ಮಂಗಳೂರು/ಉಡುಪಿ: ಅಪಾಯಕಾರಿ ಕೋವಿಡ್-19 ಹರಡದಂತೆ ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿರುವ ಜನತಾ ಕರ್ಫ್ಯೂಗೆ ಕರಾವಳಿಯಲ್ಲಿ ಬೆಂಬಲ ವ್ಯಕ್ತವಾಗಿದೆ.
ಮಂಗಳೂರು- ಉಡುಪಿ ನಗರದಲ್ಲಿ ಯಾವುದೇ ಕೆಎಸ್ ಆರ್ ಟಿಸಿ ಮತ್ತು ಖಾಸಗಿ ಬಸ್ ಗಳು ಸಂಚರಿಸುತ್ತಿಲ್ಲ. ಉಭಯ ಜಿಲ್ಲೆಗಳ ಸಾರ್ವಜನಿಕ ಸಂಚಾರ ಸಂಪೂರ್ಣ ಸ್ಥಬ್ಧವಾಗಿದೆ.
ಹೊಟೇಲ್ ಗಳು, ಪಬ್, ಬಾರ್ ಆಂಡ್ ರೆಸ್ಟೋರೆಂಟ್ ಗಳು ಬಂದ್ ಗಳು ಸಂಪೂರ್ಣ ಬಂದ್ ಆಗಿದೆ. ಆಟೋ, ಮ್ಯಾಕ್ಸಿ ಕ್ಯಾಬ್ ಗಳು ಬೀದಿಗಿಳಿದಿಲ್ಲ. ತುರ್ತು ಸೇವೆಗಳನ್ನು ಹೊರತು ಪಡಿಸಿ ನಗರ ಪೂರ್ತಿ ಬಂದ್ ಆಗಿದೆ. ಇಂದು ದಿನ ಪೂರ್ತಿ ಮೀನು ಮಾರುಕಟ್ಟೆ, ತರಕಾರಿ ಮಾರ್ಕೇಟ್ ಬಂದ್ ಆಗಿರಲಿದೆ. ಮಂಗಳೂರಿನಲ್ಲಿ ಬೀಚ್ ಸೇರಿದಂತೆ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ ವಿಧಿಸಲಾಗಿದೆ. ಮೀನುಗಾರಿಕಾ ಬೋಟ್ ಗಳು ಕೂಡಾ ಕಡಲಿಗಿಳಿದಿಲ್ಲ.
ಹುಬ್ಬಳ್ಳಿ ಕಡೆಯಿಂದ ಮಂಗಳೂರಿಗೆ ಬಸ್ನಲ್ಲಿ ಬೆಳಗ್ಗೆ ಆಗಮಿಸಿದ ಕೆಲವು ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಬಾಕಿಯಾಗಿದ್ದಾರೆ
ಕೋವಿಡ್-19 ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸುವ ಕಾರ್ಯವನ್ನು ಬಜಪೆ ಪಂಚಾಯತ್ ಮಾಡಿದ್ದು ಮೈಕ್ ಮುಖಾಂತರ ಸೋಂಕು ಹರಡುವುದನ್ನು ತಡೆಗಟ್ಟಲು ಸೂಚಿಸಲಾಯಿತು. ಆದಿತ್ಯವಾರ ಮತ್ತು ಸೋಮವಾರದ ಸಂತೆ ರದ್ದಾಗಿರುವ ಬಗ್ಗೆ ಜನರಿಗೆ ತಿಳಿಸಲಾಯಿತು.
ಜನತಾ ಕರ್ಫ್ಯೂಗೆ ಬೆಂಬಲ ನೀಡಿರುವ ಕಡಬ ಪೇಟೆ ಸಂಪೂರ್ಣ ಬಂದ್ ಆಗಿದೆ. ರವಿವಾರ ಬೆಳಗ್ಗಿನಿಂದಲೆ ಕಡಬ ಸುತ್ತಮುತ್ತಲಿನ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ರಿಕ್ಷಾ, ಕಾರು, ಬಸ್ ಸಹಿತ ಯಾವುದೇ ವಾಹನಗಳು ರಸ್ತೆಗಿಳಿಯದೆ ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ. ರವಿವಾರ ಕಡಬದಲ್ಲಿ ವಾರದ ಸಂತೆಯ ದಿನವಾಗಿದ್ದು, ಜನ ಜಂಗುಳಿಯಿಂದ ಇರುತ್ತಿದ್ದ ಕಡಬದ ಸಂತೇಕಟ್ಟೆ ಇಂದು ಭಣಗುಡುತ್ತಿತ್ತು.
ಮಡಿಕೇರಿ ಸಂಪರ್ಕಿಸುವ ಮಾಣಿ- ಮೈಸೂರು ಹೆದ್ದಾರಿ ಖಾಲಿ ಖಾಲಿಯಾಗಿದೆ. ರಸ್ತೆಯಲ್ಲಿ ವಾಹನ ಓಡಾಟವಿಲ್ಲ.
ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟುವಿನಿಂದ ಕೇರಳ ತಲಪಾಡಿ ಗಡಿ ಪ್ರದೇಶವಾದ ತಲಪಾಡಿವರೆಗೆ ಬಿಕೋ ಎನ್ನುತ್ತಿರುವ ಹೆದ್ದಾರಿಗಳು ಅಂಗಡಿ ಮುಗ್ಗಟ್ಟು ಸಂಪೂರ್ಣ ಬಂದ್ ಆಗಿವೆ.
ಉಡುಪಿ ನಗರದಲ್ಲೂ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದೆ. ರವಿವಾರ ಬೆಳಗ್ಗಿನಿಂದಲೆ ಕಾಪು ಸುತ್ತಮುತ್ತಲಿನ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ರಿಕ್ಷಾ, ಕಾರು, ಬಸ್ ಸಹಿತ ಯಾವುದೇ ವಾಹನಗಳು ರಸ್ತೆಗಿಳಿಯದೆ ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿವೆ.
ಉಡುಪಿ, ಕುಂದಾಪುರ, ಕಾರ್ಕಳದಲ್ಲೂ ಜನತಾ ಕರ್ಫ್ಯೂ ಪಾಲಿಸಲಾಗುತ್ತುದೆ. ರಸ್ತೆಗಳು ಖಾಲಿ ಖಾಲಿಯಾಗಿ ಬಣಗುಡುತ್ತಿದೆ.
ಗ್ರಾಮೀಣ ಭಾಗದಲ್ಲಿ ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಕುಂದಾಪುರದ ಬಿದ್ಕಲ್‌ಕಟ್ಟೆ, ಹುಣ್ಸೆಮಕ್ಕಿ, ಕೆದೂರು, ಉಳ್ತೂರು, ತೆಕ್ಕಟ್ಟೆ, ಕುಂಭಾಸಿ ಭಾಗಗಳಲ್ಲಿ ಜನತಾ ಕರ್ಫ್ಯೂ ಆಚರಿಸಲು ಸ್ವಯಂಪ್ರೇರಿತವಾಗಿ ಅಟೋ ಚಾಲಕರು , ಅಂಗಡಿ ಮಾಲಕರು ಸೇರಿದಂತೆ ಸಾಮೂಹಿಕವಾಗಿ ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಸಂಪೂರ್ಣ ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಗಿದ್ದು, ರಾ.ಹೆ.66 ರಲ್ಲಿ ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿತ್ತು.