ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ಶೀಘ್ರದಲ್ಲಿ ರಾಜ್ಯ ಸ್ಥಾನಮಾನ ನೀಡಲಾಗುವುದು. ಅಲ್ಲದೇ ಒಂದು ಬಾರಿ ರಾಜ್ಯ ಸ್ಥಾನಮಾನ ನೀಡಿದ ನಂತರ ವಿಧಾನಸಭೆ ಚುನಾವಣೆ ನಡೆಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇದನ್ನೂ ಓದಿ:Movie: ಬಹುಕೋಟಿ ʼರಾಮಾಯಾಣʼಕ್ಕೆ ಬಂಡವಾಳ ಹಾಕಲಿದ್ದಾರೆ ಯಶ್: ʼರಾವಣʼನಾಗಿ ಕಾಣಿಸೋದು ಡೌಟ್
ಜಮ್ಮು-ಕಾಶ್ಮೀರದ ಉಧಾಂಪುರ್ ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜಮ್ಮು-ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಮಯ ಹೆಚ್ಚು ದೂರವಿಲ್ಲ. ಜಮ್ಮು-ಕಾಶ್ಮೀರದಕ್ಕೆ ರಾಜ್ಯ ಸ್ಥಾನಮಾನ ಸಿಗಲಿದೆ. ಈ ಮೂಲಕ ನಿಮ್ಮ ಕನಸುಗಳನ್ನು ನಿಮ್ಮ ಶಾಸಕರು ಮತ್ತು ಸಚಿವರ ಜೊತೆ ಹಂಚಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಯಾವುದೇ ಭಯೋತ್ಪಾದನೆ, ಬಂದ್, ಕಲ್ಲು ತೂರಾಟದಂತಹ ಭಯವಿಲ್ಲದೇ ಜಮ್ಮು-ಕಾಶ್ಮೀರದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ದಯವಿಟ್ಟು ನನ್ನ ಮೇಲೆ ವಿಶ್ವಾಸ ಇಡಿ, ಕಳೆದ 60 ವರ್ಷಗಳಿಂದ ಬಗೆಹರಿಯದ ಜಮ್ಮು-ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸುತ್ತೇನೆ. ಕಳೆದ 10 ವರ್ಷಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಸಂಪೂರ್ಣವಾಗಿ ಬದಲಾವಣೆಯಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ರದ್ದುಗೊಳಿಸಿರುವ ಕಲಂ 370 ಅನ್ನು ಮತ್ತೆ ವಾಪಸ್ ತರುವುದಾಗಿ ಹೇಳಿರುವ ಕಾಂಗ್ರೆಸ್ ಮತ್ತು ವಿರೋಧಪಕ್ಷಗಳಿಗೆ ಸವಾಲೆಸೆದಿರುವ ಪ್ರಧಾನಿ ಮೋದಿ, ಜಮ್ಮು-ಕಾಶ್ಮೀರದಲ್ಲಿ ಏನು ಮಾಡಬೇಕೆಂದು ಭರವಸೆ ನೀಡಿದ್ದೇನೋ ಅದನ್ನು ಈಡೇರಿಸುವುದಾಗಿ ತಿಳಿಸಿದರು.
ಉಧಾಂಪುರ್ ಮತ್ತು ಜಮ್ಮು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ಪ್ರಧಾನಿ ಮೋದಿ ಮತದಾರರಲ್ಲಿ ಮನವಿ ಮಾಡಿಕೊಂಡರು. ಏಪ್ರಿಲ್ 19ರಂದು ಉಧಾಂಪುರ್ ನಲ್ಲಿ ಚುನಾವಣೆ ನಡೆಯಲಿದೆ.