Advertisement
ಕುಂದಾಪುರ ಭಾಗದ ಬಹುತೇಕ ಎಲ್ಲ ಅಂಗಡಿ – ಮುಂಗಟ್ಟುಗಳು ರವಿವಾರ ಮುಚ್ಚುವ ಸಾಧ್ಯತೆಯಿದೆ. ಹೊಟೇಲ್‌ಗಳು, ಮೀನು ಮಾರುಕಟ್ಟೆಗಳು ಕೂಡ ಬಂದ್ ಆಗಿರಲಿವೆ. ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ಗಳು, ಖಾಸಗಿ ಬಸ್‌ಗಳು, ಕಾರು, ರಿಕ್ಷಾ ಸಹಿತ ಹೆಚ್ಚಿನೆಲ್ಲ ವಾಹನಗಳು ಕೂಡ ರಸ್ತೆಗಿಳಿಯಲ್ಲ.
ಜನತಾ ಕರ್ಫ್ಯೂಗೆ ಭಾರತೀಯ ವೈದ್ಯಕೀಯ ಸಂಘಟನೆ (ಐಎಂಎ) ಕುಂದಾಪುರ ತಾಲೂಕು ಸಮಿತಿ ಕೂಡ ಬೆಂಬಲ ವ್ಯಕ್ತಪಡಿಸಿದೆ. ಆದರೆ ತುರ್ತು ಪ್ರಕರಣಗಳನ್ನು ಎಲ್ಲ ಆಸ್ಪತ್ರೆಗಳಲ್ಲಿ ದಾಖಲು ಮಾಡಿಕೊಳ್ಳಲಾಗುವುದು. ಆದರೆ ಒಪಿಡಿ ವಿಭಾಗ ತೆರೆದಿರುವುದಿಲ್ಲ. ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳನ್ನು ವೈದ್ಯರು ಬೆಳಗ್ಗೆ 6 – 7 ಗಂಟೆಯೊಳಗೆ ತಪಾಸಣೆ ಮಾಡುತ್ತೇವೆ. ಆ ಬಳಿಕ ಸಂಜೆ ಅನಂತರ ತಪಾಸಣೆ ನಡೆಸಲಾಗುವುದು ಎಂದು ಕುಂದಾಪುರದ ಭಾರತೀಯ ವೈದ್ಯಕೀಯ ಸಂಘಟನೆಯ ಅಧ್ಯಕ್ಷೆ ಶ್ರೀದೇವಿ ಕಟ್ಟೆ ತಿಳಿಸಿದ್ದಾರೆ. ಮೀನಿಗೆ ಭಾರೀ ಬೇಡಿಕೆ
ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ರವಿವಾರ ಮೀನು ಮಾರುಕಟ್ಟೆಗಳಲ್ಲಿ ಮೀನು ಮಾರಾಟ ಇಲ್ಲದಿರುವ ಕಾರಣ ಶನಿವಾರವೇ ಮೀನು ಖರೀದಿಗೆ ಜನ ಮುಗಿ ಬಿದ್ದದ್ದು ಕಂಡುಬಂತು. ಕುಂದಾಪುರದ ಮೀನು ಮಾರುಕಟ್ಟೆಗಳಲ್ಲಿ ಎಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದರು.
Related Articles
ದಿನಸಿ ವಸ್ತುಗಳು ರವಿವಾರ ಸಿಗದ ಹಿನ್ನೆಲೆಯಲ್ಲಿ ಹೆಚ್ಚಿನೆಲ್ಲ ದಿನಸಿ ಅಂಗಡಿ, ತರಕಾರಿ, ಹಣ್ಣುಗಳ ಅಂಗಡಿಗಳಲ್ಲಿ ಶನಿವಾರವೇ ಹೆಚ್ಚಿನ ಸಂಖ್ಯೆಯಲ್ಲಿ ಜನ ಖರೀದಿಸುತ್ತಿದ್ದರು. ಅದರಲ್ಲೂ ಸಂಜೆ ವೇಳೆ ಅಂತೂ ಜನ ದಿನಬಳಕೆಯ ಸಾಮಗ್ರಿಗಳನ್ನು ಖರೀದಿಸಲು ಅಂಗಡಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಕುಂದಾಪುರದ ವಾರದ ಸಂತೆ ಇಲ್ಲದಿರುವ ಕಾರಣ ಕೂಡ ಅಂಗಡಿಗಳಿಗೆ ಉತ್ತಮ ವ್ಯಾಪಾರ ಇತ್ತು ಎನ್ನಲಾಗಿದೆ.
Advertisement
ಏನೆಲ್ಲ ಇರುತ್ತೆ?ಮೆಡಿಕಲ್ ಮಳಿಗೆಗಳು, ಹಾಲಿನ ಅಂಗಡಿಗಳು, ದಿನಪತ್ರಿಕೆ ಮಾರಾಟ ಮಳಿಗೆ, ಆಸ್ಪತ್ರೆಗಳು, ಕ್ಲಿನಿಕ್, ಆ್ಯಂಬುಲೆನ್ಸ್. ಮೀನುಗಾರಿಕೆಯೂ ಇಲ್ಲ
ಜನತಾ ಕರ್ಫ್ಯೂಗೆ ಎಲ್ಲ ಮೀನುಗಾರರಿಂದಲೂ ಬೆಂಬಲ ವ್ಯಕ್ತವಾಗಿದ್ದು, ರವಿವಾರ ಎಲ್ಲ ಬೋಟು, ದೋಣಿಗಳು ಕಡಲಿಗಿಳಿಯದಿರಲು ನಿರ್ಧರಿಸಿವೆ. ರವಿವಾರ ಗಂಗೊಳ್ಳಿ, ಮರವಂತೆ, ಕೊಡೇರಿ ಸಹಿತ ಎಲ್ಲ ಕಡೆಗಳಲ್ಲಿ ಯಾವುದೇ ಮೀನುಗಾರಿಕಾ ಚಟುವಟಿಕೆ ನಡೆಯುವುದಿಲ್ಲ ಎಂದು ಮೀನುಗಾರ ಮುಖಂಡರು ತಿಳಿಸಿದ್ದಾರೆ. ಗಂಗೊಳ್ಳಿಯಲ್ಲಿ ಶನಿವಾರವೇ ಹೆಚ್ಚಿನ ಬೋಟು, ದೋಣಿಗಳು ದಡದಲ್ಲಿ ಲಂಗರು ಹಾಕಿದ್ದವು. ಅಂಗಡಿ ಬಂದ್
ರವಿವಾರ ಜನತಾ ಕರ್ಫ್ಯೂಗೆ ಕುಂದಾಪುರ, ಗಂಗೊಳ್ಳಿ, ಶಂಕರನಾರಾಯಣ, ಸಿದ್ದಾಪುರ, ಬೈಂದೂರು ಸಹಿತ ಎಲ್ಲ ಕಡೆಗಳ ಅಂಗಡಿಗಳ ವ್ಯಾಪಾರಸ್ಥರು ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಯಾವುದೇ ಅಂಗಡಿಗಳು ತೆರೆದಿರುವುದಿಲ್ಲ.
-ವಿಟ್ಟಲ ಶೆಣೈ ಗಂಗೊಳ್ಳಿ , ಜಿಲ್ಲಾ ವರ್ತಕರ ಸಂಘದ ಸದಸ್ಯ