ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರ ಹಾಗೂ ಹರ್ಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶ ಮಂಗಳವಾರ (ಅ.08) ಬೆಳಗ್ಗೆ 8ಗಂಟೆಯಿಂದ ಆರಂಭಗೊಳ್ಳಲಿದೆ. ಈ ನಿಟ್ಟಿನಲ್ಲಿ ಜಮ್ಮು-ಕಾಶ್ಮೀರದ ಎಲ್ಲಾ 20 ಮತಎಣಿಕೆ ಕೇಂದ್ರಕ್ಕೂ 3ಹಂತದ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದ 90 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಮಂಗಳವಾರ ಬೆಳಗ್ಗೆ ನಡೆಯಲಿದ್ದು, ಕ್ಷಣಗಣನೆ ಆರಂಭಗೊಂಡಿದೆ. ಶ್ರೀನಗರದ ಷೇರ್ ಐ ಕಾಶ್ಮೀರ್ ಇಂಟರ್ ನ್ಯಾಶನಲ್ ಕಾನ್ಫರೆನ್ಸ್ ಸೆಂಟರ್ ( SKICC) ನಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಆಯೋಗ ತಿಳಿಸಿದೆ.
ಆರ್ಟಿಕಲ್ 370 ರದ್ದುಗೊಳಿಸಿದ ನಂತರ ಜಮ್ಮು-ಕಾಶ್ಮೀರದಲ್ಲಿ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದೆ. 2014ರ ವಿಧಾನಸಭಾ ಚುನಾವಣೆ ವೇಳೆ ಶೇ.65.52ರಷ್ಟು ಮತದಾನವಾಗಿತ್ತು. 2024ರಲ್ಲಿ ನಡೆದ ಚುನಾವಣೆಯಲ್ಲಿ ಶೇ.62.52ರಷ್ಟು ಮತದಾನವಾಗಿತ್ತು. 90 ಸ್ಥಾನಗಳ ವಿಧಾನಸಭಾ ಚುನಾವಣೆಯಲ್ಲಿ 873 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಮತದಾರನ ಒಲವು ಯಾರಿಗೆ ಎಂಬುದು ಅ.8ರಂದು ಬಹಿರಂಗವಾಗಲಿದೆ.
ಅಕ್ಟೋಬರ್ 5ರಂದು ಹರ್ಯಾಣ ವಿಧಾನಸಭಾ ಚುನಾವಣೆ ನಡೆದಿದ್ದು, ಅ.8ರಂದು ಮತಎಣಿಕೆ ನಡೆಯಲಿದೆ. ಮೊದಲಿಗೆ ಅಂಚೆ ಮತಗಣ ಎಣಿಕೆ ನಡೆಯಲಿದ್ದು, ನಂತರ ಇವಿಎಂ ಮತಎಣಿಕೆ ನಡೆಯಲಿದ್ದು, ಮಧ್ಯಾಹ್ನದೊಳಗೆ ಸ್ಪಷ್ಟ ಚಿತ್ರಣ ಲಭ್ಯವಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.