Advertisement
ಜಾರಿ ನಿರ್ದೇಶನಾಲಯ ಪ್ರಕರಣದ ತನಿಖೆಯಲ್ಲಿ ಸಹಾಯ ಮಾಡುವುದಾಗಿ ಆ್ಯಂಬಿಡೆಂಟ್ ಕಂಪನಿಯ ಮಾಲೀಕ ಸೈಯದ್ ಅಹಮದ್ ಫರೀದ್ ಬಳಿ 57 ಕೆ.ಜಿ. ಚಿನ್ನದ ಗಟ್ಟಿ ಪಡೆದ ಆರೋಪ ಜನಾರ್ದನ ರೆಡ್ಡಿ ಅವರ ಮೇಲಿದೆ. ಈ ಪ್ರಕರಣದಲ್ಲಿ ಇದುವರೆಗೆ ಸುಳಿವು ನೀಡದೇ ನಾಪತ್ತೆಯಾಗಿದ್ದ ಗಾಲಿ ಜನಾರ್ದನ ರೆಡ್ಡಿ, ತಾವಾಗಿಯೇ ವಿಚಾರಣೆಗೆ ಹಾಜರಾಗುವಂತೆ ಮಾಡುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜತೆಗೆ ಉಳಿದ ಆರೋಪಿಗಳನ್ನೂ ವಿಚಾರಣೆಗೆ ಕರೆಸಿ ಮುಖಾಮುಖೀಯಾಗಿ ಕುಳ್ಳಿರಿಸಿ ವಿಚಾರಣೆ ಮಾಡಿ ವಿಡಿಯೋ ಚಿತ್ರೀಕರಣವನ್ನೂ ಮಾಡುವ ಮೂಲಕ ರೆಡ್ಡಿಯವರನು ಕಾನೂನಿನ ಬಲೆಗೆ ಸಿಲುಕುವಂತೆ ಮಾಡಿದ್ದಾರೆ.
Related Articles
Advertisement
ಬಳಿಕ ಎಸಿಪಿ ವೆಂಕಟೇಶ್ ಪ್ರಸನ್ನ ಅವರು ಸಿದ್ಧಪಡಿಸಿದ್ದ ಪ್ರಶ್ನೆಗಳಿಗೆ ಉತ್ತರ ನೀಡಿದ ರೆಡ್ಡಿ, ನನಗೂ ಆ್ಯಂಬಿಡೆಂಟ್ ಕಂಪನಿ ವಂಚನೆ ಪ್ರಕರಣಕ್ಕೂ ಸಂಬಂಧವಿಲ್ಲ. ನಾನು ಯಾರೊಂದಿಗೂ ಆ ರೀತಿಯ ವ್ಯವಹಾರ ನಡೆಸಿಲ್ಲ. ಬಂಡವಾಳ ಸಹ ಹೂಡಿಕೆ ಮಾಡಿಲ್ಲ. ರೆಡ್ಡಿ ಸಮುದಾಯದ ಮೂಲಕ ಫರೀದ್ ಹಾಗೂ ಇತರರು ಪರಿಚಯವಾದರು. ಅಲ್ಲದೆ, ನೀವು ಹೇಳುವ 57 ಕೆ.ಜಿ. ಚಿನ್ನದ ಗಟ್ಟಿ ಸಹ ನನ್ನ ಬಳಿ ಇಲ್ಲ. ಅನಗತ್ಯವಾಗಿ ನನ್ನ ಹೆಸರನ್ನು ನೀವು ಪ್ರಕರಣದಲ್ಲಿ ಸಿಲುಕಿಸುತ್ತಿದ್ದೀರಿ ಎಂದು ರೆಡ್ಡಿ ಉತ್ತರಿಸಿದ್ದಾರೆ.
ಪೊಲೀಸರಿಗೇ ರೆಡ್ಡಿ ಪ್ರಶ್ನೆಅಲ್ಲದೆ, ತಾಜ್‌ವೆಸ್ಟೆಂಡ್ ಹೋಟೆಲ್‌ನಲ್ಲಿರುವ ಕೊಠಡಿಯನ್ನು ನಾನು ಕೆಲ ವರ್ಷಗಳಿಂದ ಗುತ್ತಿಗೆ ಪಡೆದುಕೊಂಡಿದ್ದೇನೆ. ಅದೇ ಕೊಣೆಯನ್ನು ಫರೀದ್ ನಿಮ್ಮ ಸಿಬ್ಬಂದಿಗೆ ತೋರಿಸಿದ್ದಾರೆ. ಜತೆಗೆ ನೋಟಿಸ್ ನೀಡುವ ಮೊದಲೇ ನನ್ನ ಮನೆ ಮೇಲೆ ದಾಳಿ ನಡೆಸಲು ಕಾರಣವೇನು? ನನಗೆ ನೋಟಿಸ್ ನೀಡುವ ಮೊದಲೇ ಪ್ರಕರಣದಲ್ಲಿ ನನ್ನ ಹೆಸರನ್ನು ಪ್ರಸ್ತಾಪಿಸಿರುವ ಉದ್ದೇಶವೇನು? ನಿಮ್ಮ ಈ ವರ್ತನೆ ಸರಿಯೇ? ಎಂದು ಪ್ರಶ್ನಿಸಿದರು ಎಂದು ತಿಳಿದು ಬಂದಿದೆ. ಇದಕ್ಕೆ ಸ್ವಲ್ಪ ಕೋಪಗೊಂಡ ತನಿಖಾಧಿಕಾರಿಗಳು ಹಾಗಾದರೇ ಫರೀದ್ ನಿಮಗೆ ಸಿಹಿ ತಿನ್ನಿಸಿದ್ದು ಯಾಕೆ? ಎಂದು ಕೇಳಿದರು. ಅದಕ್ಕೆ ರೆಡ್ಡಿ, ಫರೀದ್ ಪರಿಚಯವಿತ್ತು. ಹೋಟೆಲ್‌ನ ಕೊಠಡಿಗೆ ಫರೀದ್ ಹಾಗೂ ಇತರರು ಬಂದು ಕಾರ್ಯಕ್ರಮವೊಂದಕ್ಕೆ ಆಹ್ವಾನ ನೀಡಿದರು. ಆಗ ಅವರೇ ಸಿಹಿ ತಿನ್ನಿಸಿ, ಸನ್ಮಾನಿಸಿ ಫೋಟೋ ತೆಗೆದುಕೊಂಡರು ಎಂದು ಸಮರ್ಥನೆ ನೀಡಿದರು ಎಂದು ಹೇಳಲಾಗಿದೆ. ಮುಖಾಮುಖೀ ವಿಚಾರಣೆ
ರೆಡ್ಡಿ ಅವರ ಹೇಳಿಕೆಗಳಿಂದ ಅನುಮಾನಗೊಂಡ ಪೊಲೀಸರು ಕೂಡಲೇ ಪ್ರಕರಣದ ಪ್ರಮುಖ ಆರೋಪಿ ಫರೀದ್, ರಾಜ್‌ಮಹಲ್ ಜ್ಯುವೆಲ್ಲರ್ಸ್ ಮಾಲೀಕ ರಮೇಶ್‌ನನ್ನು ಕರೆಸಿ ಮೂವರನ್ನು ಮುಖಾಮುಖೀ ವಿಚಾರಣೆ ನಡೆಸಿದರು. ಈ ವೇಳೆ ಅಚ್ಚರಿಗೊಂಡ ಮೂವರು ಗಲಿಬಿಲಿಗೊಂಡು ಗೊಂದಲದ ಹೇಳಿಕೆ ನೀಡಿದರು. ಇದರಿಂದ ಇನ್ನಷ್ಟು ಅನುಮಾನಗೊಂಡ ಪೊಲೀಸರು ಮೂವರನ್ನು ಮತ್ತೂಮ್ಮೆ ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದು, ಇದನ್ನು ಚಿತ್ರೀಕರಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ಅಜ್ಞಾತ ಸ್ಥಳದಿಂದ ವಿಡಿಯೋ!
ಮಾಜಿ ಸಚಿವ ಜನಾರ್ದನ ರೆಡ್ಡಿ ಕೇಂದ್ರ ಅಪರಾಧ ವಿಭಾಗದ ಪೊಲೀಸರ ಎದುರು ವಿಚಾರಣೆಗೆ ಹಾಜರಾಗುವ ಮೊದಲು ವಕೀಲ ಚಂದ್ರಶೇಖರ್ ಜತೆ ಸೇರಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದರು. ಈ ವಿಡಿಯೋದಲ್ಲಿ ನಾನು ಎಲ್ಲಿಯೂ ಹೋಗಿಲ್ಲ. ಬೆಂಗಳೂರಿನಲ್ಲಿ ಇದ್ದೇನೆ. ವಕೀಲರ ಜತೆ ಚರ್ಚಿಸಿ ಇದೀಗ ಸಿಸಿಬಿ ಪೊಲೀಸರ ನೋಟಿಸ್ ಬಂದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುತ್ತಿದ್ದೇನೆ ಎಂದು ಹೇಳಿದ್ದಾರೆ. ಅಜ್ಞಾತ ಸ್ಥಳದಲ್ಲಿ ಚಿತ್ರೀಕರಿಸಿರುವ ವಿಡಿಯೋದಲ್ಲಿ ಕಳೆದ 15-20 ದಿನಗಳಿಂದ ಬೆಂಗಳೂರಿನ ಮನೆ ಸುತ್ತ-ಮುತ್ತ ಆತಂಕದ ವಾತಾವರಣ ಇತ್ತು. ಅದಾದ ಬಳಿಕ ಇದೀಗ ಏಕಾಏಕಿ ಮಾಧ್ಯಮಗಳಲ್ಲಿ ಊಹಾಪೋಹ ವರದಿಗಳು ಪ್ರಸಾರವಾಗುತ್ತಿದ್ದು, ರೆಡ್ಡಿ ಪತ್ತೆಯಾಗಿಲ್ಲ. ತಲೆಮರೆಸಿಕೊಂಡಿದ್ದಾರೆ ಎಂದೆಲ್ಲ ಹೇಳುತ್ತಿದ್ದರು. ಕೂಡಲೇ ವಕೀಲ ಚಂದ್ರಶೇಖರ್ ಜತೆ ಚರ್ಚಿಸಿ, ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡೋಣ ಎಂದು ಕೇಳಿಕೊಂಡೆ. ಆದರೆ, ಅವರು ಎಫ್ಐಆರ್‌ನಲ್ಲಿ ನಿಮ್ಮ ಹೆಸರಿನಲ್ಲ. ಸಿಸಿಬಿಯಿಂದ ನೋಟಿಸ್ ಕೂಡ ಬಂದಿಲ್ಲ. ಏಕಾಏಕಿ ನಾವೇ ಹೋಗುವುದು ಸರಿಯಲ್ಲ. ಒಂದು ವೇಳೆ ನೋಟಿಸ್ ಜಾರಿ ಮಾಡಿದರೆ ಹಾಜರಾಗಲು ಸಾಧ್ಯ ಎಂದು ಸಲಹೆ ನೀಡಿದ್ದರು ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ. ನಾನು ಬೆಂಗಳೂರಿನಲ್ಲೇ ಇದ್ದೇ:
ನಾನು ಬೆಂಗಳೂರು ಮಹಾನಗರದಲ್ಲೇ ಇದ್ದೇ. ಬೆಂಗಳೂರು ಬಿಟ್ಟು ಹೊರಗೆ ಹೋಗುವ ಅಗತ್ಯವಿಲ್ಲ. ನನ್ನ ವಿರುದ್ಧ ಇಲ್ಲ-ಸಲ್ಲದ ಆರೋಪಗಳು ಮಾಡಲಾಗಿದೆ. ಪೊಲೀಸರು ಮಾಧ್ಯಮಗಳ ದಿಕ್ಕು ತಪ್ಪಿಸುತ್ತಿದ್ದಾರೆ. ಸಿಸಿಬಿ ಪೊಲೀಸರ ವರ್ತನೆಯಿಂದ ನನಗೆ ನೋವಾಗಿದೆ. ಮಾಧ್ಯಮಗಳಿಗೆ ಯಾವುದಾದರೂ ಒಂದು ದಾಖಲೆ ನೀಡಬೇಕಿತ್ತು. ಹೀಗಾಗಿ ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದೇವೆ. ಸಿಸಿಬಿಯವರು ರಾಜಕೀಯ ಷಡ್ಯಂತ್ರಕ್ಕೆ ಒಳಗಾಗಬಾರದು. ಪ್ರಾಮಾಣಿಕ ತನಿಖೆ ನಡೆಯುವ ನಂಬಿಕೆ, ವಿಶ್ವಾಸ ನನಗಿದೆ. ಪೊಲೀಸ್ ಮಗನಾಗಿ ನನಗೆ ಪೊಲೀಸರ ಮೇಲೆ ಗೌರವವಿದೆ. ಪೊಲೀಸ್ ಕುಟುಂಬದಲ್ಲಿ ಬೆಳೆದು ಬಂದವನು ನಾನು. ನಾನು ತಪ್ಪು ಮಾಡಿಲ್ಲ. ನನಗೆ ಯಾವುದೇ ಆತಂಕ ಕೂಡ ಇಲ್ಲ. ತಪ್ಪೇ ಮಾಡಿಲ್ಲ ಎಂದ ಮೇಲೆ ನನಗೆ ಎಲ್ಲಿಂದ ಆತಂಕ ಬರುತ್ತದೆ. ಭಾನುವಾರ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದರು. ಹೀಗಾಗಿ ನಾನು ಒಂದು ದಿನ ಮುಂಚಿತವಾಗಿಯೇ ವಿಚಾರಣೆಗೆ ಹಾಜರಾಗುತ್ತಿದ್ದೇನೆ. ನನ್ನ ವಿರುದ್ಧ ಡೀಲ್ ಆರೋಪ ಮಾಡುತ್ತಿರುವುದಕ್ಕೆ ಬೇಸರವಾಗಿದೆ. ನನಗೆ ಆ ಭಗವಂತ ಇದುವರೆಗೂ ಅಂತಹ ಪರಿಸ್ಥಿತಿ ತಂದಿಟ್ಟಿಲ್ಲ. ಈವರೆಗೆ ಯಾರಿಂದಲೂ ಕೈಚಾಚಿ ಪಡೆದುಕೊಳ್ಳುವ ಸ್ಥಿತಿ ಬಂದಿಲ್ಲ ಎಂದು ಜನಾರ್ದನ ರೆಡ್ಡಿ ಹೇಳಿದರು.