Advertisement

ದೋಡಾ ಜಿಲ್ಲೆ ಈಗ ಉಗ್ರ ಮುಕ್ತ

02:56 AM Jun 30, 2020 | Hari Prasad |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ನಡೆಸುತ್ತಿರುವ ಉಗ್ರ ನಿಗ್ರಹ ಕಾರ್ಯಾಚರಣೆಯ ಅತಿ ದೊಡ್ಡ ಯಶಸ್ಸು ಎಂಬಂತೆ, ಸೋಮವಾರ ಅನಂತನಾಗ್‌ ಜಿಲ್ಲೆಯಲ್ಲಿ ಹಿಜ್ಬುಲ್‌ ಮುಜಾಹಿದೀನ್‌ನ ಕಮಾಂಡರ್‌ ಸೇರಿದಂತೆ ಮೂವರು ಭಯೋತ್ಪಾದಕರನ್ನು ಹೊಡೆದುರು­ಳಿ­ಸ­ಲಾಗಿದೆ.

Advertisement

ಈ ಮೂಲಕ ಜಮ್ಮುವಿನ ದೋಡಾ ಜಿಲ್ಲೆಯಲ್ಲಿ ಈಗ ಉಗ್ರರ ಸಂಪೂರ್ಣ ನಿರ್ಮೂಲನೆಯಾದಂತಾಗಿದೆ.

ಎರಡು ದಿನಗಳ ಹಿಂದಷ್ಟೇ ಭದ್ರತಾ ಪಡೆಗಳು ಪುಲ್ವಾಮಾ ಜಿಲ್ಲೆಯ ತ್ರಾಲ್‌ ಪ್ರದೇಶದಲ್ಲಿ ಹಿಜ್ಬುಲ್‌ ಮುಜಾಹಿದೀನ್‌ ಉಗ್ರರನ್ನು ಸಂಪೂರ್ಣ ನಿರ್ಮೂಲನೆ ಮಾಡಿರುವುದಾಗಿ ಘೋಷಿಸಿದ್ದವು. ಅದರ ಬೆನ್ನಲ್ಲೇ ಈಗ ಮತ್ತೂಂದು ಯಶಸ್ಸು ಸಿಕ್ಕಿದಂತಾಗಿದೆ.

ಏಕೈಕ ಉಗ್ರನಿಗೂ ಮುಕ್ತಿ: ದಕ್ಷಿಣ ಕಾಶ್ಮೀರದ ಅನಂತ್‌ನಾಗ್‌ನ ಖುಲ್‌ಚೋಹರ್‌ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ ಈ ಎನ್‌ಕೌಂಟರ್‌ ನಡೆದಿದೆ. ಸೇನೆ, ಜಮ್ಮು-ಕಾಶ್ಮೀರ ಪೊಲೀಸರು ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದೆ. ಹಿಜ್ಬುಲ್‌ ಕಮಾಂಡರ್‌ ಮಸೂದ್‌ ಅಹ್ಮದ್‌ ಭಟ್‌ ಮತ್ತು ಲಷ್ಕರ್‌ ಸಂಘಟನೆಯ ಇಬ್ಬರು ಉಗ್ರರನ್ನು ಭದ್ರತಾ ಪಡೆ ಸದೆಬಡಿದಿದೆ.

ಮಸೂದ್‌ನನ್ನು ದೋಡಾ ಜಿಲ್ಲೆಯಲ್ಲಿ ಬದುಕುಳಿದಿದ್ದ ಏಕೈಕ ಉಗ್ರ ಎಂದು ಹೇಳಲಾಗಿದ್ದು, ಈತನ ಹತ್ಯೆಯ ಮೂಲಕ ಇಡೀ ದೋಡಾ ಜಿಲ್ಲೆ ಉಗ್ರ ಮುಕ್ತವಾಗಿದೆ ಎಂದು ಜಮ್ಮು- ಕಾಶ್ಮೀರ ಪೊಲೀಸ್‌ ಮುಖ್ಯಸ್ಥ ದಿಲ್‌­ಬಾಘ್ ಸಿಂಗ್‌ ಹೇಳಿದ್ದಾರೆ. ಹತ ಉಗ್ರರ ಬಳಿಯಿದ್ದ ಒಂದು ಎಕೆ47 ರೈಫ‌ಲ್‌, ಎರಡು ಪಿಸ್ತೂಲ್‌ಗ‌ಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸೇನೆ ಮಾಹಿತಿ ನೀಡಿದೆ.

Advertisement

ಉಗ್ರ ಮಸೂದ್‌ ವಿರುದ್ಧ ಆರಂಭದಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಆನಂತರ ಆತ ಕಾಣೆಯಾಗಿದ್ದ. ಬಳಿಕ ಹಿಜ್ಬುಲ್‌ಗೆ ಸೇರಿದ ಮಸೂದ್‌, ತನ್ನ ಕಾರ್ಯಾಚರಣೆಯನ್ನು ಕಾಶ್ಮೀರಕ್ಕೆ ಸ್ಥಳಾಂತರಿಸಿದ್ದ.  ಕಳೆದ ಕೆಲವು ತಿಂಗಳಿಂದೀಚೆಗೆ ಕಣಿವೆ ರಾಜ್ಯದಲ್ಲಿ ನಿರಂತರವಾಗಿ ಉಗ್ರ ಸಂಹಾರ ನಡೆಯುತ್ತಿದ್ದು, ಈ ವರ್ಷ ಸುಮಾರು 100 ಉಗ್ರರನ್ನು ಹತ್ಯೆಗೈಯ್ಯಲಾಗಿದೆ.

ಉಗ್ರ ದಾಳಿ ಸಾಧ್ಯತೆ: ಗಡಿಯಲ್ಲಿ ಗಸ್ತು ಹೆಚ್ಚಳ
ಭಾರತ-ಚೀನ ಗಡಿ ಗಲಾಟೆ, ನೇಪಾಲದ ಕಿರಿಕ್‌ ನಡುವೆಯೇ ದೇಶದ ಗಡಿ ಭಾಗಗಳಲ್ಲಿ ಗಸ್ತು ಹೆಚ್ಚಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ, ಬಿಹಾರ ಮತ್ತು ದಿಲ್ಲಿಯಲ್ಲಿ ಉಗ್ರರು ವಿಧ್ವಂಸಕ ಕೃತ್ಯ ಎಸಗುವ ಸಾಧ್ಯತೆಯಿದೆ ಎಂದು ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಲಿಬಾನ್‌ ಮತ್ತು ಜೈಶ್‌ ಉಗ್ರರ ಸಹಾಯದೊಂದಿಗೆ ಭಾರತದಲ್ಲಿ ದಾಳಿ ನಡೆಸಲು ಪಾಕಿಸ್ಥಾನದ ಐಎಸ್‌ಐ ಸಂಚು ರೂಪಿಸಿದೆ. ರಾಷ್ಟ್ರ­ ರಾಜಧಾನಿ ಹೊಸದಿಲ್ಲಿ ಮತ್ತು ಪ್ರಮುಖ ರಾಜಕೀಯ ನಾಯಕರು ಕೂಡ ಉಗ್ರರ ಹಿಟ್‌ಲಿಸ್ಟ್‌ನಲ್ಲಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಸುಮಾರು 20 ಉಗ್ರರು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಿಂದ ಒಳನುಸು­ಳಲು ಅಥವಾ ಬಿಹಾರದ ಭಾರತ-ನೇಪಾಲ ಗಡಿ ಪ್ರದೇ ಶದ ಮೂಲಕ ದೇಶದೊಳಕ್ಕೆ ನುಸುಳುವ ಸಾಧ್ಯತೆ­ಯಿದೆ ಎಂದೂ ಎಚ್ಚರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗಡಿ ಪ್ರದೇಶದುದ್ದಕ್ಕೂ ಗಸ್ತು ಹೆಚ್ಚಿಸುವಂತೆ ಭದ್ರತಾ ಪಡೆಗಳಿಗೆ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next