ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭಾರತೀಯ ಯೋಧರು ಇಬ್ಬರು ಉಗ್ರಗಾಮಿಗಳನ್ನು ಹೊಡೆದುರುಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸೇನೆಯಲ್ಲಿ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದ ಪಿಂಕು ಕುಮಾರ್ ಎಂಬುವರು ಹುತಾತ್ಮರಾಗಿದ್ದು, ಮತ್ತೂಬ್ಬ ಯೋಧ ಗಾಯಗೊಂಡಿದ್ದಾರೆ.
ಹತ ಉಗ್ರರನ್ನು ಹಿಜ್ಬುಲ್ ಮುಜಾಹಿದೀನ್‌ನ ಇನಾತುಲ್ಲಾ ಶೇಖ್ ಮತ್ತು ಲಷ್ಕರ್-ಎ-ತೊಯ್ಬಾದ ಆದಿಲ್ ಮಲಿಕ್ ಎಂದು ಗುರುತಿಸಲಾಗಿದೆ. ಶೇಖ್ ಕಳೆದ ವಾರವಷ್ಟೇ ಪಾಕಿಸ್ತಾನದಿಂದ ಭಾರತಕ್ಕೆ ನುಸುಳಿದ್ದ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ. ಶೋಪಿಯಾನ್ ಜಿಲ್ಲೆಯ ವಾಂಗಾಮ್ ಗ್ರಾಮದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಒಂದು ಪಿಸ್ತೂಲು, ಎಂ4 ರೈಫಲ್ ಮತ್ತು ಎಕೆ 47 ರೈಫಲ್ ಅನ್ನು ವಶಕ್ಕೆ ಪಡೆಯಲಾಗಿದೆ.
ಶೋಧ ಕಾರ್ಯ ನಡೆಸುತ್ತಿದ್ದ ವೇಳೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರಿಂದ ಎರಡೂ ಕಡೆ ಗುಂಡಿನ ಚಕಮಕಿ ನಡೆಯಿತು ಎಂದೂ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ :ಮಹಿಳೆಯರ ಅರೆಬೆತ್ತಲೆ ಫೋಟೋ ಕುರಿತು ನಟಿ ತಾಪ್ಸಿ ಪನ್ನು ಹೇಳಿದ್ದೇನು?
ಇದು ಒಂದೇ ತಿಂಗಳಲ್ಲಿ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ 3ನೇ ಎನ್ ಕೌಂಟರ್ ಆಗಿದ್ದು, ಕಳೆದ ಎರಡು ಎನ್ ಕೌಂಟರ್‌ಗಳಲ್ಲಿ ಜೈಶ್‌ನ ಪ್ರಮುಖ ಕಮಾಂಡರ್ ಸೇರಿದಂತೆ ಒಟ್ಟು 6 ಉಗ್ರರನ್ನು ಹೊಡೆದುರುಳಿಸಲಾಗಿದೆ.