ಬೆಂಗಳೂರು: ಓಬಳಾಪುರಂ ಮೈನಿಂಗ್ ಕಂಪನಿ ಹಾಗೂ ಆ್ಯಂಬಿಡೆಂಟ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬುಧವಾರ ಜಾರಿ ನಿರ್ದೇಶನಾಯ (ಇಡಿ)ಕಚೇರಿಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ.
ಶಾಂತಿನಗರದಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಮಧ್ಯಾಹ್ನ 3ಗಂಟೆ ಸುಮಾರಿಗೆ ಹಾಜರಾದ ಜನಾರ್ದನ ರೆಡ್ಡಿ ಅವರನ್ನು ಇಡಿ ಅಧಿಕಾರಿಗಳು ಸಂಜೆ 7 ಗಂಟೆವರೆಗೆ ವಿಚಾರಣೆ ನಡೆಸಿದರು. ಪ್ರಕರಣಗಳ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಎರಡು ದಿನಗಳ ಹಿಂದಷ್ಟೇ ಇಡಿ ಸಮನ್ಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಚಾರಣೆ ಮುಗಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಜನಾರ್ದನ ರೆಡ್ಡಿ, ಓಬಳಾಪುರಂ ಮೈನಿಂಗ್ ಪ್ರಕರಣದ ಬಗ್ಗೆ ವಿಚಾರಣೆ ನಡೆದಿದೆ. ಇಡಿ ಅಧಿಕಾರಿಗಳು ಕೆಲ ದಾಖಲೆ ಹಾಗೂ ತಮ್ಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಸುಪ್ರೀಂಕೋರ್ಟ್ ಈಗಾಗಲೇ ಆಸ್ತಿಯನ್ನು ಹಿಂದಿರುಗಿಸುವಂತೆ ಆದೇಶಿಸಿದೆ. ಆದರೆ, ಇಡಿ ಆಸ್ತಿ ಹಿಂದಿರುಗಿಸಿಲ್ಲ. ಅದಕ್ಕಾಗಿ ಕಾನೂನು ಹೋರಾಟ ನಡೆಸಿದ್ದೇನೆ. ಒಂದು ವೇಳೆ ಆಸ್ತಿ ಬಿಡುಗಡೆ ಮಾಡದಿದ್ದರೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಹೇಳಿದರು.
ಆ್ಯಂಬಿಡೆಂಟ್ ಪ್ರಕರಣದಲ್ಲಿ ಈ ಹಿಂದೆಯೇ ವಿಚಾರಣೆ ನಡೆಸಲಾಗಿದೆ. ಆ ಪ್ರಕರಣಕ್ಕೂ, ತಮಗೂ ಯಾವುದೇ ಸಂಬಂಧವಿಲ್ಲ. ಇಡಿ ಅಧಿಕಾರಿಗಳು ಈಗಾಗಲೇ ತಮ್ಮ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಜಾರಿ ನಿರ್ದೇಶನಾಲಯದ ವಿಚಾರಣೆ ತಮಗೆ ಹೊಸದಲ್ಲ ಎಂದರು.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ (ಫೆಮಾ) ಆರೋಪ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಆ್ಯಂಬಿಡೆಂಟ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಕೋಟ್ಯಂತರ ರೂ.ದಂಡ ವಿಧಿಸಿತ್ತು. ಈ ಪ್ರಕರಣದಲ್ಲಿ ಆ್ಯಂಬಿಡೆಂಟ್ ಕಂಪನಿಯ ಮುಖ್ಯಸ್ಥ ಸೈಯದ್ ಅಹ್ಮದ್ ಫರೀದ್‌ನನ್ನು ಪಾರು ಮಾಡಲು 20 ಕೋಟಿ ರೂ.ಗೆ ಲಂಚದ ಬೇಡಿಕೆ ಇಟ್ಟ ಆರೋಪದ ಮೇಲೆ ಜನಾರ್ದನ ರೆಡ್ಡಿ ಹಾಗೂ ಅವರ ಆಪ್ತ ಅಲಿಖಾನ್‌ನನ್ನು ಸಿಸಿಬಿ ಬಂಧಿಸಿತ್ತು. ಅಲ್ಲದೆ, ಅದನ್ನು ಇಡಿ ಗಂಭೀರವಾಗಿ ಪರಿಗಣಿಸಿತ್ತು.