ನವದೆಹಲಿ/ಶ್ರೀನಗರ್: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಪಡಿಸುವ ಕುರಿತು ಕೇಂದ್ರ ಸರಕಾರ ಘೋಷಣೆ ಮಾಡುವ ಸಂದರ್ಭದಲ್ಲಿ ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳು ಜಮ್ಮು-ಕಾಶ್ಮೀರವನ್ನು ತೊರೆಯುವಂತೆ ಸೂಚಿಸಿ ಎರಡು ತಿಂಗಳು ಕಳೆದ ಬಳಿಕ ಇದೀಗ ಜಮ್ಮು-ಕಾಶ್ಮೀರ ಪ್ರವಾಸಿಗರಿಗೆ ಮುಕ್ತ ಪ್ರವೇಶ ಕಲ್ಪಿಸಿಕೊಟ್ಟಿದೆ.
ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಅವರ ಸೂಚನೆ ಮೇರೆಗೆ ಜಮ್ಮು-ಕಾಶ್ಮೀರದ ಗೃಹ ಇಲಾಖೆ ಪ್ರವಾಸಿಗರ ಭೇಟಿಗಾಗಿ ವಿಧಿಸಿದ್ದ ನಿರ್ಬಂಧವನ್ನು ಅಕ್ಟೋಬರ್ 9ರಂದು ತೆರವುಗೊಳಿಸಿ ಆದೇಶ ಹೊರಡಿಸಿತ್ತು. ಆ ನಿಟ್ಟಿನಲ್ಲಿ ಗುರುವಾರದಿಂದ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲು ಪ್ರವಾಸಿಗರು, ಯಾತ್ರಾರ್ಥಿಗಳಿಗೆ ಅವಕಾಶ ಕಲ್ಲಿಸಿಕೊಟ್ಟಿರುವುದಾಗಿ ವರದಿ ತಿಳಿಸಿದೆ.
ಅಲ್ಲದೇ ಭಯೋತ್ಪಾದಕರ ದಾಳಿ ಸಾಧ್ಯತೆ ಹಿನ್ನೆಲೆಯಲ್ಲಿ ಸಾವಿರಾರು ಪ್ರವಾಸಿಗರು, ಕಾರ್ಮಿಕರು ಮತ್ತು ಇತರ ರಾಜ್ಯಗಳ ವಿದ್ಯಾರ್ಥಿಗಳು ಜಮ್ಮು-ಕಾಶ್ಮೀರದಿಂದ ಹೊರ ಹೋಗುವಂತೆ ಆಗಸ್ಟ್ ತಿಂಗಳಿನಲ್ಲಿ ಅಧಿಕಾರಿಗಳು ಸೂಚನೆ ನೀಡಿದ್ದರು.
ಇದು ಪ್ರವಾಸಿಗರು ಭೇಟಿ ನೀಡಲು ಪ್ರಸಕ್ತ ಸಮಯವಾಗಿದ್ದರಿಂದ ಪ್ರಸ್ತುತ ಕಣಿವೆ ಪ್ರದೇಶದಲ್ಲಿ 20ರಿಂದ 25 ಸಾವಿರ ಪ್ರವಾಸಿಗರು ಭೇಟಿ ನೀಡಿರುವುದಾಗಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
370ನೇ ವಿಧಿಯನ್ನು ಕೇಂದ್ರ ಸರಕಾರ ರದ್ದುಗೊಳಿಸಿದ ನಂತರ ಟೆಲಿಫೋನ್ ಮತ್ತು ಇಂಟರ್ನೆಟ್ ಸೇವೆಯನ್ನು ರದ್ದುಗೊಳಿಸಲಾಗಿದೆ. ಕೆಲವು ಪ್ರದೇಶಗಳಲ್ಲಿ ಸಾರ್ವಜನಿಕರ ಸಂಚಾರಕ್ಕೂ ನಿರ್ಬಂಧ ವಿಧಿಸಿರುವುದನ್ನು ಮುಂದುವರಿಸಲಾಗಿದೆ ಎಂದು ವರದಿ ತಿಳಿಸಿದೆ.