ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರು ಸೇರಿದಂತೆ ಹಿಂದೂಗಳ ಮೇಲೆ ಉಗ್ರ ದಾಳಿಗಳು ಹೆಚ್ಚುತ್ತಿರುವ ಹಿನ್ನೆಲ್ಲೆಯಲ್ಲಿ ಅವರು ಅಧಿಕ ಸಂಖ್ಯೆಯಲ್ಲಿ ವಾಸಿಸುವ ರಜೌರಿ ಮತ್ತು ಪೂಂಛ್ ಜಿಲ್ಲೆಗಳಲ್ಲಿ 2,000ಕ್ಕೂ ಹೆಚ್ಚು ಸಿಆರ್‌ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಭಾನುವಾರ ಮತ್ತು ಸೋಮವಾರ ನಡೆದ ಅವಳಿ ಉಗ್ರ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 6 ಮಂದಿ ಹಿಂದೂಗಳು ಮೃತಪಟ್ಟು, ಇತರೆ 11 ಮಂದಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
“ಸಿಆರ್‌ಪಿಎಫ್ ಇನ್ಸ್‌ಪೆಕ್ಟರ್ ಜನರಲ್ ಮತ್ತು ಇತರೆ ಹಿರಿಯ ಅಧಿಕಾರಿಗಳು ಪಡೆಗಳ ನಿಯೋಜನೆಯ ಮೇಲ್ವಿಚಾರಣೆ ವಹಿಸಿದ್ದಾರೆ. ಕಾಶ್ಮೀರಿ ಪಂಡಿತರು ಸೇರಿದಂತೆ ಹಿಂದೂಗಳು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸುವ ದೃಷ್ಟಿಯಿಂದ ರಜೌರಿ ಮತ್ತು ಪೂಂಛ್ ಜಿಲ್ಲೆಯಲ್ಲಿ 2,000ಕ್ಕೂ ಹೆಚ್ಚು ಸಿಬ್ಬಂದಿ ಒಳಗೊಂಡಿರುವ 20 ಸಿಆರ್‌ಪಿಎಫ್ ಬೆಟಾಲಿಯನ್ ನಿಯೋಜಿಸಲಾಗಿದೆ,’ ಎಂದು ಸಿಆರ್‌ಪಿಎಫ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಜೌರಿ ಜಿಲ್ಲೆಯಲ್ಲಿ ಭಾನುವಾರ ಹಿಂದೂಗಳನ್ನು ಗುರಿಯಾಗಿಸಿಕೊಂಡು ಉಗ್ರರು ಗುಂಡಿನ ದಾಳಿ ನಡೆಸಿದ್ದ ಪರಿಣಾಮ ನಾಲ್ವರು ಮೃತಪಟ್ಟು, 6 ಮಂದಿ ಗಾಯಗೊಂಡಿದ್ದರು. ಡಾಂಗ್ರಿ ಗ್ರಾಮದಲ್ಲಿ ಸೋಮವಾರ ಉಗ್ರರು ಸುಧಾರಿತ ಸ್ಫೋಟಕ ಸಾಧನ(ಐಇಡಿ) ಸ್ಫೋಟಿಸಿದ ಪರಿಣಾಮ ಇಬ್ಬರು ಮಕ್ಕಳು ಮೃತಪಟ್ಟು, 6 ಮಂದಿ ಗಾಯಗೊಂಡಿದ್ದರು. ಈ ಘಟನೆಗಳಿಂದ ಭೀತಿಗೊಂಡ ಅಲ್ಪಸಂಖ್ಯಾತ ಹಿಂದೂ ಸಮುದಾಯ ಭದ್ರತೆ ಹೆಚ್ಚಿಸುವಂತೆ ಆಗ್ರಹಿಸಿ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿತ್ತು.