Advertisement
ಪ್ರಕರಣದಲ್ಲಿ ಜಾಮೀನು ಕೋರಿ ಜನಾರ್ದನ ರೆಡ್ಡಿ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯನ್ನು ಮಂಗಳವಾರ ನಡೆಸಿದ 1ನೇ ಎಸಿಎಂಎಂ ನ್ಯಾಯಾಲಯ, ರೆಡ್ಡಿ ಪರ ವಕೀಲರ ವಾದ ಹಾಗೂ ಸಿಸಿಬಿ ಪರ ವಕೀಲರ ಪ್ರತಿವಾದ ಆಲಿಸಿ ಜಾಮೀನು ಅರ್ಜಿ ಆದೇಶಬುಧವಾರಕ್ಕೆ ಕಾಯ್ದಿರಿಸಿ ವಿಚಾರಣೆ ಮುಂದೂಡಿತು. ರೆಡ್ಡಿ ಪರ ವಕೀಲ ಸಿ.ಎಚ್. ಹನುಮಂತರಾಯ ಅವರು ವಾದಿಸಿ, ಜನಾರ್ದನ ರೆಡ್ಡಿ ವಿರುದ್ಧ ಸಿಸಿಬಿ ಪೊಲೀಸರು ಯಾವುದೇ ಸಾಕ್ಷ್ಯಾಧಾರಗಳನ್ನು ಹಾಜರುಪಡಿಸಿಲ್ಲ. ಕೇವಲ ಹೇಳಿಕೆಗಳ ಆಧಾರದಲ್ಲಿ ಬಂಧಿಸಿದ್ದಾರೆ. ಅಲ್ಲದೆ, ಹಣ ವರ್ಗಾವಣೆ ಆರೋಪದಲ್ಲಿ ಪ್ರಕರಣದ 5ನೇ ಆರೋಪಿಯಿಂದ ಜಪ್ತಿ ಮಾಡಿಕೊಳ್ಳಬೇಕು. ರೆಡ್ಡಿ 6ನೇ ಆರೋಪಿಯಾಗಿದ್ದಾರೆ. ಹೀಗಾಗಿ, ಕಸ್ಟಡಿಗೆ ಕೇಳುವ ಗೋಜಿಗೆ ಹೋಗದ ಸಿಸಿಬಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದರ ಅರ್ಥ ಅವರ ವಿಚಾರಣೆ ಪೂರ್ಣಗೊಂಡಿದೆ ಎಂಬುದಾಗಿದೆ. ಈ ಎಲ್ಲ ಅಂಶಗಳಿಂದ ರಾಜಕೀಯ ವೈಷಮ್ಯ ದುರುದ್ದೇಶದಿಂದ ರೆಡ್ಡಿ ಅವರನ್ನು ಬಂಧಿಸಿರುವುದು ಗೊತ್ತಾಗಲಿದೆ. ಹೀಗಾಗಿ ಜಾಮೀನು ಮುಂಜೂರು ಮಾಡಬೇಕು ಎಂದು ಕೋರಿದರು.