Advertisement

102 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸಜ್ಜಾದ ರೆಡ್ಡಿ; ಜ.16ಕ್ಕೆ 25 ಅಭ್ಯರ್ಥಿಗಳ ಘೋಷಣೆ

11:18 PM Jan 01, 2023 | Team Udayavani |

ಬಳ್ಳಾರಿ: ಬಿಜೆಪಿ ಮೇಲೆ ಮುನಿಸಿಕೊಂಡು ಪ್ರತ್ಯೇಕ ರಾಜಕೀಯ ಪಕ್ಷ ಘೋಷಿಸಿರುವ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸುಮಾರು 102 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದ್ದಾರೆ.

Advertisement

ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಗಣಿನಾಡು ಬಳ್ಳಾರಿ, ದಕ್ಷಿಣ ಭಾರತದಲ್ಲೇ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಅ ಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜನಾರ್ದನ ರೆಡ್ಡಿ ಈಗ ಬಿಜೆಪಿ ಮೇಲೆಯೇ ಮುನಿಸಿಕೊಂಡು “ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಎಂಬ ಹೊಸ ರಾಜಕೀಯ ಪಕ್ಷವನ್ನು ಆರಂಭಿಸಿದ್ದಾರೆ. ಅವರ ಪತ್ನಿ ಲಕ್ಷ್ಮೀಅರುಣಾ ಅವರು ತಾಲೂಕಿನ ಗಡಿಭಾಗದ ಬೆಣಕಲ್ಲು ಗ್ರಾಮದಲ್ಲಿ ಕುರುಬರ ಮನೆಯಲ್ಲಿ ಉಡಿ ತುಂಬಿಸಿಕೊಂಡು, ಪಕ್ಷದ ಬಾವುಟ ಬಿಡುಗಡೆಗೊಳಿಸುವ ಮೂಲಕ ಪ್ರಚಾರಕ್ಕೆ ಅ ಧಿಕೃತ ಚಾಲನೆ ನೀಡಿದ್ದಾರೆ. ಅಲ್ಲದೆ ಜ.3ರಂದು ಗಂಗಾವತಿಗೆ ಆಗಮಿಸುವ ಜನಾರ್ದನ ರೆಡ್ಡಿ ಕೂಡ ಬೂದು ಕ್ರಾಸ್‌ನಿಂದ 10 ಸಾವಿರ ಜನರೊಂದಿಗೆ ಬೃಹತ್‌ ಮೆರವಣಿಗೆ ನಡೆಸಿ ಅದ್ದೂರಿ ಪ್ರಚಾರ ಕೈಗೊಳ್ಳಲಿದ್ದಾರೆ.

ಒಎಂಸಿ ಎಂಡಿ ಕಣಕ್ಕೆ
ಜನಾರ್ದನ ರೆಡ್ಡಿ ಗಂಗಾವತಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಅವರ ಆಪ್ತಮಿತ್ರ, ಒಎಂಸಿ ಎಂಡಿ ಬಿ.ವಿ. ಶ್ರೀನಿವಾಸ ರೆಡ್ಡಿ ಕೂಡ ಸ್ಪರ್ಧಿಸಲಿದ್ದು, ಕೊಪ್ಪಳ, ರಾಯಚೂರು, ಕಲಬುರಗಿಯ ಸೇಡಂ ಪೈಕಿ ಒಂದು ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಉತ್ತರ ಕರ್ನಾಟಕದ 64 ಮತ್ತು ದಕ್ಷಿಣ ಕರ್ನಾಟಕದ 38 ಕ್ಷೇತ್ರಗಳಲ್ಲಿ ಕೆಆರ್‌ಪಿ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಜ.16ರಂದು ಉತ್ತರ ಕರ್ನಾಟಕದ 25 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ರೆಡ್ಡಿ ಘೋಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎ, ಬಿ ಕೆಟಗರಿ ಕ್ಷೇತ್ರಗಳು
ಜನಾರ್ದನ ರೆಡ್ಡಿ ತಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ 102 ಕ್ಷೇತ್ರಗಳನ್ನು ಎ ಮತ್ತು ಬಿ ಎಂಬ ಎರಡು ಕೆಟಗರಿಗಳನ್ನಾಗಿ ವಿಂಗಡಿಸಿದ್ದಾರೆ. ಎ ಕೆಟಗರಿಯ 50 ಗೆಲ್ಲುವ ಕ್ಷೇತ್ರಗಳು, ಬಿ ಕೆಟಗರಿಯ 50 ಕ್ಷೇತ್ರಗಳು 50:50 ಕ್ಷೇತ್ರಗಳಾಗಿವೆ. ಈ ಎಲ್ಲ ಕ್ಷೇತ್ರಗಳ ಸಮೀಕ್ಷೆಯನ್ನೂ ರೆಡ್ಡಿ ಮಾಡಿಸಿಕೊಂಡಿದ್ದಾರೆ.

14ಕ್ಕೆ ಪ್ರಣಾಳಿಕೆ ಬಿಡುಗಡೆ
ರೆಡ್ಡಿ ತಮ್ಮ ಜನ್ಮದಿನವಾದ ಜ.11 ರಂದು ಬಳ್ಳಾರಿಯಲ್ಲಿ ಆಯೋಜಿಸ ಬೇಕಿದ್ದ ಬೃಹತ್‌ ಕಾರ್ಯಕ್ರಮವನ್ನು ರದ್ದುಗೊಳಿಸಿ, ಜ.16ರಂದು ಉತ್ತರ ಕರ್ನಾಟಕದ 25 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಿದ್ದಾರೆ. ಫೆ.14ರಂದು ಬಳ್ಳಾರಿಯಲ್ಲೇ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಲಿದ್ದಾರೆ. ಅದಕ್ಕಾಗಿ ಕೋರ್ಟ್‌ನಿಂದ ಅನುಮತಿಯನ್ನೂ ಪಡೆಯಲಿದ್ದಾರೆ ಎನ್ನಲಾಗಿದೆ.

Advertisement

ಈಗಾಗಲೇ ಹಲವು ನಾಯಕರು ರೆಡ್ಡಿ ಪಕ್ಷವನ್ನು ಸೇರಿದ್ದು, ಸಂಕ್ರಾಂತಿ ಬಳಿಕ ಇನ್ನಷ್ಟು ನಾಯಕರ ಸೇರ್ಪಡೆ ಆಗಲಿದೆ ಎಂದು ಹೇಳಲಾಗುತ್ತಿದೆ.

– ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next