ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಶನಿವಾರ (ನ.02) ನಡೆದ ಎನ್ಕೌಂಟರ್ ನಲ್ಲಿ ಭದ್ರತಾ ಪಡೆಗಳು ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿವೆ.
ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಗುಂಡಿನ ಚಕಮಕಿ ಆರಂಭವಾಯಿತು. ಶ್ರೀನಗರದ ಖನ್ಯಾರ್ ಪ್ರದೇಶದಲ್ಲಿ ಇದೇ ರೀತಿಯ ಎನ್ಕೌಂಟರ್ ನಡೆದ ಕೆಲ ಗಂಟೆಗಳ ಬಳಿಕ ಈ ಎನ್ ಕೌಂಟರ್ ನಡೆದಿದೆ.
ಭಯೋತ್ಪಾದಕರಲ್ಲಿ ಒಬ್ಬ ವಿದೇಶಿಯನಾಗಿದ್ದು, ಇನ್ನೊಬ್ಬ ಸ್ಥಳೀಯ ನಿವಾಸಿ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಆದರೆ, ಉಗ್ರರು ಯಾವ ಗುಂಪಿಗೆ ಸೇರಿದವರು ಎಂಬುದು ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರದೇಶದಲ್ಲಿ ಉಗ್ರರು ಅಡಗಿರುವ ಮಾಹಿತಿ ಪಡೆದ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ.
ಇದು ಶುಕ್ರವಾರದಿಂದ ಕಾಶ್ಮೀರ ಕಣಿವೆಯಲ್ಲಿ ನಡೆದ ನಾಲ್ಕನೇ ಭಯೋತ್ಪಾದಕ ಘಟನೆಯಾಗಿದೆ. ಉತ್ತರ ಪ್ರದೇಶದ ಇಬ್ಬರು ವಲಸೆ ಕಾರ್ಮಿಕರ ಮೇಲೆ ಶುಕ್ರವಾರ ಬುದ್ಗಾಮ್ ಜಿಲ್ಲೆಯಲ್ಲಿ ಗುಂಡು ಹಾರಿಸಲಾಗಿದೆ. ದಾಳಿಯ ವೇಳೆ ಇಬ್ಬರಿಗೂ ಗಾಯಗಳಾಗಿದ್ದು, ಶ್ರೀನಗರದ ಜೆವಿಸಿ ಆಸ್ಪತ್ರೆ ಬೆಮಿನಾಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.