Advertisement
ಹೇಳಿ, ನಿಮ್ಮ ಬಣ್ಣದ ಲೋಕದ ಇನ್ನಿಂಗ್ಸ್ ಶುರುವಾದ ಕತೆ…ಏಳನೇ ವಯಸ್ಸಿನವರೆಗೂ ನಾನು ಹೆದರುಪುಕ್ಕಲಿ ಥರಾ ಇದ್ದೆ. ಮಾತೇ ಆಡುತ್ತಿರಲಿಲ್ಲ. ಆಗ ನಾನು ಚುರುಕಾಗಬೇಕು ಅಂತ ನಮ್ಮಮ್ಮ “ವಿಜಯನಗರ ಬಿಂಬ’ ನಟನಾ ಶಾಲೆಗೆ ಸೇರಿಸಿದ್ರು. ಆಗಿನಿಂದಲೇ ರಂಗಭೂಮಿ ನಟಿಯಾದೆ. ಆಶ್ಚರ್ಯ ಅಂದ್ರೆ ಪಟಪಟ ಮಾತಾಡೋದು, ಎಲ್ಲರ ಜೊತೆ ಬೆರೆಯೋದು, ಅಷ್ಟೇ ಏಕೆ? ಜಗಳ ಆಡೋದನ್ನೂ ಕಲಿತೆ
ಟಿ.ಎಸ್. ನಾಗಾಭರಣ ಅವರ “ಮನಸೇ ಓ ಮನಸೇ’ ಧಾರಾವಾಹಿ ನನಗೆ ಮೊದಲ ಅವಕಾಶ ಕಲ್ಪಿಸಿತು. ನನಗಾಗ 7 ವರ್ಷ. ನಂತರ “ಕೇರ್ ಆಫ್ ಫುಟ್‌ಪಾತ್’, 2006ರಲ್ಲಿ ತೆರೆಕಂಡ ಯಜ್ಞಾ ಶೆಟ್ಟಿಯವರ ಮೊದಲ ಚಿತ್ರ “ಒಂದು ಪ್ರೀತಿಯ ಕಥೆ’ಯಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದೆ. ಬಳಿಕ ಶೇಷಾದ್ರಿಪುರಂ ಕಾಲೇಜಿನಲ್ಲಿ ಬಿ.ಕಾಂ. ಪದವಿ ಮುಗಿಸಿ ಎಂಎನ್‌ಸಿ ಕಂಪನಿಗೆ ಸೇರಿಕೊಂಡೆ. 3 ತಿಂಗಳಿಗೇ ಕೆಲಸ ಬಿಟ್ಟು ಬಂದೆ. ಒಂದೇ ಕಡೆ ಕೂತು ಕೆಲಸ ಮಾಡೋಕೆ ನನ್ನಿಂದ ಸಾಧ್ಯನೇ ಇಲ್ಲ. ನಂತರ ಉದಯ ವಾಹಿನಿಯಲ್ಲಿ “ರಾಗ ಅನುರಾಗ’ ಮತ್ತು ಕಸ್ತೂರಿಯಲ್ಲಿ “ಚಕ್ರವ್ಯೂಹ’ ಧಾರಾವಾಹಿಗಳಲ್ಲಿ ಅಭಿನಯಿಸಿದೆ. ಸದ್ಯಕ್ಕೆ “ಜೋಡಿಹಕ್ಕಿ’ಯಲ್ಲಿ ಬ್ಯುಸಿ. “ಜೋಡಿಹಕ್ಕಿ’ಯ ಜಾನಕಿ ಬಹಳ ಮುಗ್ದೆ. ನೀವೂ ಹಾಗೇನಾ?
ಜಾನಕಿ ಒಬ್ಬಳು ಮಾದರಿ ಹುಡುಗಿ. ಹುಡುಗರು “ನನಗೆ ಇಂಥಾ ಹುಡುಗಿ ಬೇಕಪ್ಪಾ’ ಅನ್ನುವಂಥ ಹುಡುಗಿ ಆಕೆ. ಆದರೆ, ನಾನು ಆಕೆಗೆ ತದ್ವಿರುದ್ಧ. ನನ್ನನ್ನು ಎಲ್ಲರೂ “ಗಂಡುಬೀರಿ’, “ಬಜಾರಿ’ ಅಂತಾನೇ ಕರೆಯೋದು. ಇಲ್ಲಿಯ ತನಕ ತಮಾಷೆಗೂ ಯಾರೂ ನನ್ನನ್ನು “ಪಾಪದ ಹುಡುಗಿ’ ಅಂದಿಲ್ಲ. ಒಂಥರಾ ಟಾಮ್ ಬಾಯ್ ಕ್ಯಾರೆಕ್ಟರ್ ನನ್ನದು. ಜಾಹ್ನವಿ ಸದಾ ಸಹನೆಯಿಂದ ಎಲ್ಲರ ಮನ ಗೆದ್ದರೆ, ನಾನು ಬಹಳ ಬೇಗ ಕೋಪಿಸಿಕೊಂಡು ರಾದ್ಧಾಂತ ಮಾಡೋ ಹುಡುಗಿ.
Related Articles
ಮೊದಮೊದಲಿಗೆ ತುಂಬಾ ಕಷ್ಟವಾಯ್ತು. ಹೀಗೇ ಇನ್ನೊಂದಷ್ಟು ದಿನ ಗಂಭೀರವಾಗಿ ಇದ್ದರೆ ನಾನು ಸತ್ತೇ ಹೋಗ್ತಿàನಿ ಅಂತನ್ನಿಸುತ್ತಿತ್ತು. ನನ್ನದಲ್ಲದ ಸ್ವಭಾವವನ್ನು ನನ್ನ ಮೇಲೆ ಹೇರಿಕೊಂಡಂತಾಗಿತ್ತು. ಈಗ ಅಭ್ಯಾಸವಾಗ್ತಾ ಇದೆ.
Advertisement
ಹಳ್ಳಿಯಲ್ಲಿ ಧಾರಾವಾಹಿಯ ಶೂಟಿಂಗ್ ಮಾಡುವ ಅನುಭವ ಹೇಗಿದೆ?ನಾನು ನನ್ನ ಜೀವನದಲ್ಲಿ ಹಳ್ಳಿಗೆ ಹೋಗಿರುವುದೇ ಅಪರೂಪ. ಶೂಟಿಂಗ್‌ನಲ್ಲಿ ಮೊದಮೊದಲಿಗೆ ತುಂಬಾ ಕಿರಿಕಿರಿ ಆಗ್ತಾ ಇತ್ತು. ಅಲ್ಲಿ ಇರುವುದೆಲ್ಲಾ ಮಣ್ಣಿನ ರಸ್ತೆಗಳು, ಅದರ ಮೇಲೆ ಸಗಣಿಯಂತೂ ಇದ್ದೇ ಇರುತ್ತದೆ. ಸೀರೆ ಉಟ್ಟುಕೊಂಡು ಓಡಾಡಲು ನನಗೆ ತುಂಬಾ ಕಷ್ಟ ಆಗುತ್ತೆ. ಅದೊಂದನ್ನು ಬಿಟ್ಟರೆ, ಎಲ್ಲಿ ನೋಡಿದರೂ ಹಸು, ಕರು, ಮೇಕೆ, ನಾಯಿ ಮುಂತಾದ ಸಾಕು ಪ್ರಾಣಿಗಳನ್ನು ನೋಡೋಕೆ ಖುಷಿಯಾಗುತ್ತೆ. ಹೊರಗಡೆ, ಜನರು ನಿಮ್ಮನ್ನು ಗುರುತಿಸಿ ಮಾತನಾಡಿಸಿದಾಗ ಆಗುವ ಅನುಭವದ ಬಗ್ಗೆ ಹೇಳಿ?
ಅದೊಂಥರಾ ಖುಷಿ ಮತ್ತು ಮುಜುಗರದ ಸನ್ನಿವೇಶ. ಮಾತನಾಡಿಸುವವರು ಜಾನಕಿ ಪಾತ್ರವನ್ನು ತಲೆಯಲ್ಲಿರಿಸಿಕೊಂಡು ನನ್ನನ್ನು ಪಾಪದ ಹುಡುಗಿಯೆಂಬಂತೆ ಮಾತಾಡಿಸ್ತಾರೆ. ನನಗೆ ಪಾಪದ ಹುಡುಗಿ ಥರಾ ಪೋಸ್ ಕೊಡಲೂ ಬರುವುದಿಲ್ಲ. ಚೈತ್ರಾ ರೀತಿ ವರ್ತಿಸಿದರೆ, ಅವರ ನಂಬಿಕೆಗೆ ಮೋಸ ಮಾಡಿದಂತಾಗುತ್ತದೆ. ಒಂಥರಾ ಸಂದಿಗ್ಧ ಪರಿಸ್ಥಿತಿ. ಎಷ್ಟೋ ಬಾರಿ ಜಾನಕಿ ಪಾತ್ರಧಾರಿ ನಾನಲ್ಲ ಎಂದು ಹೇಳಿ ಕಾಲ್ಕಿತ್ತಿರುವುದೂ ಇದೆ! ಧಾರಾವಾಹಿಯಲ್ಲಿ ಅದ್ಧೂರಿಯಾಗಿ ಮದ್ವೆಯಾದ್ರಿ. ನಿಜ ಜೀವನದಲ್ಲಿ ನಿಮ್ ಮದ್ವೆ ಹೇಗಿರುತ್ತೆ?
ತುಂಬಾ ಸಿಂಪಲ್ ಆಗಿರಬೇಕು. ರಿಜಿಸ್ಟರ್ ಮದುವೆ ಆಗ್ತಿನಿ. ಕಾಲೇಜಿನಲ್ಲಿ ಯಾರಾದರೂ ಹುಡುಗರು ಗುರಾಯಿಸಿದಾಗ ಏನ್ ಮಾಡ್ತಿದ್ರಿ?
ಕಾಲೇಜಿನಲ್ಲಿ ನಾನು ತುಂಬಾ ಜೋರಿದ್ದೆ. ಯಾರಾದ್ರೂ ಗುರಾಯಿಸಿದರೆ ಅವರ ಹತ್ತಿರ ಹೋಗಿ “ಗುರಾಯಿಸಿದ್ದು ಮುಗೀತಾ? ದಿನಾ ಎಷ್ಟೂಂತ
ನೋಡ್ತೀಯ? ನೋಡೋದನ್ನು ಬಿಟ್ಟು ಸರಿಯಾಗಿ ಓದು’ ಅಂತ ನೇರವಾಗಿ ಹೇಳ್ತಿದ್ದೆ. ಕಾಲೇಜಿನಲ್ಲಿ ರ್ಯಾಗ್ ಮಾಡಿಸಿಕೊಂಡ ಅನುಭವ ಹೇಳಿ?
ಡಿಗ್ರಿ ಮೊದಲ ವರ್ಷದಲ್ಲಿದ್ದಾಗ ಸೀನಿಯರ್ ಒಬ್ಬ ರ್ಯಾಗ್ ಮಾಡಿದ್ದ. ಎಲ್ಲರೆದುರೇ ಆತನಿಗೆ ಕಪಾಳಕ್ಕೆ ಹೊಡೆದು ಕಳಿಸಿದ್ದೆ. ಆಮೇಲೆ ಯಾರೂ
ನನ್ನನ್ನು ರ್ಯಾಗ್ ಮಾಡುವ ಧೈರ್ಯ ಮಾಡಲಿಲ. ಎಕ್ಸಾಂನಲ್ಲಿ ಕಾಪಿ ಗೀಪಿ ಮಾಡ್ತಿದ್ರಾ?
ಸ್ಕೂಲ್‌ನಲ್ಲಿ ಇರುವಾಗ ಯಾರಾದರೂ ಕಾಪಿ ಮಾಡಿದರೆ ನಾನು ಟೀಚರ್‌ಗೆ ಕಂಪ್ಲೇಂಟ್ ಮಾಡ್ತಿದ್ದೆ. ಆದರೆ, ಕಾಲೇಜಿಗೆ ಹೋದ ಮೇಲೆ ಗೊತ್ತಾಯ್ತು, ಕಾಪಿ ಮಾಡಿದರೆ ಮಾತ್ರ “ಹವಾ ಮೆಂಟೇನ್’ ಮಾಡೋಕ್ಕಾಗೋದು ಅಂತ. ಎಲ್ಲಾ ಪರೀಕ್ಷೆಯಲ್ಲೂ ಕಾಪಿ ಮಾಡಿದ್ದೇನೆ. ನನ್ನ ಪಕ್ಕ ಕೂರ್ತಿದ್ದ ನನ್ನ ಸ್ನೇಹಿತೆಯ ಕೈಬರಹ ಮತ್ತು ನನ್ನ ಕೈಬರಹಕ್ಕೆ ಸ್ವಲ್ಪ ಹೋಲಿಕೆ ಇತ್ತು. ನಾವಿಬ್ಬರೂ ಉತ್ತರ ಪತ್ರಿಕೆಗಳನ್ನು ಬದಲಾಯಿಸಿಕೊಂಡು ಕಾಪಿ ಮಾಡಿದ್ದೇವೆ. ಆದರೆ, ಒಮ್ಮೆಯೂ ಸಿಕ್ಕಿ ಬಿದ್ದಿಲ್ಲ ಗೊತ್ತಾ!? ಮೊದಲ ಬಾರಿಗೆ ನಿಮಗೆ ಕ್ರಶ್ ಆಗಿದ್ದು ಯಾವಾಗ? ಇತ್ತೀಚೆಗೆ ಯಾರ ಮೇಲೆ ಕ್ರಶ್ ಆಗಿದೆ?
ಮೊದಲ ಬಾರಿಗೆ ಕ್ರಶ್ ಆಗಿದ್ದು 9ನೇ ತರಗತಿಯಲ್ಲಿದ್ದಾಗ. ನನಗೆ ದಿನಾ ಒಬ್ಬೊಬ್ಬರ ಮೇಲೆ ಕ್ರಶ್ ಆಗುತ್ತೆ. ಇಂಥವರ ಮೇಲೆ ಎಂದು ಹೇಗೆ ಹೇಳ್ಲಿ
ಮೇಡಂ!? ನಿಮ್ಮ ಕನಸಿನ ಪಾತ್ರ?
ಚೈತ್ರಾ ರಾವ್ ಪಾತ್ರ. ಅಂದರೆ, ನಿಜ ಜೀವನದಲ್ಲಿ ನಾನು ಎಷ್ಟು ಬಜಾರಿಯೋ ಅಂಥ ಪಾತ್ರವನ್ನೇ ತೆರೆ ಮೇಲೂ ಮಾಡುವ ಆಸೆ ಇದೆ. ಈವರೆಗೆ ಮಾಡಿದ್ದೆಲ್ಲಾ ನನ್ನ ವ್ಯಕ್ತಿತ್ವಕ್ಕೆ ಸ್ವಲ್ಪವೂ ಒಗ್ಗದ ಪಾತ್ರಗಳೇ. ನಿಮಗೆ ಹೆಚ್ಚು ಕಿರಿಕಿರಿ ಅನ್ನಿಸುವುದು ಯಾವಾಗ?
ಶೂಟಿಂಗ್ ಸೆಟ್‌ನಲ್ಲಿ ಕೆಲವೊಮ್ಮೆ ಗಂಟೆಗಟ್ಟಲೆ ಕೆಲಸ ಇಲ್ಲದೆ ಮೇಕಪ್‌ನಲ್ಲಿ ಸುಮ್ಮನೆ ಕುಳಿತಿರಬೇಕು. ಆಗ ಕಿರಿಕಿರಿ ಆಗುತೆ¤ ಸಿನಿಮಾವೊಂದಕ್ಕೆ ನಿಮ್ಮನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿ ನಾಯಕ ಮತ್ತು ನಿರ್ದೇಶಕರನ್ನು ನೀವೇ ಆರಿಸಿಕೊಳ್ಳಿ ಎಂದರೆ ಯಾರನ್ನು ಆರಿಸುತ್ತೀರಾ?
ನಾಯಕ, ನಿರ್ದೇಶಕ ಇಬ್ಬರೂ “ಸುದೀಪ್’ ಮಾತ್ರ! ನಿಮ್ಮ ಡಯೆಟ್ ಹೇಗಿರುತ್ತೆ?
ಡಯೆಟ್ ಅಂದ್ರೆ ಏನು? ನಿಜವಾಗಿಯೂ ನನಗೆ ಗೊತ್ತಿಲ್ಲ. ನಾನು ಸಿಕ್ಕಿದ್ದನ್ನೆಲ್ಲಾ ತಿನ್ನುತ್ತೇನೆ. ಅದರಲ್ಲೂ ರೈಸ್ ಐಟಂಗಳೆಂದರೆ ಪ್ರಾಣ ನನಗೆ.
ಬಿಡುವಿನ ವೇಳೆಯಲ್ಲಿ ಲೇಸ್, ಬಿಸ್ಕತ್ತನ್ನು ಮೆಲ್ಲುತ್ತಿರುತ್ತೇನೆ. ಸಪೂರ ದೇಹ ನನಗೆ ಅನುವಂಶೀಯವಾಗಿ ಬಂದ ಉಡುಗೊರೆ. ಮತ್ತೆ ಪ್ರತಿದಿನ ನೃತ್ಯಾಭ್ಯಾಸ ಮಾಡ್ತೀನಲ್ಲಾ, ಅದರಿಂದ ಬೇಡದ ಕ್ಯಾಲೊರೀಸ್ ಬರ್ನ್ ಆಗುತ್ತೆ. ಅಕ್ಕಾ ನಿನ್ ಗಂಡ ಹೆಂಗಿರಬೇಕು?
ನಟ ಸುದೀಪ್ ಅಷ್ಟು ಎತ್ತರ ಇರಬೇಕು. ಸುದೀಪ್ ಥರಾ ಧ್ವನಿ ಹೊಂದಿರಬೇಕು. ಆ್ಯಟಿಟ್ಯೂಡ್ ಕೂಡಾ ಥೇಟ್ ಸುದೀಪ್ ಥರಾನೇ ಇರಬೇಕು. ಧೃವ ಸರ್ಜಾ ರೀತಿ ಮೈಕಟ್ಟು ಇರಬೇಕು. ಪಟಪಟನೆ ಮಾತನಾಡಬೇಕು. ಡಾನ್ಸ್, ಸಂಗೀತ ಎಲ್ಲಾ ಗೊತ್ತಿರಬೇಕು. ಒಟ್ನಲ್ಲಿ ನನ್ನ ಹುಡುಗ “ಸಕಲ ಕಲಾವಲ್ಲಭ’ ಆಗಿರ್ಬೇಕು ನಾನು ನನ್ನಿಷ್ಟ!
ಫೇವರಿಟ್ ತಿನಿಸು: ತಿರುಪತಿ ಲಡ್ಡು
ನೆಚ್ಚಿನ ಹೋಟೆಲ್: ವಿವಿ ಪುರಂ ಚಾಟ್ ಸ್ಟ್ರೀಟ್
ನೆಚ್ಚಿನ ನಟಿ: ರಾಧಿಕಾ ಪಂಡಿತ್
ಸ್ಯಾಂಡಲ್‌ವುಡ್‌ನಲ್ಲಿ ಉತ್ತಮ ಡ್ಯಾನ್ಸರ್: ರಾಧಿಕಾ ಪಂಡಿತ್, ಭಾವನಾ, ಧೃವ ಸರ್ಜಾ, ಪ್ರಿಯಾಮಣಿ
ಫೇವರಿಟ್ ಶಾಪಿಂಗ್ ಸ್ಪಾಟ್: ಒರಾಯನ್ ಮಾಲ್
ಫೇವರಿಟ್ ಡ್ರೆಸ್: ಟ್ರಾಕ್ ಪ್ಯಾಂಟ್, ಟೀ ಶರ್ಟ್
ಇಷ್ಟದ ರಾಜಕಾರಣಿ: ನರೇಂದ್ರ ಮೋದಿ
ಆಲ್‌ಟೈಮ್ ಫೇವರಿಟ್ ಹಾಡು: ಮತ್ತೆ ಮಳೆಯಾಗಿದೆ… (ಚಕ್ರವರ್ತಿ) ಈ ನಟಿಯರಲ್ಲಿ ನೀವು ಮೆಚ್ಚುವ ಗುಣ
ಬ್ರಹ್ಮಗಂಟು ಗೀತಾ: ಕ್ಯೂಟ್‌ನೆಸ್ ಮತ್ತು ಆತ್ಮವಿಶ್ವಾಸ
ನಾಗಿಣಿ ದೀಪಿಕಾ ದಾಸ್: ಎತ್ತರ
ಸುಬ್ಬಲಕ್ಷ್ಮಿ ಸಂಸಾರದ ಸುಬ್ಬಿ: ಧ್ವನಿ, ನಟನಾ ಕೌಶಲ್ಯ
ಪತ್ತೇದಾರಿ ಪ್ರತಿಭಾ: ಸಮರ್ಪಣಾ ಭಾವ ಚೇತನ ಜೆ.ಕೆ