ಮಂಗಳೂರು: ಲಾಕ್‌ಡೌನ್‌ನಿಂದ ಜನರಿಗೆ ತೊಂದರೆಯಾಗದಂತೆ ಕೇಂದ್ರ ಮತ್ತು ರಾಜ್ಯ ಸರಕಾರ ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಂಡಿವೆ. ಜನಧನ್ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ 2.16 ಲಕ್ಷ ಮಹಿಳೆಯರ ಖಾತೆಗಳಿಗೆ 10.79 ಕೋ.ರೂ. ಪಾವತಿಯಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಜಿಲ್ಲೆಯ 1,34,143 ರೈತರಿಗೆ 26.82 ಕೋ.ರೂ. ಬಿಡುಗಡೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ತಿಳಿಸಿದರು.
ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿ, ಮಾ. 23ರಿಂದಲೇ ಸಂಸದರ ವಾರ್ ರೂಂ ಮೂಲಕ ಜನತೆಗೆ ಸೇವೆ ನೀಡಲಾಗುತ್ತಿದೆ. 96,557 ಮಂದಿಗೆ ಆಹಾರದ ಪೊಟ್ಟಣ, 45,835 ಮಂದಿಗೆ ಆಹಾರ ಸಾಮಗ್ರಿ ಕಿಟ್ ವಿತರಿಸಲಾಗಿದೆ. 22,293 ಮಂದಿಗೆ ಮಾಸ್ಕ್, ಸ್ಯಾನಿಟೈಸರ್, ಔಷಧ ಒದಗಿಸಲಾಗಿದೆ ಎಂದರು.
ಎ. 8ರ ವರೆಗೆ ಸಹಾಯವಾಣಿಗೆ 7,612 ಕರೆಗಳು ಬಂದಿದ್ದು, 7,384 ಮಂದಿಯ ಸಮಸ್ಯೆ ಪರಿಹರಿಸಲಾಗಿದೆ. ಪ್ರಧಾನಮಂತ್ರಿ ಕೇರ್ ನಿಧಿಗೆ 4,862 ಮಂದಿ ದೇಣಿಗೆ ನೀಡಿದ್ದಾರೆ. ಗೃಹಸಾಲ ಮತ್ತು ಇತರ ಕೆಲವು ಸಾಲಗಳ ಕಂತು ಪಾವತಿಗೆ ಮೂರು ತಿಂಗಳ ವಿನಾಯಿತಿ ನೀಡಲು ಕೇಂದ್ರ ಸೂಚಿಸಿದೆ. ಉಜ್ವಲ ಯೋಜನೆಯಡಿ ಮೂರು ತಿಂಗಳ ಉಚಿತ ಗ್ಯಾಸ್ ನೀಡಲಾಗುತ್ತಿದೆ. ವಿದ್ಯುತ್ ಬಿಲ್ ಪಾವತಿಸದಿದ್ದರೂ ಮೂರು ತಿಂಗಳು ಸಂಪರ್ಕ ಕಡಿತ ಮಾಡದಂತೆ ಸರಕಾರ ಸೂಚನೆ ನೀಡಿದೆ ಎಂದರು.
ಸ್ಲಂವಾಸಿಗಳು ಮತ್ತು ಬಡವರಿಗೆ ಅರ್ಧ ಲೀ. ಹಾಲು ಉಚಿತವಾಗಿ ನೀಡುವಂತೆ ಮುಖ್ಯಮಂತ್ರಿ ಆದೇಶಿಸಿದ್ದು, ಹೈನುಗಾರರಿಗೆ ನೆರವಾಗಿದೆ. ದ.ಕ.ದಲ್ಲಿ ಕೋವಿಡ್ 19 ಹರಡದಂತೆ ನಿಯಂತ್ರಿಸಲು ಆರಂಭದ 3 ದಿನ ಅನಿವಾರ್ಯ ವಾಗಿ ಸಂಪೂರ್ಣ ಬಂದ್ ಮಾಡಲಾಗಿತ್ತು. ತಜ್ಞರ ತಂಡ ನೀಡಿದ ವರದಿಯನ್ನು ಪರಿಶೀಲಿಸಿ ಲಾಕ್‌ಡೌನ್ ಬಗ್ಗೆ ಸರಕಾರ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದರು.