Advertisement

ಗಣಿಧಣಿ ಜನಾರ್ದನ ರೆಡ್ಡಿಗೆ ಅಂತೂ ಸಿಕ್ಕಿತು ಜಾಮೀನು

06:00 AM Nov 15, 2018 | |

ಬೆಂಗಳೂರು: ಆ್ಯಂಬಿಡೆಂಟ್‌ ಕಂಪನಿಯ ವಂಚನೆ ಆರೋಪ ಪ್ರಕರಣದಲ್ಲಿ ಜಾಮೀನಿನ ಮೇಲೆ ಬುಧವಾರ ಜೈಲಿನಿಂದ ಬಿಡುಗಡೆಯಾದ ಮಾಜಿ ಸಚಿವ ಗಣಿ ಧಣಿ ಜನಾರ್ದನ ರೆಡ್ಡಿ, “”ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ತನ್ನ ವಿರುದ್ಧ ಹನ್ನೆರಡು ವರ್ಷಗಳ ದ್ವೇಷ ಸಾಧಿಸಿ ಜೈಲಿಗೆ ಕಳುಹಿಸುವ ಮೂಲಕ ರಾಕ್ಷಸ ಆನಂದ ಪಟ್ಟಿದ್ದಾರೆ” ಎಂದು ವಾಗ್ಧಾಳಿ ನಡೆಸಿದ್ದಾರೆ.

Advertisement

ಬುಧವಾರ ರಾತ್ರಿ 7.30ರ ಸುಮಾರಿಗೆ ಜೈಲಿನಿಂದ ಬಿಡುಗಡೆಗೊಂಡು ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿರಲಿಲ್ಲ. ಹೀಗಿದ್ದರೂ, ಒಂದು ದಿನದ ಮಟ್ಟಿಗಾದರೂ ರೆಡ್ಡಿಯನ್ನು ಜೈಲಿಗೆ ಕಳುಹಿಸಬೇಕು ಎಂಬ ಹುನ್ನಾರ ರೂಪಿಸಲಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆ್ಯಂಬಿಡೆಂಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಜೆ. ಹಳ್ಳಿ ಪೊಲೀಸ್‌ ಠಾಣೆಯಲ್ಲಿ ಮೊದಲು ದಾಖಲಾಗಿದ್ದ ಸಮಯದಲ್ಲಿ ಯಾವ ಸರ್ಕಾರವಿತ್ತು. ಆಗ ಗೃಹ ಸಚಿವರು ಯಾರಾಗಿದ್ದರು. ಆಗ ಪ್ರಕರಣದ ತನಿಖೆ ಯಾಕೆ ನಡೆದಿಲ್ಲ. ಯಾಕೆ ಆಗಲೇ ಬಂಧಿಸಲಿಲ್ಲ ಎಂದು ಪ್ರಶ್ನಿಸಿದರು.

ಹಿಂದಿನ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ರಾಮಲಿಂಗಾರೆಡ್ಡಿಯವರು ಬ್ರಿಜೇಶ್‌ ರೆಡ್ಡಿ ಎಂಬವರಿಗೆ ಫ‌ರೀದ್‌ ಖಾನ್‌ನನ್ನು ಅರೆಸ್ಟ್‌ ಮಾಡಲ್ಲ. ಫ‌‌ರೀದ್‌ ಕೂಡ ಎಲ್ಲರ ಹಣ ವಾಪಸ್‌ ಕೊಡುತ್ತಾನೆ ಎಂದು ಹೇಳಿದ್ದರು ಎಂದು ಬಾಂಬ್‌ ಸಿಡಿಸಿದರು.

ಅಷ್ಟೇ ಅಲ್ಲದೆ, ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಬರಲಿದೆ. ನನ್ನ ವಿರುದ್ಧ ಷಡ್ಯಂತ್ರ ಮಾಡಿದವರನ್ನು ದೇವರು ನೋಡಿಕೊಳ್ಳುತ್ತಾನೆ. ನಾನು ದೇವರನ್ನು ನಂಬಿದ್ದೇನೆ. 2006ರಲ್ಲಿ ಕುಮಾರಸ್ವಾಮಿ ವಿರುದ್ಧ 150 ಕೋಟಿ ರೂ. ಲಂಚದ ಆರೋಪ ಮಾಡಿದ್ದೆ. ಆ ಸಂಧರ್ಭದಲ್ಲಿಯೂ ಸುಳ್ಳು ಕೇಸ್‌ ದಾಖಲಿಸಿದ್ದರು. ಇದೀಗ 12 ವರ್ಷದ ದ್ವೇಷದ ಪ್ರತೀಕ ಮತ್ತೆ ಜೈಲಿಗೆ ಕಳುಹಿಸಿದ್ದಾರೆ ಎಂದು ಆರೋಪಿಸಿದರು.

Advertisement

“ನನ್ನ ವಿರುದ್ಧ ಸುಳ್ಳು ಕೇಸುಗಳನ್ನು ದಾಖಲಿಸಿ ನಗೆಪಾಟಿಲಿಗೆ ಗುರಿಯಾಗಿಸುವ ಉದ್ದೇಶ ಹೊಂದಿದ್ದರೆ ನೀವು ಜೀವನ ಪರ್ಯಂತ ನಗೆಪಾಟಲಿಗೆ ಈಡಾಗಬೇಕಾಗುತ್ತದೆ. ನಿಮ್ಮ ಅಧಿಕಾರ ಶಾಶ್ವತ ಅಲ್ಲ. ಅದೃಷ್ಟಕ್ಕೆ ಲಾಟರಿ ಹೊಡೆದು ಮುಖ್ಯಮಂತ್ರಿ ಆಗಿದ್ದೀರಾ ಅಷ್ಟೆ. ಅಧಿಕಾರದಲ್ಲಿದ್ದಾಗ ಒಳ್ಳೆಯ ಯೋಚನೆಗಳೊಂದಿಗೆ ಯೋಜನೆ ಜಾರಿಗೊಳಿಸಿ ಅದು ಬಿಟ್ಟು ಆತಂಕದ ವಾತಾವರಣ ಸೃಷ್ಟಿಸಿ ನನ್ನನ್ನು ಬೆಂಗಳೂರು ಬಿಡಿಸಬೇಕು ಎಂಬ ಆಸೆ ಹೊಂದಿದ್ದರೆ ಅದು ಎಂದಿಗೂ ಈಡೇರುವುದಿಲ್ಲ’ ಎಂದರು.

ಅಕ್ರಮ ಗಣಿ ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆಯಾದ ಬಳಿಕ ಕುಟುಂಬದ ಜತೆ ಕಾಲ ಕಳೆಯುತ್ತಿದ್ದೇನೆ. ಆದರೆ ನನ್ನನ್ನು ನೆಮ್ಮದಿಯಾಗಿ ಬದುಕಲು ಬಿಡುತ್ತಿಲ್ಲ. ನನ್ನ ಮನೆಯ ಸುತ್ತ ಆತಂಕದ ವಾತಾವರಣ ನಿರ್ಮಾಣವಾಗಿದೆ. ನನ್ನ ಪಾಡಿಗೆ ನಾನು ಕೈ ಕಟ್ಟಿ ಕುಳಿತರೂ ಬಿಡುತ್ತಿಲ್ಲ. ನಾನು ಇನ್ಮುಂದೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಕಿಡಿ ಕಾರಿದರು.

ಅಲೋಕ್‌ ಕುಮಾರ್‌, ಗಿರೀಶ್‌ ಜಮ್ಮು ಕಾಶ್ಮೀರಕ್ಕೆ ಹೋಗಲಿ:
ಆ್ಯಂಬಿಡೆಂಟ್‌ ಪ್ರಕರಣದಲ್ಲಿ ಪ್ರಾಮಾಣಿಕ ಅಧಿಕಾರಿಗಳನ್ನು ಬಳಕೆ ಮಾಡಿಕೊಂಡು ನನ್ನನ್ನು ಬಂಧಿಸಲಾಗಿದೆ. ಹೆಚ್ಚುವರಿ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಹಾಗೂ ಡಿಸಿಪಿ ಗಿರೀಶ್‌ ಅವರಂತ ಪ್ರಾಮಾಣಿಕ ಅಧಿಕಾರಿಗಳನ್ನು ಮುಖ್ಯಮಂತ್ರಿಯವರು ಜಮ್ಮು -ಕಾಶ್ಮೀರಕ್ಕೆ ಕಳುಹಿಸಿಕೊಡಬೇಕು. ಗಡಿಯಲ್ಲಿ ದೇಶಕ್ಕೆ ಶತ್ರುಗಳು ನುಸುಳುವುದು ತಡೆಗಟ್ಟಲಿ, ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕ್ರಮ ವಹಿಸಲಿ ಎಂದು ವ್ಯಂಗ್ಯವಾಡಿದರು.

ಭದ್ರತೆ ನೀಡಿ:
ನನಗೆ ಬೆಂಗಳೂರಿನಲ್ಲಿ ಆತಂಕದ ವಾತಾವರಣ ಇದೆ. ಒಂದು ವೇಳೆ ಕರೆದುಕೊಂಡು ಹೋಗಿ ಪ್ರಾಣ ತೆಗೆದಿದ್ದರೆ ಹೊಣೆಯಾರು. ರಾಜ್ಯದ ಮಾಜಿ ಮಂತ್ರಿಯಾದ ನನಗೆ ಈ ಪರಿಸ್ಥಿತಿಯಿದೆ. ಹೀಗಾಗಿ ಭದ್ರತೆ ನೀಡಿ ಎಂದು ಹಿಂದಿನ ಸರ್ಕಾರಕ್ಕೆ ಮನವಿ ಮಾಡಿದ್ದರೂ ಭದ್ರತೆ ಸಿಗಲಿಲ. ಈಗ ಇವರ ಭದ್ರತೆ ನಾನು ನಂಬಲ್ಲ ಹೀಗಾಗಿ ಭದ್ರತೆ  ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲಿ ಎಂದರು.

ಅನಂತಕುಮಾರ್‌ ಸ್ಮರಣೆ
ಜೈಲಿನಿಂದ ಹೊರಬರುತ್ತಲೇ ಎರಡು ದಿನಗಳ ಹಿಂದೆ ನಿಧನರಾದ ಕೇಂದ್ರ ಸಚಿವ ಅನಂತಕುಮಾರ್‌ರನ್ನು ನೆನೆದು ಗದ್ಗದಿತರಾದ ರೆಡ್ಡಿ, ನನ್ನ ಅಣ್ಣನಂತಿದ್ದ ಮಾರ್ಗದರ್ಶಕರೂ ಆದ ಅನಂತಕುಮಾರ್‌ ಅವರ ಅಂತಿಮ ದರ್ಶನ ಮಾಡಲು ಸಾಧ್ಯವಾಗಲಿಲ್ಲ. ಕಣ್ಣೀರು ಹಾಕುತ್ತಲೇ ಜೈಲಿನಲ್ಲಿ ದಿನದೂಡಿದೆ ಎಂದು ಹೇಳಿದರು.

ನಾನು ರಾಜಕೀಯವಾಗಿ ಮೇಲೆ ಬರಲು, ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದಲು ಆರ್ಥಿಕ ಸಂಪತ್ತುಗಳಿಸಲು ಸದಾ ಮಾರ್ಗದರ್ಶಕರಾಗಿ ಹಿತೈಷಿಯಾಗಿ ಅನಂತಕುಮಾರ್‌ ಅವರು ಸಲಹೆ ಸೂಚನೆ ನೀಡುತ್ತಿದ್ದರು. ಮುಂದಿನ ದಿನಗಳಲ್ಲಿ ಈ ದೇಶದ ಪ್ರಧಾನಿ ಆಗುವ ಅವಕಾಶ ಅವರಿಗಿತ್ತು. ಅವರನ್ನು ಕಳೆದುಕೊಂಡಿದ್ದು ಬಹಳ ದು:ಖವಾಗಿದೆ ಎಂದು ತಿಳಿಸಿದರು.

ಬಿಜೆಪಿಗೂ ಟಾಂಗ್‌
ಬಿಜೆಪಿಯವರು ನನ್ನಿಂದ ಅಂತರ ಕಾಯ್ದುಕೊಂಡಿದ್ದಾರೆ. ನನ್ನ ಬಂಧನ ವಿಚಾರ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂಬಂತಿದ್ದಾರೆ ಎಂಬ ವರದಿ ಮಾಧ್ಯಮಗಳಲ್ಲಿ ನೋಡಿದ್ದೇನೆ. ನನ್ನ ಸ್ನೇಹಿತನಿಗಾಗಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೆಲಸ ಮಾಡಿದೆ. ಉಪ ಚುನಾವಣೆಯಲ್ಲಿ ಬಳ್ಳಾರಿ ಗಡಿಭಾಗಕ್ಕೆ ಹೋಗಿ ಪತ್ರಿಕಾಗೋಷ್ಠಿ ನಡೆಸಿಬಂದೆ. ಬೇಡ ಬೇಡ ಅಂದವರ ಯಾರ ಮನೆಗೂ ಹೋಗೋಕಾಗಲ್ಲ ಎಂದು ಹೇಳಿದರು.

ರಾಜಕೀಯ ದ್ವೇಷದ ಕಾರಣದಿಂದ  ಪ್ರಾಮಾಣಿಕ ಅಧಿಕಾರಿಗಳು ತಲೆತಗ್ಗಿಸುವಂತೆ ಆಗಿದೆ. ನ.5ರಂದು ನಾನು ಬೆಂಗಳೂರಿಗೆ ವಾಪಸ್‌ ಬಂದಿದ್ದೆ. ನಾನು ಎಲ್ಲಿಯೂ ಓಡಿ ಹೋಗಿರಲಿಲ್ಲ. ಆದರೆ, ಸಿಸಿಬಿ ನನಗೆ ನೋಟಿಸ್‌ ಕೊಟ್ಟು ವಿಚಾರಣೆಗೆ ಕರೆಸಬೇಕಿತ್ತು. ಅದನ್ನು ಬಿಟ್ಟು, ರೆಡ್ಡಿ ಪರಾರಿ ಎಂಬಂತೆ ಬಿಂಬಿಸಿತು.
– ಜನಾರ್ದನರೆಡ್ಡಿ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next