Advertisement

Politics: ಆಡಳಿತ ಯಂತ್ರ ಕುಸಿದಿರುವುದಕ್ಕೆ ಜನಸ್ಪಂದನ ನಿದರ್ಶನ: ಆರ್‌. ಅಶೋಕ್‌

11:04 PM Feb 08, 2024 | Team Udayavani |

ಬೆಂಗಳೂರು: ವಿಧಾನಸೌಧದ ಮುಂದೆ ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮ ನಡೆಸುವುದು ಮಹಾ ಸಾಧನೆ ಅಲ್ಲ. ಇದು ರಾಜ್ಯದಲ್ಲಿ ಸಂಪೂರ್ಣವಾಗಿ ಕುಸಿದಿರುವ ಆಡಳಿತ ಯಂತ್ರಕ್ಕೆ ಜೀವಂತ ನಿದರ್ಶನ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌ ಟೀಕಿಸಿದ್ಧಾರೆ.

Advertisement

ಈ ಕುರಿತು ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿರುವ ಅವರು, ರಾಜ್ಯದಲ್ಲಿ 34 ಸಂಪುಟ ಸಚಿವರಿದ್ಧಾರೆ. ಪ್ರತಿ ಜಿಲ್ಲೆಗೆ ಒಬ್ಬ ಉಸ್ತುವಾರಿ ಸಚಿವರಿದ್ಧಾರೆ. ಸಂಪುಟ ದರ್ಜೆ ಸ್ಥಾನಮಾನದ 34 ನಿಗಮ ಮಂಡಳಿಗಳ ಅಧ್ಯಕ್ಷರಿದ್ಧಾರೆ. ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒಗಳು ಇದ್ಧಾರೆ. ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯಲ್ಲಿ ಜಿಲ್ಲೆ, ತಾಲೂಕು ಮಟ್ಟದಲ್ಲಿ ಪಂಚಾಯತ್‌ಗಳು ಇವೆ. ಇಷ್ಟೆಲ್ಲ ಇದ್ದು ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಒಬ್ಬ ಬಡ ವ್ಯಕ್ತಿ ತನ್ನ ಸಮಸ್ಯೆ ಬಗೆಹರಿಸಿಕೊಳ್ಳಲು ದೂರದ ಊರುಗಳಿಂದ ಬಸ್ಸು, ರೈಲು ಚಾರ್ಜ್‌ ಕೊಟ್ಟು ಅರ್ಜಿ ಹಿಡಿದುಕೊಂಡು ವಿಧಾನಸೌಧಕ್ಕೆ ಬಂದು ಇಡೀ ದಿನ ಕಾದು ಸಿಎಂ ಮುಂದೆ ಕೈಚಾಚಬೇಕಾದ ಪರಿಸ್ಥಿತಿ ಇದೆ ಎಂದರೆ ಅದು ನಿಮ್ಮ ಸರಕಾರದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ. ಅರ್ಜಿ ಹಿಡಿದು ಕೈಚಾಚುವ ಜನರ ಗೋಳನ್ನು ನಿಮ್ಮ ಬಿಟ್ಟಿ ಪ್ರಚಾರದ ಗೀಳಿಗೆ ಬಳಸಿಕೊಳ್ಳುತ್ತಿದ್ದೀರಲ್ಲ ಸಿಎಂ ಸಿದ್ದರಾಮಯ್ಯ ಅವರೇ, ನಿಮಗೆ ನಿಜಕ್ಕೂ ನಾಚಿಕೆಯಾಗಬೇಕು ಎಂದು ಜರಿದಿದ್ಧಾರೆ.

ಜನಸ್ಪಂದನ ಅಂತ ಪ್ರಚಾರಕ್ಕಾಗಿ ನಾಟಕ ಆಡುವ ಬದಲು ಮುಖ್ಯಮಂತ್ರಿಗಳು ತಮ್ಮ ಉಸ್ತುವಾರಿ ಮಂತ್ರಿಗಳಿಗೆ ಆಯಾ ಜಿಲ್ಲಾ ಕೇಂದ್ರಗಳಿಗೆ, ತಾಲೂಕು ಕೇಂದ್ರಗಳಿಗೆ ಹೋಗಿ ಜನರ ಸಮಸ್ಯೆ ಆಲಿಸುವಂತೆ ಸೂಚನೆ ನೀಡಬೇಕು. ಶಾಸಕರು ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒ ಸಮ್ಮುಖದಲ್ಲಿ ಸ್ಥಳೀಯ ಮಟ್ಟದಲ್ಲೇ ಜನತಾ ದರ್ಶನ ನಡೆಸಿ ಅಲ್ಲೇ ಜನರ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ಧಾರೆ.

Advertisement

Udayavani is now on Telegram. Click here to join our channel and stay updated with the latest news.

Next