Advertisement

ಉಗ್ರರ ಮೂಲೋತ್ಪಾಟನೆ ಜತೆ ವಲಸಿಗರ ರಕ್ಷಣೆಯೂ ಮುಖ್ಯ

12:32 AM Jun 01, 2022 | Team Udayavani |

ದೇಶದ ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ ಎನ್ನುವಷ್ಟರಲ್ಲಿ ಮತ್ತೆ ಉಗ್ರರು ಬಾಲ ಬಿಚ್ಚತೊಡಗಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ ಹಿಂಪಡೆದ ಬಳಿಕ ಕಣಿವೆ ರಾಜ್ಯದಲ್ಲಿ ಉಗ್ರರ ಅಟ್ಟಹಾಸಕ್ಕೆ ಕಡಿವಾಣ ಬಿದ್ದಿತ್ತು. ಕೇಂದ್ರ ಸರಕಾರ ಗಡಿ ರಾಜ್ಯದ ಭದ್ರತೆಯನ್ನು ಸಂಪೂರ್ಣವಾಗಿ ತನ್ನ ಸುಪರ್ದಿಗೆ ತೆಗೆದುಕೊಂಡಾಗಿನಿಂದ ಉಗ್ರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿದೆ. ಆದರೂ ಆಗೊಮ್ಮೆ ಈಗೊಮ್ಮೆ ಎಂಬಂತೆ ಪಾಕಿಸ್ಥಾನಿ ಪ್ರೇರಿತ ಉಗ್ರರು ಕಣಿವೆ ರಾಜ್ಯದಲ್ಲಿನ ಸ್ಥಳೀಯರನ್ನು ಬಳಸಿಕೊಂಡು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಿದಾಗಲೆಲ್ಲ ಸರಕಾರ ಉಗ್ರರನ್ನು ಸದೆಬಡಿಯುವ ಮೂಲಕ ಅವರ ದುಸ್ಸಾಹಸಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿತ್ತು.

Advertisement

ಇದೀಗ ಕಣಿವೆ ರಾಜ್ಯದಲ್ಲಿ ಮತ್ತೆ ಉಗ್ರರು ಸಕ್ರಿಯರಾಗಿದ್ದು, ಟಾರ್ಗೆಟ್‌ ಹತ್ಯೆಯನ್ನು ತಮ್ಮ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು ನಿರ್ದಿಷ್ಟ ವ್ಯಕ್ತಿ ಅಥವಾ ಸಮುದಾಯಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ. ತಿಂಗಳಿಂದೀಚೆಗೆ ಕಾಶ್ಮೀರ ಮತ್ತು ಸುತ್ತಲಿನ ಪ್ರದೇಶಗಳು ನಿರಂತರವಾಗಿ ಉಗ್ರರ ದಾಳಿ, ಭಾರತೀಯ ಸಶಸ್ತ್ರ ಪಡೆಗಳ ಪ್ರತಿದಾಳಿ ಮತ್ತಿತರ ಹಿಂಸಾತ್ಮಕ ಘಟನೆಗಳಿಗೆ ಸಾಕ್ಷಿಯಾಗುತ್ತಲೇ ಇದೆ. ಈ ದಾಳಿ, ಪ್ರತಿದಾಳಿಗಳಲ್ಲಿ ಅಮಾಯಕ ನಾಗರಿಕರೂ ಸಾವನ್ನಪ್ಪಿದ್ದಾರೆ. ಈ ಎಲ್ಲ ಪ್ರಕರಣಗಳ ಸಂದರ್ಭದಲ್ಲೂ ಭಾರತೀಯ ಯೋಧರು ಸೂಕ್ತ ಪ್ರತ್ಯುತ್ತರ ನೀಡಿ ಉಗ್ರರ ಮಾರಣಹೋಮ ನಡೆಸುತ್ತಲೇ ಬಂದಿದ್ದರೂ ಅವರಿನ್ನೂ ಪಾಠ ಕಲಿತಂತೆ ಕಾಣುತ್ತಿಲ್ಲ.

ಮಂಗಳವಾರ ಕುಲ್ಗಾಂನಲ್ಲಿ ಜಮ್ಮು ವಿಭಾಗದ ಹಿಂದೂ ಶಿಕ್ಷಕಿಯೊಬ್ಬರನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಿ ಅವರನ್ನು ಹತ್ಯೆಗೈದಿದ್ದಾರೆ. ಇದರಿಂದಾಗಿ ಪಿಎಂ ಪ್ಯಾಕೇಜ್‌ನಡಿ ಉದ್ಯೋಗ ಪಡೆದಿರುವ ಕಾಶ್ಮೀರಿ ಪಂಡಿತ ಸಮುದಾಯ ಬಾಂಧವರು ತೀವ್ರ ಆತಂಕಿತರಾಗಿದ್ದು ತಮ್ಮನ್ನು ಸುರಕ್ಷಿತ ತಾಣಗಳಿಗೆ ವರ್ಗಾಯಿಸದಿದ್ದಲ್ಲಿ ಸುರಕ್ಷಿತ ಸ್ಥಳವನ್ನು ಅರಸಿಕೊಂಡು ಕಾಶ್ಮೀರ ಕಣಿವೆಯಿಂದ ಸಾಮೂಹಿಕ ವಲಸೆ ಹೋಗುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಎರಡು ವಾರಗಳ ಹಿಂದೆಯಷ್ಟೇ ರಾಹುಲ್‌ ಭಟ್‌ ಎಂಬಾತನನ್ನು ಉಗ್ರರು ಹತ್ಯೆಗೈದಿದ್ದರು. ಉಗ್ರರು ಇದೀಗ ಕಣಿವೆ ರಾಜ್ಯದಲ್ಲಿ ನಡೆಸುತ್ತಿರುವ ಭಯೋತ್ಪಾದನ ಚಟುವಟಿಕೆಗಳನ್ನು ಗಮನಿಸಿದಾಗ ಉಗ್ರರು ವಲಸಿಗರನ್ನು ಗುರಿಯಾಗಿಸುತ್ತಿರುವುದು ಸ್ಪಷ್ಟವಾಗಿದೆ.

ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕಾಶ್ಮೀರಿ ಪಂಡಿತರಾದಿಯಾಗಿ ಕಣಿವೆ ಪ್ರದೇಶದಲ್ಲಿನ ವಲಸಿಗರನ್ನು ಮರಳಿ ಅವರ ಹುಟ್ಟೂರಿಗೆ ಕರೆತಂದು ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಇದರಿಂದ ಉಗ್ರರು ವಿಚಲಿತರಾಗಿರುವಂತೆ ಕಂಡುಬರುತ್ತಿದ್ದು ಈ ಕಾರಣದಿಂದಾಗಿಯೇ ಕಣಿವೆಯಲ್ಲಿನ ಶಾಂತಿ-ಸುವ್ಯವಸ್ಥೆಯನ್ನು ಹದಗೆಡಿಸುವ ಕಾರ್ಯದಲ್ಲಿ ನಿರತರಾಗಿರುವುದು ಸುಸ್ಪಷ್ಟ. ಜಮ್ಮು-ಕಾಶ್ಮೀರದಲ್ಲಿ ಉಗ್ರರ ಉಪ ಟಳ ಹೆಚ್ಚಾಗಿರುವಂತೆಯೇ ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ನಮ್ಮ ಭದ್ರತಾ ಪಡೆಗಳು ಇನ್ನಷ್ಟು ಹೆಚ್ಚಿಸಬೇಕು. ಉಗ್ರರ ಅಡಗುದಾಣ ಗಳು, ನೆಲೆಗಳನ್ನು ಗುರಿಯಾಗಿಸಿ ಕಾರ್ಯಾಚರಣೆ ನಡೆಸಲು ಭದ್ರತಾ ಪಡೆಗಳಿಗೆ ನಿರ್ದೇಶಗಳನ್ನು ನೀಡಿ ಉಗ್ರರ ಮೂಲೋತ್ಪಾಟನೆ ಮಾಡ ಬೇಕು. ಇದರ ಜತೆಯಲ್ಲಿ ವಲಸಿಗರ ಸಹಿತ ನಾಗರಿಕರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಂಡು ಅವರಲ್ಲಿ ಸರಕಾರದ ಬಗ್ಗೆ ವಿಶ್ವಾಸಾರ್ಹತೆ ಮೂಡಿಸುವ ಕೆಲಸವನ್ನು ಮಾಡಬೇಕು. ಇದು ಈಗಿನ ತುರ್ತು.

Advertisement

Udayavani is now on Telegram. Click here to join our channel and stay updated with the latest news.

Next