Advertisement

ಜನಾರ್ದನ ರೆಡ್ಡಿ ಹೆಗಲಿಂದ ಇ.ಡಿ.ಗೆ ಗುರಿ

06:00 AM Nov 12, 2018 | Team Udayavani |

ಬೆಂಗಳೂರು: ಕೇಂದ್ರದ ಪ್ರತಿಷ್ಠಿತ ಹಾಗೂ ಸ್ವತಂತ್ರ ತನಿಖಾ ಸಂಸ್ಥೆ  ಜಾರಿ ನಿರ್ದೇಶನಾಲಯ (ಇ.ಡಿ) ವಿಶ್ವಾಸಾರ್ಹತೆಯನ್ನು ಬೆಟ್ಟು ಮಾಡಲು ರಾಜ್ಯ ಸರ್ಕಾರ ಜನಾರ್ದನ ರೆಡ್ಡಿ ಪ್ರಕರಣವನ್ನು ಅಸ್ತ್ರವನ್ನಾಗಿ ಬಳಸಿಕೊಂಡಿದೆಯೇ?

Advertisement

ಕಳೆದ ಕೆಲ ದಿನಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಕೆಲವು ಪ್ರಶ್ನೆಗಳಂತೂ ಹುಟ್ಟಿಕೊಂಡಿವೆ. ಇ.ಡಿ ಹೆಸರಿನಲ್ಲೇ ಸಮ್ಮಿಶ್ರ ಸರ್ಕಾರ ಕೇಂದ್ರ ಸರ್ಕಾರಕ್ಕೆ ಬಾಣ ಬಿಟ್ಟಿದೆಯೇ? ರಾಜಕಾರಣದ ಈ ತಂತ್ರಕ್ಕೆ ಜನಾರ್ದನ ರೆಡ್ಡಿ ಕೇವಲ ಬಿಲ್ಲಾಗಿ ಬಳಕೆಯಾಗಿದ್ದಾರೆಯೇ? ಹೆಚ್ಚಾಗಿ ಕಾಂಗ್ರೆಸ್‌ ನಾಯಕರತ್ತ ಇ.ಡಿ ಬ್ರಹ್ಮಾಸ್ತ್ರವನ್ನು ಕೇಂದ್ರ ಸರ್ಕಾರ ಎಸೆಯುತ್ತಿದೆ ಎಂಬ ಚರ್ಚೆಯ ಸಂದರ್ಭದಲ್ಲೇ ಇ.ಡಿಯನ್ನು ರಾಜಕೀಯವಾಗಿ ಬಳಕೆ ಮಾಡಲಾಗುತ್ತಿದೆ ಎಂಬುದನ್ನು ಸಾಬೀತುಪಡಿಸಲು ಈ ಪ್ರಹಸನವೇ? ಇತ್ಯಾದಿ.

ಜನಾರ್ದನ ರೆಡ್ಡಿ ಅವರ ಹುಡುಕಾಟ, ಗಂಟೆಗಟ್ಟಲೇ ವಿಚಾರಣೆ, ಕೊನೆಗೆ ಜೈಲಿಗೆ ರವಾನೆ ಮೂಲಕ ವಾರವಿಡೀ ವ್ಯಾಪಕ ಪ್ರಚಾರ ಪಡೆದ ಈ ಪ್ರಕರಣ ಅಂತಹ ಪ್ರಶ್ನೆಗಳನ್ನು ಎಬ್ಬಿಸಿದೆ. ರೆಡ್ಡಿ ಪ್ರಕರಣ ನಿಜ ಇರಬಹುದು, ಬಿಜೆಪಿಗೆ ರಾಜಕೀಯ  ಪ್ರತ್ಯಸ್ತ್ರ ಇರಬಹುದು. ಆದರೆ, ಇ.ಡಿಯನ್ನು ಒಂದು ವೇಳೆ ಜನಾರ್ದನ ರೆಡ್ಡಿ ಬಳಸಿ ಆರೋಪಿಗೆ ಸಹಾಯ ಮಾಡಿರುವುದು ಹೌದಾದರೆ, ಇ.ಡಿಯ ಸ್ವಾಯತ್ತೆಗೇನು ಅರ್ಥ? ಹಾಗಾದರೆ, ಸಿಬಿಐ ತನ್ನ ಹೆಸರಿಗೆ ರಾಜಕೀಯ ಪ್ರೇರಿತ ಎಂಬ ಕಳಂಕ ಮೆತಿ ¤ಸಿಕೊಂಡಿರುವಂತೆ ಇ.ಡಿಗೂ ಆ ಕಳಂಕ ಮೆತ್ತಬಹುದೇ ಅಥವಾ ಮೆತ್ತಿಸಲು ಯತ್ನವೇ ಎಂಬುದು ಮಾತ್ರ ಚರ್ಚಾರ್ಹ ವಿಷಯ.

ಇ.ಡಿ ದಾಳಿಗಳು ಇತ್ತೀಚೆಗಿನ ರಾಜಕಾರಣದಲ್ಲಿ ಸದಾ ಸುದ್ದಿ ಮಾಡುತ್ತಿವೆ. ಒಂದು ಕಾಲದಲ್ಲಿ ಐಟಿ ದಾಳಿ ಎಂದರೆ ಬಹುಮಂದಿ, ಅದರಲ್ಲೂ ರಾಜಕಾರಣಿಗಳು ಬೆಚ್ಚಿ ಬೀಳುತ್ತಿದ್ದರು. ಆದರೆ, ಕಳೆದ ಕೆಲ ವರ್ಷಗಳಿಂದ ಜಾರಿ ನಿರ್ದೇಶನಾಲಯದ ದಾಳಿ ಎಂದರೆ ದೊಡ್ಡ ಸುದ್ದಿಯಾಗುತ್ತಿರುವುದು ಕಂಡುಬಂದಿದೆ.  ರಾಜ್ಯದಲ್ಲಿ ಇ.ಡಿ ಬ್ರಹ್ಮಾಸ್ತ್ರದ ಬಗ್ಗೆ ಹೆಚ್ಚು ಪರಿಚಿತವಾದುದು ಸಚಿವ ಡಿ.ಕೆ. ಶಿವಕುಮಾರ್‌ ಅವರ ವಿರುದ್ಧ ಐಟಿ ದಾಳಿ ಮತ್ತು ಜಾರಿ ನಿರ್ದೇಶನಾಲಯ ನೀಡಿದ ನೊಟೀಸ್‌ ಬಳಿಕ. ರಾಜ್ಯದ ಸಮ್ಮಿಶ್ರ ಸರ್ಕಾರ ಗಟ್ಟಿಯಾಗಿರಲು ಹೆಬ್ಬಂಡೆಯಂತೆ ನಿಂತಿರುವ ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನು ಇ.ಡಿ ಮಂದಿ ಇನ್ನೇನು ಬಂಧಿಸುತ್ತಾರೆ ಎಂಬಷ್ಟು ಮಟ್ಟಿಗೆ ಎರಡು ಬಾರಿ ಭಾರೀ ಸದ್ದಾಗಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡರು ಇ.ಡಿಯನ್ನು ರಾಜಕೀಯ ಅಸ್ತ್ರವಾಗಿ ಬಳಸಲಾಗುತ್ತಿದೆ ಎಂಬ ಬಲವಾದ ಆರೋಪಗಳನ್ನು ಕೇಂದ್ರ ಸರ್ಕಾರದತ್ತ ಮಾಡಿದ್ದರು.

ಈಗ ಇ.ಡಿ ಅಸ್ತ್ರದ ಬಗ್ಗೆ ಹೊಸ ವ್ಯಾಖ್ಯಾನವನ್ನು ಇದೇ ಸಮ್ಮಿಶ್ರ ಸರ್ಕಾರ ಜನಾರ್ದನ ರೆಡ್ಡಿ ಮೂಲಕ ಬರೆಸುವಂತಿದೆ. ಆ್ಯಂಬಿಡೆಂಟ್‌ ವಂಚನೆ ಪ್ರಕರಣದ ಪ್ರಮುಖ ಆರೋಪಿ ಸೈಯ್ಯದ ಅಹಮದ್‌ ಫ‌ರೀದ್‌ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆಯಲ್ಲಿ ಸಹಾಯ ಮಾಡುವುದಾಗಿ 20 ಕೋಟಿ ರೂ.ಗಳಿಗೆ ಮಾತುಕತೆ ನಡೆಸಿ ಹಣದ ಬದಲಿಗೆ 57 ಕೆ.ಜಿ. ಚಿನ್ನ ಪಡೆದ ಗಂಭೀರ ಆರೋಪವನ್ನು ರೆಡ್ಡಿ ಮೇಲೆ ಸಿಸಿಬಿ ಹೊರಿಸಿದೆ. ಇ.ಡಿ ಅಧಿಕಾರಿಗಳಿಗೂ ಜನಾರ್ದನ ರೆಡ್ಡಿ ಅವರಿಗೂ ನಿಜವಾಗಿ ಸಂಪರ್ಕ ಇದೆಯೇ ಎಂಬ ಬಗ್ಗೆ ಸಿಸಿಬಿ ತನಿಖೆ ಹೇಳಬೇಕಿದೆ. ಆದರೆ, ಅನೇಕ ಪ್ರಕರಣಗಳಲ್ಲಿ ತನಿಖಾ ಸಂಸ್ಥೆಗಳ ಅಧಿಕಾರಿಗಳೇ ಶಾಮೀಲಾಗಿರುವುದು ಸಹಜ ಎಂಬಷ್ಟು ಗೊತ್ತಿರುವಾಗ, ಈಗ ಇ.ಡಿ ಅಧಿಕಾರಿಗಳೂ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆಯೇ ಎಂಬ ಪ್ರಶ್ನೆ ಬಾರದಿರದು. ಅಂತೂ ಆ ಪ್ರಶ್ನೆ ಬರುವಂತೆ ಮಾಡುವುದರಲ್ಲಿ ಸಮ್ಮಿಶ್ರ ಸರ್ಕಾರ ಸಫ‌ಲವಾದಂತಿದೆ.

Advertisement

ಇನ್ನು ಇ.ಡಿ ಕಾಂಗ್ರೆಸ್‌ ನಾಯಕರತ್ತ ಕಣ್ಣು ಹಾಯಿಸಿದರೆ, ಬಿಜೆಪಿ ಮಾಜಿ ಸಚಿವರು ಇ.ಡಿ ಮೂಲಕ ಆರೋಪಿತನಿಗೆ ಸಹಾಯಮಾಡಲು ಹೋಗಿ ಜೈಲು ಪಾಲಾದ ಉದಾಹರಣೆ ನೀಡಬಹುದೇನೋ. ಡಿ.ಕೆ. ಶಿವಕುಮಾರ್‌ ಅವರಂತಹ ಪ್ರಮುಖ ನಾಯಕರು ತಮ್ಮತ್ತ ಇ.ಡಿ ದಾಳಿ ನಡೆದರೆ, ಅದೊಂದು ರಾಜಕೀಯ ಪ್ರೇರಿತ ಎನ್ನುವುದಕ್ಕೆ, ಮಾತು ತೇಲಿಸುವುದಕ್ಕೆ ಇದು ಉದಾಹರಣೆ ಆಗಲೂಬಹುದು. ಜನಾರ್ದನ ರೆಡ್ಡಿ ಅವರ ಬೆನ್ನಹಿಂದೆ ಗಣಿ ಪ್ರಕರಣದಂತಹ ಹಲವು ಕಪ್ಪು ಚುಕ್ಕೆಗಳಿವೆ. ಹಾಗಾಗಿ ಈ ಪ್ರಕರಣದಲ್ಲಿ ಅವರ ವಿರುದ್ಧ ಆರೋಪ ಸಾಬೀತಾಗಬಹುದು, ಸಾಬೀತಾಗದೇ ಇರಬಹುದು. ಆದರೆ, ಸ್ವತಂತ್ರ ತನಿಖಾ ಸಂಸ್ಥೆಗಳ ಹೆಸರುಗಳು  ರಾಜಕೀಯವಾಗಿ ಬಳಕೆಯಾಗಿ ಅನರ್ಥಗಳಾಗುತ್ತಿರುವುದು ಪ್ರಜಾತಾಂತ್ರಿಕ ವ್ಯವಸ್ಥೆಗೆ ಮುಜುಗರ ತರುವಂತಹುವುಗಳು.

– ನವೀನ್‌ ಅಮ್ಮೆಂಬಳ

Advertisement

Udayavani is now on Telegram. Click here to join our channel and stay updated with the latest news.

Next