Advertisement

ಗ್ರಾಮೀಣ ಪ್ರದೇಶದಲ್ಲಿ ಜಾನಪದ ಬೇರುಗಳು ಸುಭದ್ರ: ಕಾಗೋಡು

03:28 PM Apr 17, 2022 | Suhan S |

ಸಾಗರ: ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಜಾನಪದ ಬೇರುಗಳು ಭದ್ರವಾಗಿದೆ. ಆದರೆ ಜಾನಪದ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಾಮೂಹಿಕ ಪ್ರಯತ್ನ ಅಗತ್ಯ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.

Advertisement

ತಾಲೂಕಿನ ಸಿರಿವಂತೆಯಲ್ಲಿ ಭಾನುವಾರ ಕರ್ನಾಟಕ ಜಾನಪದ ಪರಿಷತ್, ಜಿಲ್ಲಾ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಸಿರಿವಂತೆ ಗ್ರಾಮ ಪಂಚಾಯ್ತಿ, ಕನ್ನಡ ಸಾಹಿತ್ಯ ಪರಿಷತ್ ಮತ್ತು ತಾಳಗುಪ್ಪ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯ್ತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ಎರಡನೇ ಜಾನಪದ ಸಮ್ಮೇಳನದಲ್ಲಿ ಅವರು ಜಾನಪದ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಜಾನಪದ ಕಲೆ ಜೀವಂತವಾಗಿದೆ. ಹಳ್ಳಿಯ ಜನರ ಬದುಕಿನ ಜೊತೆ ಬೆಸೆದುಕೊಂಡಿರುವ ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಸಮ್ಮೇಳನಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದರು.

ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಡಾ. ರಾಮಪ್ಪ ಸಿಗಂದೂರು, ಯುವಜನಾಂಗ ಜಾನಪದ ಕ್ಷೇತ್ರದತ್ತ ಆಸಕ್ತಿ ಬೆಳೆಸಿಕೊಳ್ಳಬೇಕು. ಅನಾದಿ ಕಾಲದಿಂದಲೂ ಆಧುನಿಕತೆಯ ಅಬ್ಬರದ ನಡುವೆಯೂ ಜಾನಪದ ಕಲೆ ಜೀವಂತವಾಗಿದೆ ಎಂದರೆ ಅದಕ್ಕೆ ಗ್ರಾಮೀಣ ಜನರ ಬದ್ಧತೆ ಕಾರಣವಾಗಿದೆ. ಇಂತಹ ಜೀವಂತ ಕಲೆಯನ್ನು ಉಳಿಸಿಕೊಳ್ಳುವ ಸಂಕಲ್ಪ ಮನೆಮನೆಯಲ್ಲೂ ಕೈಗೊಳ್ಳಬೇಕು ಎಂದು ತಿಳಿಸಿದರು.

ಸಮ್ಮೇಳನದ ಸರ್ವಾಧ್ಯಕ್ಷ ಶಿಕಾರಿಪುರದ ಡೊಳ್ಳಿನ ಹುಚ್ಚಪ್ಪ ಮಾತನಾಡಿ, ಜಾನಪದ ಕಲೆ ಬಗ್ಗೆ ಸರ್ಕಾರದ ನಿರಾಸಕ್ತಿ ಸಲ್ಲದು. ಅನಕ್ಷರಸ್ಥರ ಮೂಲಕ ಅಸ್ತಿತ್ವ ಕಂಡುಕೊಂಡ ಜಾನಪದ ಕಲೆಗೆ ಪೋಷಣೆಯ ಕೊರತೆ ಇದೆ. ಜಾನಪದ ಕಲೆ ಮತ್ತು ಕಲಾವಿದರ ಸಂಕಷ್ಟವನ್ನು ಅರಿತು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಯೋಜನೆಗಳನ್ನು ಸರ್ಕಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

Advertisement

ಇದೇ ಸಂದರ್ಭದಲ್ಲಿ ಸಾಹಿತಿ ವಿ.ಗಣೇಶ್ ಬರೆದಿರುವ ‘ಜಾನಪದ ಕಥೆಗಳು’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಮನೋಜ್ ಜನ್ನೆಹಕ್ಲು, ಗುಡ್ಡಪ್ಪ ಜೋಗಿ, ಡಾ. ಮೋಹನ್ ಚಂದ್ರಗುತ್ತಿ, ಸಾವಿತ್ರಿ ಚಂದ್ರಪ್ಪ, ಲೋಕೇಶ್ ಗಾಳಿಪುರ, ಲೋಕೇಶ್ ಎಸ್.ಎಲ್., ವಿ.ಟಿ.ಸ್ವಾಮಿ, ಬಿ.ಡಿ.ರವಿಕುಮಾರ್ ಇನ್ನಿತರರು ಹಾಜರಿದ್ದರು. ಸ್ನೇಹಸಾಗರ ಮಹಿಳಾ ಮಂಡಳಿ ಸದಸ್ಯರು ಪ್ರಾರ್ಥಿಸಿದರು. ಸತ್ಯನಾರಾಯಣ ಸಿರಿವಂತೆ ಸ್ವಾಗತಿಸಿದರು. ಅನಿಲ್ ಗೌಡ ವಂದಿಸಿದರು. ಪರಮೇಶ್ವರ ಕರೂರು ನಿರೂಪಿಸಿದರು.

ಇದಕ್ಕೂ ಮೊದಲು ದುರ್ಗಾಂಬಾ ದೇವಸ್ಥಾನದಿಂದ ಹೊರಟ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಜಾನಪದ ಕಲಾವಿದೆ ಲಕ್ಷ್ಮಮ್ಮ ಗಡೇಮನೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಅನೇಕ ಜಾನಪದ ಕಲಾತಂಡಗಳು ಪಾಲ್ಗೊಂಡು ಜಾನಪದ ಸೊಗಡನ್ನು ಪರಿಚಯ ಮಾಡಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next