Advertisement

BJP ವಿರುದ್ಧ ಜನಾರ್ದನ ರೆಡ್ಡಿ ಬೇಸರ

08:45 PM Jul 12, 2023 | Team Udayavani |

ಬೆಂಗಳೂರು: ಅಂಜನಾದ್ರಿ ಅಭಿವೃದ್ಧಿ ವಿಚಾರದಲ್ಲಿ ಹಿಂದಿನ ಬಿಜೆಪಿ ಸರಕಾರ ಜನರ ಗಮನ ಸೆಳೆಯಲು ಸೀಮಿತವಾಗಿತ್ತೇ ಹೊರತು ನಯಾ ಪೈಸೆಯನ್ನೂ ಕೊಡಲಿಲ್ಲ ಎಂದು ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಶಾಸಕ ಗಾಲಿ ಜನಾರ್ದನ ರೆಡ್ಡಿ ಬೇಸರ ವ್ಯಕ್ತಪಡಿಸಿದರು.

Advertisement

ರಾಜ್ಯಪಾಲರ ಭಾಷಣದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗಂಗಾವತಿ ಅಂಜನಾದ್ರಿ ಬೆಟ್ಟದಲ್ಲಿ ಹನುಮ ಜನಿಸಿದ ಎಂಬುದು ಪುರಾಣ ಪ್ರತೀತಿ. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಅಯೋಧ್ಯೆ ಮಾದರಿಯಲ್ಲಿ ಅಂಜನಾದ್ರಿ ಅಭಿವೃದ್ಧಿ ಮಾಡಲಾಗುವುದು ಎಂದು ಘೋಷಿಸಿ 120 ಕೋಟಿ ರೂ. ನಿಗದಿ ಮಾಡಿದ್ದರು. ಆದರೆ ಅದರಲ್ಲಿ ನಯಾ ಪೈಸೆಯನ್ನೂ ಕೊಡಲಿಲ್ಲ.

ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರಕಾರಗಳಿವೆ ಎಂದು ಜನ ಇವರ ಮಾತನ್ನು ನಂಬಿದರು. ನನ್ನನ್ನು ಗಂಗಾವತಿಯಲ್ಲಿ ಸೋಲಿಸುವುದಕ್ಕಾಗಿ ಈ ವಿಚಾರವನ್ನು ಭಾವನಾತ್ಮಕವಾಗಿ ಬಳಸಿದರು. ಬೇರೆ ಬೇರೆ ರಾಜ್ಯದ ಮುಖ್ಯಮಂತ್ರಿಗಳು ಬಂದು ಈ ಬಗ್ಗೆ ಗಮನ ಸೆಳೆದರು. ಆದರೆ ವಾಸ್ತವದಲ್ಲಿ ಯಾವ ಕೆಲಸವೂ ಆಗಿಲ್ಲ. ಹೀಗಾಗಿ ಈಗಿನ ಸರಕಾರ ಅಂಜನಾದ್ರಿ ಅಭಿವೃದ್ಧಿಗೆ ಸೂಕ್ತ ಅನುದಾನ ಬಿಡುಗಡೆ ಮಾಡಬೇಕು. ಜತೆಗೆ ಬಳ್ಳಾರಿ ವಿಮಾನ ನಿಲ್ದಾಣ ಅಭಿವೃದ್ಧಿಗೂ ಸರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಗ್ಯಾರಂಟಿಗೆ ಷರತ್ತು ಬೇಡ
ಚುನಾವಣೆಗೆ ಮುನ್ನ ನೀಡಿದ ಐದು ಗ್ಯಾರಂಟಿಗಳನ್ನು ಪ್ರಾಮಾಣಿಕವಾಗಿ ಪಾಲಿಸುವ ಪ್ರಯತ್ನವನ್ನು ಸರಕಾರ ಮಾಡಬೇಕು. ಜನರ ಪ್ರೀತಿ ಗಳಿಸಿ ನೀವು ಅಧಿಕಾರಕ್ಕೆ ಬಂದಿದ್ದೀರಿ. ಹೀಗಾಗಿ ಗ್ಯಾರಂಟಿಗೆ ಷರತ್ತುಗಳನ್ನು ವಿಧಿಸಬೇಡಿ. ನಮ್ಮ ಪಕ್ಷ ಕಲ್ಯಾಣ ಕರ್ನಾಟಕ ಭಾಗದಲ್ಲಿ 10-15 ಸ್ಥಾನಗಳಲ್ಲಿ ಗೆಲ್ಲುವುದರಲ್ಲಿತ್ತು. ಆದರೆ ಗ್ಯಾರಂಟಿ ಕಾರಣದಿಂದ ನಾನೊಬ್ಬನೇ ಗೆಲ್ಲುವಂತಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next