ಜಮ್ಮು : ಚುನಾವಣಾ ಕರ್ತವ್ಯದಲ್ಲಿ ತಾನು ಹಾಗೂ ಸಹೋದ್ಯೋಗಿಗಳು ತೊಡಗಿಕೊಂಡಿದ್ದ ವೇಳೆ ತಮ್ಮ ಮೇಲೆ ಸೇನಾ ಸಿಬಂದಿಗಳು ಹಲ್ಲೆ ನಡೆಸಿದ್ದಾರೆ; ಚುನಾವಣಾ ಕರ್ತವ್ಯದಲ್ಲಿ ತೊಡಗಿಕೊಳ್ಳುವಲ್ಲಿ ತಮಗೆ ಸೇನಾ ಸಿಬಂದಿಗಳು ಅಡ್ಡಿ ಪಡಿಸಿದ್ದಾರೆ; ಆದುದರಿಂದ ಅವರ ವಿರುದ್ಧ ಎಫ್ಐಆರ್ ದಾಖಲಾಗಬೇಕು ಎಂದು ಜಮ್ಮು ಕಾಶ್ಮೀರದ ಪೌರಾಧಿಕಾರಿಯೋರ್ವರು ಆಗ್ರಹಿಸಿದ್ದಾರೆ.
ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವವರ, ಬೆದರಿಕೆ ಒಡ್ಡುವವರ ಮತ್ತು ಹಿಂಸೆಗೆ ಯತ್ನಿಸುವವರನ್ನು ಶಿಕ್ಷಿಸುವುದಕ್ಕಿರುವ ಕಾನೂನಡಿ ಸೇನಾ ಸಿಬಂದಿಗಳನ್ನು ದಂಡಿಸಬೇಕು; ಅದಕ್ಕಾಗಿ ಅವರ ವಿರುದ್ಧ ಎಫ್ ಐ ಆರ್ ದಾಖಲಿಸಬೇಕು ಎಂದು ಆ ಅಧಿಕಾರಿ ಹೇಳಿದ್ದಾರೆ.
ಭದ್ರತಾ ಸಿಬಂದಿಗಳಿಂದ ಹಲ್ಲೆಗೆ ಗುರಿಯಾಗಿರುವ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಗುಲಾಮ್ ರಸೂಲ್ ವಾನಿ ಅವರು ಕಾಜೀಗಂಜ್ ಎಸ್‌ಎಚ್‌ಓ ಗೆ ಬರೆದಿರುವ ಪತ್ರದಲ್ಲಿ ಘಟನೆಯನ್ನು ಹೀಗೆ ವಿವರಿಸಿದ್ದಾರೆ :
ಅನಂತ್‌ನಾಗ್ ಡೆಪ್ಯುಟಿ ಕಮಿಷನರ್ ಅವರ ಸೂಚನೆ ಪ್ರಕಾರ ನಾನು ನಿನ್ನೆ ಮಂಗಳವಾರ ಬೆಳಗ್ಗೆ 10.40ಕ್ಕೆ ಇತರ ಅಧಿಕಾರಿಗಳೊಂದಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಾರಿಗೆ ಸಮಸ್ಯೆಯನ್ನು ಬಗೆಹರಿಸಲು ಅನಂತ್‌ನಾಗ್‌ನ ವೆಸ್ಸೂ ಗೆ ಹೋಗುತ್ತಿದ್ದಾಗ ಸೇನಾ ಸಿಬಂದಿಗಳು ಎಲ್ಲ ಪೌರ ವಾಹನಗಳನ್ನು ತಡೆಯುತ್ತಿದ್ದರು; ಅಂತೆಯೇ ನಮ್ಮ ವಾಹನವನ್ನೂ ತಡೆದರು. ಆದರೆ ಅದು ಸೇನಾ ವಾಹನಗಳಿಗಾಗಿ ಇರುವ ನಿರ್ಬಂಧದ ದಿನವಾಗಿರಲಿಲ್ಲ.
ನಾವು ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳೆಂದು ಊರ್ಜೂ ದಲ್ಲಿನ ಸೇನಾ ಸಿಬಂದಿಗಳಿಗೆ ತಿಳಿಸಿದೆವು. ಆ ಪ್ರಕಾರ ಅವರು ನಮಗೆ ವೆಸ್ಸೂ ಕಡೆಗೆ ಹೋಗಲು ಅನುಮತಿ ನೀಡಿದರು. ಆದರೆ ಮುಂದೆ ದಾಲ್‌ವಾಚ್‌ನಲ್ಲಿ ಮತ್ತೆ ನಮ್ಮನ್ನು ಅಲ್ಲಿನ ಸೇನಾ ಸಿಬಂದಿಗಳು ತಡೆದರು. ಸೇನಾ ವಾಹನ ಸಾಲು ಸಾಗಿ ಹೋಗುವ ತನಕ ನೀವು ಸಾಗುವಂತಿಲ್ಲ ಎಂದು ನಮಗೆ ಹೇಳಿದರು.
ಸೇನಾ ವಾಹನಗಳು ಸಾಗುವ ತನಕವೂ ನಾವು ಅವರ ಆದೇಶವನ್ನು ಪಾಲಿಸಿದೆವು. ಹಾಗಿದ್ದರೂ ಸೇನಾ ಸಿಬಂದಿ ವಿನಯ್ ಕುಮಾರ್ ಎಂಬವರು ನಮ್ಮ ವಾಹನದ ಚಾಲಕನನ್ನು ನಿರ್ದಯವಾಗಿ ಹೊಡೆದು ಹಲ್ಲೆ ಮಾಡಿ ವಾಹನಕ್ಕೆ ಹಾನಿ ಉಂಟುಮಾಡಿದರು. ಚಾಲಕನ ಶರ್ಟ್ ಕಾಲರ್ ಪಟ್ಟಿಯನ್ನು ಹಿಡಿದು ಆತನನ್ನು ಗನ್ ಪಾಯಿಂಟ್‌ನಲ್ಲಿ 20 ಮೀಟರ್ ದೂರದ ವರೆಗೂ ಎಳೆದೊಯ್ದರು. ಬಳಿಕ ಚಾಲಕನ ಮತ್ತು ನನ್ನ ಮೊಬೈಲ್ ಫೋನ್ ಕಿತ್ತು ಕೊಂಡು ಅದನ್ನು ಪುಡಿಗುಟ್ಟಿದರು. ನಮ್ಮ ಜತೆಗಿದ್ದ ಇತರ ಪೌರಾಧಿಕಾರಿಗಳ ಮೇಲೆ ಭದ್ರತಾ ಸಿಬಂದಿ ಹಲ್ಲೆ ಮಾಡಿದರು.