Advertisement

ಜ.29ಕ್ಕೆ ಸಂಪುಟ ವಿಸ್ತರಣೆ?

10:22 AM Jan 27, 2020 | mahesh |

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಜ.29ಕ್ಕೆ ನಡೆಯುವ ಸಾಧ್ಯತೆ ಇದ್ದು, ಸಚಿವಗಿರಿಗಾಗಿ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಶಾಸಕರು ಹಾಗೂ ಮೂಲ ಬಿಜೆಪಿ ಶಾಸಕರ ಲಾಬಿ ಚುರುಕಾಗಿದೆ.

Advertisement

ಉಪಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಸಚಿವ ಸ್ಥಾನ ನೀಡಿ ಉಳಿಕೆ ಆರು ಸ್ಥಾನಗಳನ್ನು ಮೂಲ ಬಿಜೆಪಿಗರಿಗೆ ಹಂಚಿಕೆ ಮಾಡುವ ಸಾಧ್ಯತೆ ಇದೆ. ಜೂನ್‌ ವೇಳೆಗೆ ವಿಧಾನ ಪರಿಷತ್‌ನಲ್ಲಿ ಏಳು ಸ್ಥಾನಗಳು ತೆರವಾಗಲಿದ್ದು, ಆಗ ಕೆಲವರನ್ನು ಪರಿಷತ್‌ಗೆ ಆಯ್ಕೆ ಮಾಡುವುದು. ಅನಂತರ ಸಂಪುಟ ಪುನಾರಚಿಸಿ ಅವರಿಗೆ ಸಚಿವ ಸ್ಥಾನಮಾನ ನೀಡುವ ಲೆಕ್ಕಾಚಾರ ನಡೆದಿದೆ ಎನ್ನಲಾಗಿದೆ.

ಈ ಮಧ್ಯೆ, ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂಬ ಯಡಿಯೂರಪ್ಪ ಹೇಳಿಕೆಗೆ ಹಲವರಿಂದ ವಿರೋಧ ವ್ಯಕ್ತ ವಾಗಿತ್ತಾದರೂ ಎಂ.ಟಿ.ಬಿ. ನಾಗರಾಜ್‌ ಹಾಗೂ ಎಚ್‌. ವಿಶ್ವನಾಥ್‌ ಅವರಿಗೆ ಟಿಕೆಟ್‌ ನೀಡುವಾಗಲೇ ಸ್ಪರ್ಧೆ ಮಾಡುವುದು ಬೇಡ, ಸೋತರೆ ಸಚಿವ ಸ್ಥಾನ ಇಲ್ಲ ಎಂದು ಹೇಳಲಾಗಿತ್ತು ಎಂದು ಎಸ್‌.ಟಿ. ಸೋಮಶೇಖರ್‌ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಇದರಿಂದಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಬಿಜೆಪಿ ಸೇರಿದ್ದ 17 ಮಂದಿಯ ಗುಂಪಿನಲ್ಲೇ ಒಡಕು ಮೂಡಿದಂತಿದೆ. ಈ ಮಧ್ಯೆ, ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಶನಿವಾರ ಭೇಟಿಯಾಗಿ ಚರ್ಚಿಸಿದ್ದು, ಸಚಿವರ ಪಟ್ಟಿ ಬಹುತೇಕ ಅಂತಿಮಗೊಂಡಿದೆ ಎಂಬ ಮಾತುಗಳಿವೆ.

ಶನಿವಾರ ಬೆಳಗ್ಗೆ ಬಿ.ಎಲ್‌. ಸಂತೋಷ್‌ ಅವರು ಯಡಿಯೂರಪ್ಪ ಅವರ ಡಾಲರ್ ಕಾಲನಿ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದರು. ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ಸಂಬಂಧ ಚರ್ಚಿಸಿದ್ದರು. ಶನಿವಾರ ಉಭಯ ನಾಯಕರು ಚರ್ಚೆ ನಡೆಸಿದ್ದು, ಸರಕಾರದ ಆಡಳಿತ ಯಂತ್ರ ಸುಗಮವಾಗಿ ನಡೆಯುವ ಜತೆಗೆ ಪಕ್ಷ, ಸಂಘಟನೆಗೆ ಯಾವುದೇ ರೀತಿಯಲ್ಲಿ ಹಾನಿಯಾಗದ ರೀತಿಯಲ್ಲಿ ಸಮತೋಲನದಲ್ಲಿ ಸಂಪುಟ ವಿಸ್ತರಣೆಗೆ ಅಂತಿಮ ರೂಪ ನೀಡಲಾಗಿದೆ ಎನ್ನಲಾಗಿದೆ.

Advertisement

ಉಪಚುನಾವಣೆಯಲ್ಲಿ ಗೆದ್ದವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ವರಿಷ್ಠರಿಂದ ಯಾವುದೇ ತಕರಾರು ಇಲ್ಲ. ಆದರೆ ಪರಾಭವಗೊಂಡವರಿಗೆ ಮತ್ತೆ ಸ್ಥಾನಮಾನ ಕಲ್ಪಿಸುವುದಕ್ಕೆ ಒಲವಿಲ್ಲ. ಈ ವಿಚಾರದಲ್ಲೇ ಯಡಿಯೂರಪ್ಪ ಹಾಗೂ ಹೈಕಮಾಂಡ್‌ ನಡುವೆ ಹಗ್ಗ ಜಗ್ಗಾಟ ನಡೆದಿತ್ತು. ಜತೆಗೆ ಹಾಲಿ ಮೂರು ಉಪಮುಖ್ಯಮಂತ್ರಿ ಹುದ್ದೆ ರದ್ದುಪಡಿಸಬೇಕು ಎಂಬ ಯಡಿಯೂರಪ್ಪ ಆಗ್ರಹ ಕೂಡ ವರಿಷ್ಠರ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಈಗ ಸಾಕಷ್ಟು ಲೆಕ್ಕಾಚಾರ ನಡೆಸಿದ ಬಳಿಕ ವರಿಷ್ಠರು ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ನೀಡುವ ನಿರೀಕ್ಷೆ ಮೂಡಿದೆ.

ನಗುಮುಖದಲ್ಲಿ ಬಿಎಸ್‌ವೈ
ಬಿ.ಎಲ್‌. ಸಂತೋಷ್‌ ಅವ ರೊಂದಿಗೆ ಶನಿವಾರ ಬೆಳಗ್ಗೆ ಚರ್ಚಿ ಸಿದ ಯಡಿಯೂರಪ್ಪ ಅವರು ಬಳಿಕ ಗೃಹ ಕಚೇರಿ “ಕೃಷ್ಣಾ’ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ದಾವೋಸ್‌ ಪ್ರವಾಸ ಕುರಿತು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯುದ್ದಕ್ಕೂ ಯಡಿಯೂರಪ್ಪ ಅವರು ನಗುಮೊಗದಲ್ಲೇ ವಿವರ ನೀಡಿದ್ದು ಗಮನ ಸೆಳೆಯಿತು. ಇದೇ ವೇಳೆ ಸಂಪುಟ ವಿಸ್ತರಣೆ, ದಿಲ್ಲಿ ಪ್ರವಾಸ ಸಾಧ್ಯತೆ, ಬಿ.ಎಲ್‌. ಸಂತೋಷ್‌ ಭೇಟಿ ವಿಚಾರ ಬಗ್ಗೆ ಕೇಳಿದ ಪ್ರಶ್ನೆಗೆಯಡಿಯೂರಪ್ಪ ಅವರು, ದಾವೋಸ್‌ ಪ್ರವಾಸ ವಿವರ ನೀಡುವುದಕ್ಕಷ್ಟೇ ಪತ್ರಿಕಾಗೋಷ್ಠಿ ಸೀಮಿತ ಎಂದು ನಗುತ್ತಲೇ ಹೇಳಿ ಪ್ರತಿಕ್ರಿಯಿಸಲು ನಿರಾಕರಿಸಿದರು. ಸಿಎಂ ಅವರ ಲವಲವಿಕೆ, ನಗುಮುಖದಲ್ಲಿ ಪ್ರತಿಕ್ರಿಯಿಸಿದ ರೀತಿ ಸಂಪುಟ ವಿಸ್ತರಣೆ ಕಸರತ್ತು ನಿರ್ಣಾಯಕ ಹಂತ ತಲುಪಿರುವ ನಿರೀಕ್ಷೆ ಮೂಡಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next