ಯೂ ಕಂಡಿತ್ತು. ಆ ಸಂದರ್ಭ ಪೊಲೀಸ್‌ ಇಲಾಖೆಯೇ ಮಂಗಳೂರಿನ ರಸ್ತೆ, ಗಲ್ಲಿ ಗಲ್ಲಿಗಳಲ್ಲಿ ನಿಂತು ಕಾನೂನು ಸುವ್ಯವಸ್ಥೆ ನೋಡಿಕೊಳ್ಳುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಸಾರ್ವಜನಿಕರೇ ತಮ್ಮ ಇಚ್ಛೆಯಂತೆಯೇ ಆರೋಗ್ಯದ ಸದುದ್ದೇಶದಿಂದ “ಜನತಾ ಕರ್ಫ್ಯೂ’ಗೆ ಓಗೋಟ್ಟು ಮನೆಯಿಂದ ಹೊರಗೆ ಬರಲು ಮನಸ್ಸು ಮಾಡಲಿಲ್ಲ. ಮೊದಲು ಆರೋಗ್ಯ; ಆ ಮೇಲೆ ಎಲ್ಲವೂ ಎಂದು ಮನೆಯಲ್ಲಿಯೇ ವಿಶ್ರಾಂತಿ ಪಡೆದರು.

ಅಗತ್ಯ ಸೇವೆ ಮಾತ್ರ ಲಭ್ಯ
ಅಗತ್ಯ ಸೇವೆಗಳಾದ ವೆನಾÉಕ್‌, ಲೇಡಿಗೋಷನ್‌ ಸೇರಿದಂತೆ ಸರಕಾರಿ- ಖಾಸಗಿ ಆಸ್ಪತ್ರೆಗಳು, ಔಷಧ ಮಳಿಗೆಗಳು, ಅಗ್ನಿಶಾಮಕದಳ ಹಾಗೂ ತುರ್ತು ಸೇವೆಗಳು, ಆ್ಯಂಬುಲೆನ್ಸ್‌, ಪೆಟ್ರೋಲ್‌ ಬಂಕ್‌, ಹಾಲು, ಪತ್ರಿಕೆಗೆ ಅವಕಾಶ ನೀಡಲಾಗಿತ್ತು. ಎಟಿಎಂ ಹಾಗೂ ಸುದ್ದಿ ಮಾಧ್ಯಮ ಕಚೇರಿಗಳು ತೆರೆದಿತ್ತು. ಉಳಿದಂತೆ ಎಲ್ಲ ಅಂಗಡಿ-ಮುಂಗಟ್ಟುಗಳು ಬಾಗಿಲು ಹಾಕಿತ್ತು.

Advertisement

Udayavani is now on Telegram. Click here to join our channel and stay updated with the latest news.

Next