Advertisement

ಡಿ.24ಕ್ಕೆ ಗದಗದಲ್ಲಿ ಜನಜಾಗೃತಿ ಸಮಾವೇಶ

08:56 AM Dec 06, 2017 | |

ಬೆಂಗಳೂರು: “ಸಮಾಜ ಮತ್ತು ಧರ್ಮ ಒಡೆಯುತ್ತಿರುವ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಲು ಡಿ.24ರಂದು ಗದಗದಲ್ಲಿ
ವೀರಶೈವ- ಲಿಂಗಾಯತ ಜನಜಾಗೃತಿ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಬಾಳೆಹೊನ್ನೂರು ರಂಭಾಪುರಿ
ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಜಗದ್ಗುರು ಪ್ರಸನ್ನ ರೇಣುಕಾ ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ
ಹೇಳಿದ್ದಾರೆ.

Advertisement

ಗುರುವಾರ ಬೆಂಗಳೂರಿನ ನಾಗರಭಾವಿಯಲ್ಲಿ ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆಯು ನಿರ್ಮಿಸಿರುವ “ಬಸವಶ್ರೀ
ಡಯಾಗ್ನಾಸ್ಟಿಕ್‌ ಮತ್ತು ನರರೋಗ ಪುನರುತ್ಥಾನ ಕೇಂದ್ರ’ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದ ಸಾಮರಸ್ಯ ಹಾಗೂ ಸಂಘಟನೆ ಉದ್ದೇಶದಿಂದ ಈ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದ ಮೂಲಕ ಸಮಾಜ
ಮತ್ತು ಧರ್ಮ ಒಡೆಯುವ ಕೆಲಸ ಮಾಡುತ್ತಿರುವ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಲಾಗುವುದು ಎಂದರು.

ಸಮಾವೇಶದಲ್ಲಿ ಸುತ್ತೂರು ಶ್ರೀಗಳು, ಸಿದ್ಧಗಂಗಾ ಶ್ರೀಗಳು ಸೇರಿದಂತೆ ನಾಡಿನ ಸಾವಿರಾರು ಮಠಾಧೀಶರು ಸಾಕ್ಷಿಯಾಗಲಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳ ಧುರೀಣರು ಪಾಲ್ಗೊಳ್ಳಲು ಅವಕಾಶವಿದೆ. ಅಖೀಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಸಮಾವೇಶ ಉದ್ಘಾಟಿಸಲಿದ್ದಾರೆ. ಸುಮಾರು 2 ಲಕ್ಷ ಜನ ಸೇರುವ ನಿರೀಕ್ಷೆಯಿದೆ. ವೀರಶೈವ- ಲಿಂಗಾಯತ ಸಮಾಜದ ಸಾಮರಸ್ಯ ಮತ್ತು ಸಂಘಟನೆಗೊಳಿಸುವ ಗುರುಪೀಠದ ಈ ಪ್ರಯತ್ನವನ್ನು ಪ್ರತಿಯೊಬ್ಬರೂ ಬೆಂಬಲಿಸಬೇಕು ಎಂದು ರಂಭಾಪುರಿ ಸ್ವಾಮೀಜಿ ಮನವಿ ಮಾಡಿದರು.

ಶಾಸ್ತ್ರ-ಪುರಾಣಗಳು ವೀರಶೈವ ಧರ್ಮದ ಹಿರಿಮೆ ಮತ್ತು ಪ್ರಾಚೀನತೆಯನ್ನು ಘಂಟಾ ಘೋಷವಾಗಿ ಸಾರಿವೆ. ವೀರಶೈವ ಧರ್ಮದ ಆದರ್ಶ ಮತ್ತು ಪರಂಪರೆಯ ಗಂಗೋತ್ರಿಯ ಮೂಲ ಆಚಾರ್ಯ ಪುರುಷರು ಜಗದ್ಗುರು ರೇಣುಕಾಚಾರ್ಯರು ಅನ್ನುವುದು ಪರಮ ಸತ್ಯ. ಆಚಾರ್ಯರು ಬಿತ್ತಿದ ಸಂಸ್ಕೃತಿಯ ಬೀಜವನ್ನು 12ನೇ ಶತಮಾನದಲ್ಲಿ ಬಸವಾದಿ ಶರಣರು ಫ‌ಲವತ್ತಗೊಳಿಸಿದ್ದಾರೆ. ಜಗದ್ಗುರು
ರೇಣುಕಾದಿ ಪಂಚಾಚಾರ್ಯರ ಬೆವರಿಲ್ಲದ ಹಾಗೂ ಬಸವಾದಿ ಶರಣರ ಶ್ರಮವಿಲ್ಲದ ವೀರಶೈವ ಧರ್ಮ ಪರಿಪೂರ್ಣ ಆಗಲು
ಸಾಧ್ಯವಿಲ್ಲ. ಪಂಚಾಚಾರ್ಯರು ಮತ್ತು ಬಸವಾದಿ ಶರಣರು ವೀರಶೈವ ಧರ್ಮದ ಎರಡು ಕಣ್ಣುಗಳಿದ್ದಂತೆ. ಆದರೆ, ಇತ್ತಿಚಿನ
ದಿನಗಳಲ್ಲಿ ಕೆಲವರು ತಿಳಿವಳಿಕೆ ಇಲ್ಲದೇ ವೀರಶೈವ-ಲಿಂಗಾಯತ ಎಂಬ ಹೆಸರಲ್ಲಿ ಕವಲು ದಾರಿಯಲ್ಲಿ ಸಾಗುತ್ತಿದ್ದಾರೆ. ಇದಕ್ಕೆ
ಮಹತ್ವ ಕೊಟ್ಟಿಲ್ಲ, ಕೊಡುವ ಅವಶ್ಯಕತೆಯೂಇಲ್ಲ. ಎಲ್ಲರೂ ತಮ್ಮ ಭಾವನೆಗಳಲ್ಲಿ ಪರಿವರ್ತನೆ ತಂದುಕೊಂಡು ಸಮಾಜದ
ಐಕ್ಯತೆಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಇದಕ್ಕೂ ಮೊದಲು ಮಾತನಾಡಿದ ಶ್ರೀ ಸಿದ್ಧಗಂಗಾ ಮಠದ ಸಿದ್ಧಲಿಂಗ ಮಹಾಸ್ವಾಮೀಜಿ, ಶ್ರೀಶೈಲ ಮಹಾಸಂಸ್ಥಾನದ ಡಾ. 
ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಉಜ್ಜಯಿನಿ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾ 
ಚಾರ್ಯ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಶಿಕ್ಷಣ ಕ್ಷೇತ್ರದಲ್ಲಿ ಸೇವೆಗೈದ ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ ಆರೋಗ್ಯ ಕ್ಷೇತ್ರಕ್ಕೆ ದಾಪುಗಾಲಿಟ್ಟಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ
ಸಂಸ್ಥೆಯ ಅಧ್ಯಕ್ಷ ಬಿ.ಎಸ್‌.ಪರಮ ಶಿವಯ್ಯ ಅವರ ಸಮಾಜಮುಖೀ ಕೆಲಸಗಳು ಮತ್ತು ಪರಿವರ್ತನಾ ಯಾತ್ರೆಯ ಮೂಲಕ
ನಾಡಿನ ಜನರ ಸಂಕಷ್ಟಗಳನ್ನು ತಿಳಿದುಕೊಳ್ಳುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌ .ಯಡಿಯೂರಪ್ಪ ಅವರ ಕಾರ್ಯವನ್ನು
ಸ್ವಾಮೀಜಿಗಳು ಪ್ರಶಂಸಿಸಿದರು. ಕಾರ್ಯಕ್ರಮದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ವಸತಿ ಸಚಿವ ಎಂ.ಕೃಷ್ಣಪ್ಪ ಮತ್ತಿತರರು ಇದ್ದರು.

Advertisement

ವೀರಶೈವ-ಲಿಂಗಾಯತರನ್ನು ಒಬಿಸಿಗೆ ಸೇರಿಸಲು ಮನವಿ
ಒಟ್ಟು ಜನಸಂಖ್ಯೆಯಲ್ಲಿ ಶೇ.24 ಇರುವ ನಾವು ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಹೋರಾಟ ಮಾಡಬೇಕು. ಅದಕ್ಕಾಗಿ ವೀರಶೈವ- ಲಿಂಗಾಯತರನ್ನು ಒಬಿಸಿಗೆ ಸೇರಿಸಬೇಕು. ಈ ಹಿಂದೆ ಕೇಂದ್ರದಿಂದ ಸಮಿತಿ ಬಂದಾಗ ಮನವಿ ಸಲ್ಲಿಸಲಾಗಿತ್ತು. ಅದರಂತೆ ಕೇಂದ್ರ ಸರ್ಕಾರ ಆದೇಶ ಮಾಡಿತ್ತು. ಆದರೆ, ರಾಜ್ಯದಲ್ಲಿ ತಹಶೀಲ್ದಾರರು ಪ್ರಮಾಣಪತ್ರ ನೀಡುತ್ತಿಲ್ಲ. ಹೀಗಾಗಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಮತ್ತೂಂದು ಆದೇಶ ಹೊರಡಿಸುವಂತೆ ಮಾಡಬೇಕು ಎಂದು  ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಬಿ.ಎಸ್‌. ಪರಮಶಿವಯ್ಯನವರು ವೇದಿಕೆಯ ಲ್ಲಿದ್ದ ಯಡಿಯೂರಪ್ಪ
ಅವರಿಗೆ ಮನವಿ ಸಲ್ಲಿಸಿದರು.

ಲಿಂಗಾಯತರ ಐಕ್ಯತೆ ಚೂರು: ದೇವೇಗೌಡ 
ಬಳ್ಳಾರಿ:
“ರಾಜ್ಯದ ಪ್ರಬಲ ಸಮುದಾಯವಾದ ಲಿಂಗಾಯತರ ಒಗ್ಗಟ್ಟು ಪ್ರತ್ಯೇಕ ಧರ್ಮದ ಹೆಸರಿನಡಿ ಚೂರು ಚೂರಾಗಿ ಹೋಗುತ್ತಿರುವುದು ವಿಷಾದನೀಯ’ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ವಿಷಾದಿಸಿದರು. ನಗರದಲ್ಲಿ ಮಂಗಳವಾರ ಮಾತನಾಡಿ, ವೀರಶೈವ ಬೇರೆ, ಲಿಂಗಾಯತ ಬೇರೆ ಎಂಬ ವಿವಾದ ಸೃಷ್ಟಿಸಿ, ಉಪಜಾತಿಗಳ ಹೆಸರಿನಡಿ ಜಾತಿ-ಜಾತಿಗಳ ನಡುವೆ ಸಂಘರ್ಷ ಉಂಟು ಮಾಡಲಾಗುತ್ತಿದೆ. ಈ ಹಿಂದೆ ಸರ್ಕಾರ ರಚನೆಯಲ್ಲಿ ಲಿಂಗಾಯತ ಶಾಸಕರು ನಿರ್ಣಾಯಕರಾಗಿದ್ದರು. ಅವರಿಗೆ
ಸಂಪುಟ ಸಚಿವರ ಸ್ಥಾನಮಾನ ದೊರಕುತ್ತಿತ್ತು. ಆದರೀಗ ದುರ್ಬೀನು ಹಾಕಿ ಲಿಂಗಾಯತ ಸಚಿವರನ್ನು ಹುಡುಕುವ
ಸನ್ನಿವೇಶ ನಿರ್ಮಾಣವಾಗಿದೆ ಎಂದರು.

ಪರಿವರ್ತನಾ ಯಾತ್ರೆ ಮೂಲಕ ಸುಮಾರು 76 ವಿಧಾನಸಭೆ ಕ್ಷೇತ್ರಗಳ ಪ್ರವಾಸ ಕೈಗೊಂಡು ಜನರ ಕಷ್ಟ-ಕಾರ್ಪಣ್ಯಗಳನ್ನು
ತಿಳಿದಿದ್ದೇನೆ. ಜನರ ಆಶೀರ್ವಾದದಿಂದ ಅಧಿಕಾರ ಸಿಕ್ಕರೆ, ತಕ್ಷಣ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇನೆ.

 ●ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next