ಗಂಗಾವತಿ: ಬಳ್ಳಾರಿ ನಗರ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮೀ ಸ್ಪರ್ಧಿಸಲಿದ್ದಾರೆ. ಈ ಬಗ್ಗೆ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ಸಂಸ್ಥಾಪಕ ಜನಾರ್ದನ ರೆಡ್ಡಿ ಮಂಗಳವಾರ ಗಂಗಾವತಿಯಲ್ಲಿ ಘೋಷಣೆ ಮಾಡಿ, ಸವಾಲು ಹಾಕಿದ್ದಾರೆ.
ಇತಿಹಾಸ ಪ್ರಸಿದ್ಧ ಆನೆಗೊಂದಿಯಿಂದ ಪಕ್ಷ ದ ಪ್ರಚಾರ ರಥಯಾತ್ರೆಗೆ ಕುಟುಂಬ ಸಮೇತರಾಗಿ ಚಾಲನೆ ನೀಡಿದ ಅವರು, ಸೋದರನ ವಿರುದ್ಧ ತೊಡೆ ತಟ್ಟಿದರು. ಶ್ರೀರಾಮಚಂದ್ರನಿಗೆ ಆತ್ಮಸ್ಥೈರ್ಯ ತುಂಬಿದ ಕಿಷ್ಕಿಂದೆ ಪ್ರದೇಶದಿಂದಲೇ ಕಹಳೆ ಮೊಳಗಿಸಿದ್ದೇನೆ ಎಂದರು.
2008ರಲ್ಲಿ ಹಿರಿಯರಾದ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶದಿಂದ ಬಹುಮತ ಬರದಿದ್ದರೂ ಪಕ್ಷೇತರರ ನೆರವಿನಿಂದ ಸರಕಾರ ರಚನೆ ಮಾಡಿಸಿದೆ. ಅನಂತರ ರಾಜಕೀಯ ಸೇಡಿಗಾಗಿ ಹಲವು ಪ್ರಕರಣಗಳಲ್ಲಿ ತಮ್ಮನ್ನು ಸಿಲುಕಿಸಲಾಯಿತು. ಯಾರ ಮನೆಯನ್ನೂ ಕೊಳ್ಳೆ ಹೊಡೆದಿಲ್ಲ ಎಂದು ರೆಡ್ಡಿ ದೂರಿದರು.
ಈ ಸಂದರ್ಭ ಮಾತನಾಡಿದ ಪತ್ನಿ ಅರುಣಾ, ಶ್ರೀರಾಮಚಂದ್ರನಂತೆ ಪತಿ ಸಂಕಷ್ಟ ಅನುಭವಿಸಿದ್ದಾರೆ. ಅವರು ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದರೂ ಅವರಿಗೆ ಸಂಕಷ್ಟಗಳ ಸರಮಾಲೆ ಎದುರಾಯಿತು ಎಂದರು