ಸಿಂಧನೂರು: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ, ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಬಳಿಕ ಮೊಟ್ಟ ಮೊದಲ ಬಾರಿಗೆ ಹೆಲಿಕಾಪ್ಟರ್‌ನಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸುವ ಮೂಲಕ ಸಂಚಲನ ಮೂಡಿಸಿದ್ದಾರೆ.
ಕೆಆರ್‌ಪಿಪಿ ಪಕ್ಷ ಸ್ಥಾಪನೆ ನಂತರ ತಮ್ಮ ರೇಂಜ್ ರೋವರ್ ಕಾರಿನಲ್ಲಿ ಬಹುತೇಕ ಬಾರಿ ಬಂದು ಹೋಗಿದ್ದ ಜಿ.ಜನಾರ್ದನರೆಡ್ಡಿ ಇದೀಗ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬಿದ್ದಾರೆ. ರೆಡ್ಡಿ ಹೊಸದಾಗಿ ಖರೀದಿ ಮಾಡಿರುವ ಹೆಲಿಕಾಪ್ಟರ್‌ನಲ್ಲಿ ಪತ್ನಿ ಅರುಣಾ ಲಕ್ಷ್ಮೀ ಜತೆ ಬೆಂಗಳೂರಿನಿಂದ ಆಗಮಿಸಿದ್ದರು. ಹೊಸ ಅತಿಥಿಯನ್ನು ಮನೆಗೆ ಬರಮಾಡಿಕೊಂಡ ಖುಷಿಯನ್ನು ದಂಪತಿ ಸಮೇತ ಪ್ರಯಾಣಿಸುವ ಮೂಲಕ ಆಚರಿಸಿಕೊಂಡರು. ಬಳಿಕ ಪ್ರಚಾರದಲ್ಲಿ ಉತ್ಸಾಹದಿಂದಲೇ ಪಾಲ್ಗೊಂಡರು. 10 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಗಾರ್ಮೆಂಟ್ ಫ್ಯಾಕ್ಟರಿ ಉದ್ಘಾಟಿಸಿದರು. ಪಕ್ಷದ ನಿಯೋಜಿತ ಅಭ್ಯರ್ಥಿ ಮಲ್ಲಿಕಾರ್ಜುನ ನೆಕ್ಕಂಟಿ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ಇರುವ ಬೇಡಿಕೆಯನ್ನು ಚುನಾವಣೆಗೂ ಮುನ್ನವೇ ಈಡೇರಿಸಲು ಮುನ್ನುಡಿ ಬರೆದರು.
ಏನಿದು ಹೊಸ ಹೆಲಿಕಾಪ್ಟರ್?: ಹೊಸದಾಗಿ 10 ಸಾವಿರ ಜನರಿಗೆ ಉದ್ಯೋಗ ಸೃಜಿಸುವ ಫ್ಯಾಕ್ಟರಿಯನ್ನು ಉದ್ಘಾಟಿಸಲು ಹೊಸ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಜನಾರ್ದನರೆಡ್ಡಿ ಬಳಿಕ ತಮ್ಮ ಕಾರಿನಲ್ಲಿ ಈಗಾಗಲೇ ವಾಸ್ತವ್ಯ ಹೂಡಿರುವ ಗಂಗಾವತಿಗೆ ಪ್ರಯಾಣ ಬೆಳೆಸಿದರು. ಹೊಸ ಹೆಲಿಕಾಪ್ಟರ್ ಬೆಂಗಳೂರಿಗೆ ವಾಪಸ್ ತೆರಳಿತು. ಕೆಆರ್‌ಪಿಪಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ 30ರಿಂದ 40 ಕ್ಷೇತ್ರಗಳಲ್ಲಿ ಸುತ್ತಾಟಕ್ಕಾಗಿಯೇ ರೆಡ್ಡಿ ಹೊಸ ಹೆಲಿಕಾಪ್ಟರ್ ಖರೀದಿ ಮಾಡಿದ್ದಾರೆಂದು ಕಾರ್ಯಕರ್ತರು ತಿಳಿಸಿದ್ದಾರೆ.
ಹಳೇ ಹೆಲಿಕಾಪ್ಟರ್ ದುರಸ್ತಿಗೆ: ಈಗಾಗಲೇ ಒಂದು ಹೆಲಿಕಾಪ್ಟರ್ ಹೊಂದಿದ್ದ ಜನಾರ್ದನ ರೆಡ್ಡಿ ಅದನ್ನು ಕೂಡ ಸನ್ನದ್ಧಗೊಳಿಸಲು ಬಿಟ್ಟಿದ್ದಾರೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಕೆಆರ್‌ಪಿಪಿ ಪಕ್ಷದ ಚುನಾವಣಾ ಪ್ರಚಾರಕ್ಕೆ ಹೊಸ ಬಿಎಸ್7 ಹೆಲಿಕಾಪ್ಟರ್ ಹಾಗೂ ಹಳೆಯ ಹೆಲಿಕಾಪ್ಟರ್ ಬಳಕೆ ಮಾಡಲಿದ್ದಾರೆ. ಅದರ ಆರಂಭಿಕ ಸುಳಿವು ಎನ್ನುವಂತೆ 50 ಕಿಮೀ ಅಂತರದ ಗಂಗಾವತಿಯಲ್ಲೇ ವಾಸ್ತವ್ಯ ಹೂಡಿದ್ದರೂ ಬೆಂಗಳೂರಿನಿಂದ ಸಿಂಧನೂರಿಗೆ ಬರಲು ಮೊದಲ ಬಾರಿಗೆ ಹೊಸ ಹೆಲಿಕಾಪ್ಟರ್ ಬಳಕೆ ಮಾಡಿದ್ದಾರೆ. 12.45ಕ್ಕೆ ಸಿಂಧನೂರಿಗೆ ಆಗಮಿಸಿದ ಅವರು ಮಧ್ಯಾಹ್ನ 2.20ರ ವೇಳೆಗೆ ಬಿಡುವಿಲ್ಲದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಿರ್ಗಮಿಸಿದರು.
ಹೊಸ ಹೆಲಿಕಾಪ್ಟರ್‌ನಲ್ಲಿ ಜಿ.ಜನಾರ್ದನರೆಡ್ಡಿ ಬಂದಿದ್ದರು. ಪಕ್ಷದ ಅಭ್ಯರ್ಥಿಗಳ ಪ್ರಚಾರಕ್ಕೆ ಅನುಕೂಲವಾಗಲು ಮುಂದಿನ ದಿನಗಳಲ್ಲಿ ಹೆಲಿಕಾಪ್ಟರ್ ಬಳಕೆ ಮಾಡಲಿದ್ದಾರೆ.
– ಮಲ್ಲಿಕಾರ್ಜುನ ನೆಕ್ಕಂಟಿ, ಕೆಪಿಆರ್‌ಪಿಪಿ ನಿಯೋಜಿತ ಅಭ್ಯರ್ಥಿ, ಸಿಂಧನೂರು ಕ್ಷೇತ್ರ
-ಯಮನಪ್ಪ ಪವಾರ