Advertisement

Jammu and Kashmir; ಉಗ್ರರ ಮಟ್ಟ ಹಾಕಲು ಜಿಪಿಎಸ್‌ ಟ್ರ್ಯಾಕರ್‌ ಬಲೆ 

12:29 AM Nov 06, 2023 | Vishnudas Patil |

ಶ್ರೀನಗರ: ದೇಶದಲ್ಲಿ ಪ್ರಪ್ರಥಮ ಎನ್ನುವಂತೆ,ಜಮ್ಮು – ಕಾಶ್ಮೀರ ಪೊಲೀಸರು ಜಾಮೀನಿನ ಮೇಲೆ ಹೊರಗಿರುವ ಶಂಕಿತ ಉಗ್ರರ ಕಾಲುಗಳಿಗೆ ಜಿಪಿಎಸ್‌ ಟ್ರ್ಯಾಕರ್‌ ಆ್ಯಂಕ್ಲೆಟ್ಸ್‌ಗಳನ್ನು ಅಳವಡಿಕೆ ಮಾಡುವ ಮೂಲಕ ಕಣ್ಗಾವಲು ಇಡಲು ಆರಂಭಿಸಿದ್ದಾರೆ. ಇವುಗಳನ್ನು ಜಾಮೀನು ಪಡೆದವರ ಕಾಲುಗಳಿಗೆ ಅಳವಡಿಸಿ ಹೊರಗೆ ಕಳುಹಿಸಲಾಗುತ್ತದೆ.

Advertisement

ಬೇಲ್‌ ಮೇಲೆ ಹೊರಗಿರುವ ಕೈದಿಗಳ ಮೇಲೆ ನಿಗಾ ಇಡಲು ಈ ರೀತಿಯ ಆ್ಯಂಕ್ಲೆಟ್ಸ್‌ಗಳನ್ನು ಪಾಶ್ಚಾತ್ಯ ದೇಶಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಅಂದರೆ ಅಮೆರಿಕ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳಲ್ಲಿ  ಜಾರಿಯಲ್ಲಿದೆ.  ಈ ದೇಶಗಳಲ್ಲಿ ಜಾಮೀನು ಪಡೆದವರು, ಪೆರೋಲ್‌ ಮೇಲೆ ಹೊರಗೆ ಹೋದವರು ಮತ್ತು ಗೃಹ ಬಂಧನದಲ್ಲಿ ಇರುವವರಿಗೆ ಹಾಕಿ ಸದಾ ಕಣ್ಗಾವಲು ಇಡಲಾಗುತ್ತದೆ. ಜೈಲುಗಳಲ್ಲಿನ ದಟ್ಟಣೆಯನ್ನು ನಿವಾರಣೆ   ಮಾಡುವ   ಸಲುವಾಗಿ ಇಂಥ ನಿರ್ಧಾರಕ್ಕೆ ಪಾಶ್ಚಾತ್ಯ ದೇಶಗಳು ಹೊರಗೆ ಹೋಗಿವೆ.

ಕೋರ್ಟ್‌ ಆದೇಶದ ಹಿನ್ನೆಲೆ

ಯುಎಪಿಎ ಅನ್ವಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಗುಲಾಮ್‌ ಮೊಹಮ್ಮದ್‌ ಭಟ್‌ ಎಂಬಾತನ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಆತ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ. ಅರ್ಜಿ ವಿಚಾರಣೆ ವೇಳೆ ವಿಶೇಷ ಎನ್‌ಐಎ ನ್ಯಾಯಾಲಯವು ಆರೋಪಿಯ ಮೇಲೆ ಕಣ್ಗಾವಲು ಹೆಚ್ಚಿಸುವಂತೆ ಅದಕ್ಕಾಗಿ ಜಿಪಿಎಸ್‌ ಟ್ರ್ಯಾಕರ್‌ ಬಳಕೆ ಮಾಡುವಂತೆ   ಪೊಲೀಸರಿಗೆ ನಿರ್ದೇಶನ ನೀಡಿತ್ತು. ಅದಕ್ಕೆ  ಅನುಸಾರವಾಗಿ ಇದೀಗ ಬೆಲ್ಟ್ ಅಭಿವೃದ್ಧಿಪಡಿಸಿ, ಪರಿಚಯಿಸಲಾಗಿದೆ.

ಕಾರ್ಯಾಚರಣೆ ಹೇಗೆ?

Advertisement

ಆರೋಪಿಗಳ ಕಾಲಿಗೆ ಹಾಕಿರುವ ಬೆಲ್ಟ್ನಲ್ಲಿ ಸ್ಟೇಶನ್‌ ಲಿಮಿಟ್‌ನ ಮಾಹಿತಿ ಯನ್ನು ಆಧರಿಸಿ ತಂತ್ರಜ್ಞಾನ ಬಳಕೆ ಮಾಡಲಾಗಿದ್ದು ಆರೋಪಿಯು ಆ ಗಡಿ ದಾಟಿದ ಕೂಡಲೇ ಠಾಣೆಗೆ ಮಾಹಿತಿ ರವಾನೆಯಾಗಲಿದೆ. ಈ ಮೂಲಕ ಆತನಿರುವ ಸ್ಥಳವನ್ನು ಪೊಲೀಸರು ಪತ್ತೆಹಚ್ಚಬಹುದಾಗಿದೆ.

ಒಡಿಶಾದಲ್ಲಿ ಜಾರಿಗೆ ಚಿಂತನೆ

ಜೈಲುಗಳಲ್ಲಿರುವ ಕೈದಿಗಳ ದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ ಒಡಿಶಾ ಸರಕಾರವು, ಜಾಮೀನು ಪಡೆದು ಹೊರಹೋಗುವ ಕೈದಿಗಳಿಗೆ ಜಿಪಿಎಸ್‌ ಟ್ರ್ಯಾಕರ್‌ ಹಾಕುವ ಚಿಂತನೆ ನಡೆಸಿತ್ತು. ಅತ್ಯಂತ ಗಂಭೀರವಲ್ಲದ ಪ್ರಕರಣಗಳ ಆರೋಪಿಗಳಿಗೆ  ಈ ರೀತಿ ಮಾಡುವುದು, ಈ ಮೂಲಕ ಜೈಲುಗಳ ನಿರ್ವಹಣ   ವೆಚ್ಚವನ್ನೂ ಕಡಿಮೆ ಮಾಡಲು ಅದು ಮುಂದಾಗಿತ್ತು.  ಈ ಜಿಪಿಎಸ್‌ ಟ್ರ್ಯಾಕರ್‌ಗಳಿಗೆ 10 ರಿಂದ 15 ಸಾವಿರ ರೂ. ಆಗುತ್ತದೆ.   ಇವು ಟೆಂಪರ್‌ ಪ್ರೂಫ್ ಆಗಿರುವುದರಿಂದ ಕೈದಿಗಳು ತಿರುಚಲು ಸಾಧ್ಯವಾಗುವುದಿಲ್ಲ ಎಂದಿತ್ತು. ಅಂದರೆ  ಇದು ಗೃಹ ಬಂಧನಕ್ಕಿಂತ ಬೇರೊಂದು ರೀತಿಯ ಅವಕಾಶವಾಗಿದೆ.

ಸಂಸದೀಯ ಸಮಿತಿಯಿಂದಲೂ ಶಿಫಾರಸು

ಇತ್ತೀಚೆಗಷ್ಟೇ ಸಭೆ ಸೇರಿದ್ದ ಕೇಂದ್ರ ಗೃಹ ಇಲಾಖೆಯ ಸಂಸದೀಯ ಸಮಿತಿಯು ಜೈಲುಗಳಲ್ಲಿನ ದಟ್ಟಣೆ ಕಡಿಮೆ ಮಾಡುವ ಸಲುವಾಗಿ ಜಿಪಿಎಸ್‌ ಟ್ರ್ಯಾಕರ್‌ಗಳನ್ನು ಹಾಕಿ ಕೈದಿಗಳನ್ನು ಹೊರಗೆ ಬಿಡಬಹುದು ಎಂದು ಶಿಫಾರಸು ಮಾಡಿತ್ತು. ಅಂದರೆ ಈ ಸಮಿತಿಯು ಒಡಿಶಾದ ಚಿಂತನೆ ಬಗ್ಗೆಯೂ ಪ್ರಸ್ತಾವ ಮಾಡಿತ್ತು. ಆಂಧ್ರ ಮತ್ತು ಗುಜರಾತ್‌ ರಾಜ್ಯಗಳಲ್ಲಿನ ಜೈಲುಗಳು ಸ್ವಾತಂತ್ರ್ಯ ಪೂರ್ವಕ್ಕಿಂತ ಹಳೆಯದಾಗಿವೆ. ಇಲ್ಲಿ ಕೈದಿಗಳನ್ನು ಇರಿಸಲು ಆಗುವುದಿಲ್ಲ. ಇವುಗಳನ್ನು ವಸ್ತು ಸಂಗ್ರಹಾಲಯಗಳಾಗಿ ಮಾಡುತ್ತೇವೆ ಎಂದಿವೆ. ಹೀಗಾಗಿ ಹೊಸದಾಗಿ ಜೈಲುಗಳನ್ನು ನಿರ್ಮಿಸಿದರೂ, ಇರುವ ಕೈದಿಗಳನ್ನು ಸಂಭಾಳಿಸುವುದು ಕಷ್ಟ ಎಂದಿತ್ತು. ಜತೆಗೆ ಜೈಲಿನಲ್ಲಿ ಹೆಚ್ಚು ಕೈದಿಗಳು ಇರುವುದರಿಂದಾಗಿ ನ್ಯಾಯ ಕೂಡ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ ಎಂಬುದನ್ನೂ ಪ್ರಸ್ತಾವ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next