Advertisement

ಹಿಂದಿನ ಪ್ರಚಾರ ಅಬ್ಬರದೆದುರು ಈಗಿನ ಅಬ್ಬರ ಲೆಕ್ಕವೂ ಅಲ್ಲ!

12:11 AM Feb 21, 2023 | Team Udayavani |

ಜನಾರ್ದನ ಪೂಜಾರಿ, ಮಾಜಿ ಸಚಿವರು
ಚುನಾವಣೆ ಎಂದರೆ ಪ್ರಚಾರದ ಅಬ್ಬರವೇ ಪ್ರಮುಖ ಆಕರ್ಷ ಣೆಯಾಗಿದ್ದು, ಹಿಂದಿನ ಪ್ರಚಾರದ ಅಬ್ಬರವನ್ನು ಗಮನಿಸಿದರೆ ಈಗಿನ ಅಬ್ಬರ ಯಾವ ಲೆಕ್ಕವೂ ಅಲ್ಲ. ಹಿಂದಿನ ಪ್ರಚಾರದ ಶೈಲಿಯೇ ಬೇರೆ, ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜನ ತಾಳ್ಮೆಯನ್ನು ಕಳೆದುಕೊಂಡಿದ್ದಾರೆ. ನಾನು ಎರಡು ಅವಧಿಗೆ ಕೆಪಿಸಿಸಿ ಅಧ್ಯಕ್ಷನಾಗಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಪ್ರಚಾರ ನಡೆಸಿದ ಅನುಭವ ಹೊಂದಿದ್ದು, ಆಗಿನ ಪಾದಯಾತ್ರೆ, ರೋಡ್‌ಶೋಗಳ ಶೈಲಿಯೇ ಬೇರೆ ಇತ್ತು. ಎಷ್ಟು ರಾತ್ರಿಯಾದರೂ ಜನರು ನಮಗಾಗಿ ಕಾಯುತ್ತಿದ್ದರು.

Advertisement

ಪಕ್ಷದವರಿಗಿಂತಲೂ ಜನ ಸಾಮಾನ್ಯರೇ ಹೆಚ್ಚಾಗಿ ತಮ್ಮ ಮನೆ, ಅಂಗಡಿಗಳ ಮುಂದೆ ನಿಂತು ಕೈ ಮುಗಿಯುತ್ತಿದ್ದರು. ಓಡಿ ಬಂದು ಕೈ ಕುಲುಕುತ್ತಿದ್ದರು. ಇಂತಹ ಯಾತ್ರೆಗಳು ತಡರಾತ್ರಿಯ ವರೆಗೂ ಮುಂದುವರಿಯುತ್ತಿತ್ತು. ಎಷ್ಟು ಹೊತ್ತಾದರೂ ಜನರ ಉತ್ಸಾಹಕ್ಕೆ ಯಾವುದೇ ಕೊರತೆಯಾಗುತ್ತಿರಲಿಲ್ಲ. ನಾವು ಯಾವುದೇ ಪ್ರಚಾರ ನಡೆಸಿದರೂ ಚುನಾವಣ ಆಯೋಗದ ನಿಯ ಮಗಳನ್ನು ತಪ್ಪುತ್ತಿರಲಿಲ್ಲ. ಅದರ ಪಾಲನೆಗೆ ಮೊದಲ ಆದ್ಯತೆ ನೀಡುತ್ತಿದ್ದೆವು. ಹಿಂದಿನ ಈ ರೀತಿಯ ಪ್ರಚಾರದ ಎದುರು ಈಗಿನ ಪ್ರಚಾರ ಯಾವುದೇ ಲೆಕ್ಕಕ್ಕೇ ಇಲ್ಲ ಎಂದೆಣಿಸು ತ್ತಿದೆ. ಈಗ ಒಂದು ಸಮಾವೇಶ, ಪಾದಯಾತ್ರೆ, ರೋಡ್‌ ಶೋ ನಡೆಸಿದಾಗ ಬರೀ ಆಯಾಯ ಪಕ್ಷಗಳ ಕಾರ್ಯಕರ್ತರು ಸೇರುತ್ತಾರೆ. ಹಿಂದೆ ಜನಸಾಮಾನ್ಯರು, ಬಡವರೇ ಯಾತ್ರೆಗಳ ಆಕರ್ಷಣೆಯಾಗಿರುತ್ತಿದ್ದರು.

ಪೂಜಾರಿಯವರು ಪ್ರಚಾರಕ್ಕೆ ಬರುತ್ತಾರೆ ಎಂದರೆ, ಜನರು ಸೇರುತ್ತಿದ್ದ ಶೈಲಿಯೇ ಬೇರೆ. ಅದು ಜನತೆ ನನ್ನ ಮೇಲಿ ಟ್ಟಿದ್ದ ವಿಶ್ವಾಸವಾಗಿತ್ತು. ಮಂಗಳೂರು ಭಾಗದಲ್ಲಿ ಪ್ರಚಾರ ನಡೆಸುವ ವೇಳೆ ಮೀನುಗಾರ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದರು. ನಾವು ಕಾಂಗ್ರೆಸ್‌ ಪಕ್ಷದ ಸಾಧನೆಗಳನ್ನು ವಿವರಿಸುತ್ತಾ ಮುಂದುವರಿಯುತ್ತಿದ್ದೆವು.

ಪರಿಣಾಮಕಾರಿ ಅನೌನ್ಸ್‌ಮೆಂಟ್‌!: ಆಗಿನ ದಿನಗಳಲ್ಲಿ ಅನೌನ್ಸ್‌ಮೆಂಟ್‌ ಹೆಚ್ಚು ಪರಿಣಾಮಕಾರಿಯಾಗಿದ್ದು, ಆಯಾಯ ಭಾಗಗಳಲ್ಲಿ ಏನನ್ನು ಹೇಳಬೇಕೋ ಅದನ್ನೇ ಹೇಳು ತ್ತಿದ್ದೆವು. ನಮ್ಮ ಪಕ್ಷದ ಸಾಧನೆಗಳಾದ ಬ್ಯಾಂಕ್‌ ರಾಷ್ಟ್ರೀಕರಣ, ಸಾಲ ಮೇಳ, ಭೂ ಮಸೂದೆ ಕಾನೂನು, ಮೀನುಗಾರರ ಸಮಸ್ಯೆಗೆ ಪರಿಹಾರ, ಇಂದಿರಾಗಾಂಧಿ 20 ಅಂಶಗಳ ಕಾರ್ಯಕ್ರಮ, ಆಶ್ರಯ ಯೋಜನೆ, ಮಧ್ಯಾಹ್ನದ ಬಿಸಿಯೂಟ, ರಾಜೀವ ಗಾಂಧಿಯವರ ಮಾಹಿತಿ ತಂತ್ರಜ್ಞಾನ ಕುರಿತ ಕ್ರಾಂತಿ ಹೀಗೆ ಒಂದೊಂದೇ ಪಟ್ಟಿಯನ್ನು ಜನರ ಮುಂದೆ ಇಡುತ್ತಾ ಸಾಗಿದಾಗ ಜನರ ಪ್ರತಿಕ್ರಿಯೆಗಳು ಕೂಡ ಅದ್ಭುತವಾಗಿ ಸಿಗು ತ್ತಿತ್ತು. ಆದರೆ ಇಂದು ಅನೌನ್ಸ್‌ಮೆಂಟ್‌ಗಳ ಶೈಲಿ ಕೂಡ ಬದಲಾ ಗಿದ್ದು, ಜನರು ಅದನ್ನೆಲ್ಲ ಕೇಳುವಷ್ಟು ತಾಳ್ಮೆಯನ್ನೂ ಹೊಂದಿಲ್ಲ.

ಮಲ್ಲಿಗೆ ಹಂಚುವ ಕಾರ್ಯ: ಹಿಂದೆ ವಿಶೇಷವಾಗಿ ಸಂಜೆ 4ರಿಂದ ರಾತ್ರಿ 10ರ ವರೆಗೆ ಪಾದಯಾತ್ರೆ ಗಳು ನಡೆಯು ತ್ತಿತ್ತು. ಚುನಾವಣೆ ಸಮ ಯದಲ್ಲಿ ಪ್ರತೀ ಕ್ಷೇತ್ರದ ಮುಖ್ಯ ರಸ್ತೆಗಳು, ಕೆಲವೊಂದು ಅಡ್ಡ ರಸ್ತೆಗಳಲ್ಲಿ ಸಾಗು ತ್ತಿದ್ದೆವು. ವಿಶೇಷವಾಗಿ ಮಹಿಳೆಯ ರಿಗೆ ಮಲ್ಲಿಗೆಯ ಹೂಗಳನ್ನು ಹಂಚುವ ಕಾರ್ಯ ನಡೆಯುತ್ತಿತ್ತು. ಅದಕ್ಕಾಗಿಯೇ ರಾಜ್ಯದ ಎಲ್ಲೆಡೆಗೆ ಮಂಗಳೂರಿನಿಂದಲೇ ಹೂವುಗಳನ್ನು ತರಿಸಲಾಗುತ್ತಿತ್ತು. ಪಕ್ಷದ ಹಿರಿಯ ನಾಯಕರಾದ ಜವಾಹರಲಾಲ್‌ ನೆಹರೂ ಅವರಿಂದ ಹಿಡಿದು ಇಂದಿರಾ ಗಾಂಧಿ, ರಾಜೀವ್‌ ಗಾಂಧಿಯವರವರೆಗೂ ಕಾಂಗ್ರೆಸ್‌ ಸರಕಾರ ಜನತೆಗೆ ಏನು ಮಾಡಿದೆ ಎಂದು ಸಾಧನೆಯ ಪಟ್ಟಿಯನ್ನು ತಿಳಿಸುತ್ತಿದ್ದೆವು.

Advertisement

ತಡರಾತ್ರಿ ಬಂದ ಇಂದಿರಾ ಗಾಂಧಿ ಕರೆ!: ಹಿಂದೊಮ್ಮೆ ಇಂದಿರಾ ಗಾಂಧಿಯವರು ಮಧ್ಯರಾತ್ರಿ 12 ಗಂಟೆಗೆ ಕರೆ ಮಾಡಿ ಮಲಗಿದ್ದೀಯಾ, ನಿದ್ರೆ ಬಂದಿಲ್ಲವೇ? ಎಂದು ಪ್ರಶ್ನೆ ಕೇಳಿದ್ದರು. ಅಷ್ಟು ಹೊತ್ತಿಗೆ ಅವರ ಕರೆಯನ್ನು ನೋಡಿ ನಾನು 6 ಅಡಿಯಷ್ಟು ಹಾರಿ ದಿಗ್ಭ್ರಾಂತನಾದೆ. ಮತ್ತೆ ಮಾತು ಮುಂದುವರಿಸಿದ ಅವರು ನೀನು ಚುನಾವಣೆಗೆ ನಿಲ್ಲಬೇಕು, ನಾಮಪತ್ರ ಹಾಕಿ ನನಗೆ ರಿಪೋರ್ಟ್‌ ಮಾಡಬೇಕು ಎಂದು ಹೇಳಿದರು. ಒಂದು ಕ್ಷಣ ಏನೂ ಹೇಳಲು ಸಾಧ್ಯವಾಗದೆ ಸುಮ್ಮನಾದೆ. ಆ ದಿನ ರಾತ್ರಿ ನಿದ್ದೆಯೇ ಬಂದಿರಲಿಲ್ಲ .

-ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next