Advertisement

ಜ. 8: ಅದಮಾರು ಶ್ರೀಗಳ ಪುರಪ್ರವೇಶ

01:23 AM Jan 05, 2020 | mahesh |

ಉಡುಪಿ: ಪರ್ಯಾಯ ಸಂಚಾರ ಪೂರೈಸಿರುವ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಜ. 8ರ ಅಪರಾಹ್ನ 2.30ಕ್ಕೆ ಜೋಡುಕಟ್ಟೆಯಿಂದ ಪುರಪ್ರವೇಶ ಮಾಡುವರು ಎಂದು ಶ್ರೀಕೃಷ್ಣ ಸೇವಾ ಬಳಗದ ಗೌರವಾಧ್ಯಕ್ಷ, ಶಾಸಕ ಕೆ. ರಘುಪತಿ ಭಟ್‌ ತಿಳಿಸಿದರು.

Advertisement

ಪುರಪ್ರವೇಶದ ಮೆರವಣಿಗೆ ಜೋಡುಕಟ್ಟೆಯಿಂದ ತೆಂಕುಪೇಟೆ ಮಾರ್ಗವಾಗಿ ರಥಬೀದಿಗೆ ಬಂದ ಬಳಿಕ ಶ್ರೀ ಚಂದ್ರಮೌಳೀಶ್ವರ, ಶ್ರೀ ಅನಂತೇಶ್ವರ, ಶ್ರೀಕೃಷ್ಣ ದೇವರ ದರ್ಶನ ಪಡೆಯುತ್ತಾರೆ. ಸಂಜೆ 5.55ಕ್ಕೆ ಅದಮಾರು ಮಠವನ್ನು ಪ್ರವೇಶಿಸುವರು. ರಾತ್ರಿ ಸುಮಾರು 8 ಗಂಟೆಗೆ ಉತ್ಸವವಾದ ಬಳಿಕ ಸ್ವಾಮೀಜಿಯವರಿಗೆ ಪೌರ ಸಮ್ಮಾನ ನಡೆಯಲಿದೆ. ನಗರಸಭೆ ಆಡಳಿತ ಮಂಡಳಿ ಅಸ್ತಿತ್ವದಲ್ಲಿಲ್ಲದ ಕಾರಣ ಪೌರಾಡಳಿತ ಮತ್ತು ಕಂದಾಯ ಸಚಿವ ಆರ್‌. ಅಶೋಕ್‌ ಅವರು ಪೌರಸಮ್ಮಾನವನ್ನು ನೆರವೇರಿಸುವರು.

ಪರ್ಯಾಯ ಶ್ರೀ ಪಲಿಮಾರು ಮಠಾಧೀಶರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮೊದಲಾದ ನಾಯಕರು ಭಾಗವಹಿಸುವರು. ಶಿಕ್ಷಣ ತಜ್ಞ ಡಾ| ಗುರುರಾಜ ಕರ್ಜಗಿ ಅಭಿನಂದನ ಭಾಷಣ ಮಾಡಲಿರುವರು. ಹಿಂದಿನ ಪೊಲೀಸ್‌ ಅಧಿಕಾರಿ ಅಣ್ಣಾಮಲೈ ಶುಭಾಶಂಸನೆಗೈಯುವರು ಎಂದರು.

ಪುರಪ್ರವೇಶದ ಮೆರವಣಿಗೆ ಕುರಿತು ಯಶಪಾಲ್‌ ಸುವರ್ಣ ಮಾಹಿತಿ ನೀಡಿದರು. ಶ್ರೀಕೃಷ್ಣ ಸೇವಾ ಬಳದ ಪದಾಧಿಕಾರಿಗಳಾದ ಅನಂತ ನಾಯಕ್‌, ವೈ.ಎನ್‌. ರಾಮಚಂದ್ರ ರಾವ್‌, ದಿನೇಶ ಪುತ್ರನ್‌, ಪ್ರದೀಪ ಕುಮಾರ್‌, ಪ್ರದೀಪ ರಾವ್‌, ಮಾಧವ ಉಪಾಧ್ಯಾಯ, ಮಠದ ಮ್ಯಾನೇಜರ್‌ ರಾಘವೇಂದ್ರ ಭಟ್‌, ಅದಮಾರು ಮಠ ಅತಿಥಿಗೃಹದ ಮ್ಯಾನೇಜರ್‌ ಗೋವಿಂದರಾಜ್‌ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಸೊಗಡಿನ ಸಿಂಗಾರ
 ತುಳುನಾಡಿನ ಸಾಂಸ್ಕೃತಿಕ ಸೊಗಡು ಅನಾವರಣಗೊಳ್ಳುವಂತೆ ಸಿಂಗರಿಸಲು ಸಿದ್ಧತೆಗಳಾಗುತ್ತಿವೆ.
 ತಳಿರು ತೋರಣಗಳನ್ನು ನಿರ್ಮಿಸುವಾಗ ನೆಡುವ ಬಾಳೆಗಿಡಗಳನ್ನು ಬೇರುಸಹಿತ ಅಳವಡಿಸಲು ಸೂಚಿಸಲಾಗಿದೆ. ಇದರಿಂದಾಗಿ ಅನಂತರವೂ ಬಾಳೆಗಿಡಗಳನ್ನು ನೆಡಬಹುದಾಗಿದೆ.
 ಸ್ವಾಗತ ಕೋರುವ ಕಂಬಗಳಿಗೆ ಆಚಾರ್ಯ ಮಧ್ವರಿಂದ ಶ್ರೀವಿಬುಧೇಶತೀರ್ಥರವರೆಗಿನ ಹಿಂದಿನ ಯತಿಗಳ ಹೆಸರುಗಳನ್ನು ಬರೆಸಲಾಗುವುದು.
 ಜಾನಪದ ಸೊಬಗುಳ್ಳ ಸಹಜ ಅಲಂಕಾರಗಳ ಸ್ವಾಗತ ಕಮಾನುಗಳನ್ನು ನಿರ್ಮಿಸಲು ಆಸಕ್ತ ಯುವಕರಿಗೆ ಅವಕಾಶ ಕಲ್ಪಿಸಲಾಗಿದೆ.
 ಪೂರ್ಣಪ್ರಜ್ಞ ಸಂಸ್ಥೆಗಳ ಸುಮಾರು 2,000 ವಿದ್ಯಾರ್ಥಿಗಳು ವಿವಿಧ ರಾಜ್ಯಗಳ ಜಾನಪದ ನೃತ್ಯಗಳ ಮೂಲಕ ಪುರಪ್ರವೇಶದ ಸ್ವಾಗತ ಮೆರವಣಿಗೆಯಲ್ಲಿ ಬರಲಿದ್ದಾರೆ. ಸುಮಾರು 67 ತಂಡಗಳಿಗೆ ತರಬೇತಿ ನಡೆಯುತ್ತಿದೆ. ಇದಲ್ಲದೆ ಸ್ಥಳೀಯ ಭಜನಾ ಮಂಡಳಿಗಳು ಇರುತ್ತವೆ. ಟ್ಯಾಬ್ಲೋಗಳು ಇರುವುದಿಲ್ಲ.
 ಪೌರ ಸಮ್ಮಾನ, ಅಭಿನಂದನ ಸಮಾರಂಭದಲ್ಲಿ ಗಂಧದ ಹಾರ, ಮಣಿಗಳನ್ನು ಪೋಣಿಸಿದ ಹಾರಗಳಿಗೆ ಅವಕಾಶವಿರುವುದಿಲ್ಲ.
 ಪ್ಲಾಸ್ಟಿಕ್‌ ಫ್ಲೆಕ್ಸ್‌ಗಳಿಗೆ ಅವಕಾಶವಿಲ್ಲ. ಬಟ್ಟೆಯ ಫ‌ಲಕ ಅಥವಾ ಬ್ಯಾನರ್‌ಗಳನ್ನು ಬಳಸುವಂತೆ ವಿನಂತಿಸಲಾಗಿದೆ.

Advertisement

 ಪರ್ಯಾಯಕ್ಕೆ ಸಂಬಂಧಿಸಿ ಜ. 6ರ ಬೆಳಗ್ಗೆ 10ಕ್ಕೆ ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಲಿದೆ.
 ಜ. 15ರ ಅಪರಾಹ್ನ 2.30ಕ್ಕೆ ಅದಮಾರು, ಮಲ್ಪೆ, ಕೊಡವೂರು, ಮಟ್ಟು ಕಡೆಗಳಿಂದ ಹೊರೆಕಾಣಿಕೆ ಮೆರವಣಿಗೆ ಗೋವಿಂದ ಕಲ್ಯಾಣ ಮಂಟಪದಿಂದ ಬರಲಿದೆ. ಇನ್ನು 15 ದಿನಗಳಿಗೊಮ್ಮೆ ಹೊರೆಕಾಣಿಕೆ ಸಮರ್ಪಣೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next