ಜಮಖಂಡಿ: ಕಾಂಗ್ರೆಸ್ ಆಡಳಿತವಿರುವ ರಾಜ್ಯದಲ್ಲಿ ಒಪಿಎಸ್ ಜಾರಿಗೊಳಿಸಿದೆ. ನಮ್ಮ ರಾಜ್ಯದಲ್ಲಿ ನೌಕರರ ಸಂಘದ ಬೇಡಿಕೆ ಈಡೇರಿಸುವ ಭರವಸೆಯಿದೆ. ಭಾರತ ಯಾತ್ರೆ ಮೂಲಕ ಅ.5ರಂದು ನವದೆಹಲಿ ತಲುಪಿ ಪ್ರಮುಖ 4 ಬೇಡಿಕೆ ಈಡೇರಿಕೆಗಾಗಿ ಮನವಿ ಸಲ್ಲಿಸಲಾಗುವುದು ಎಂದು ಎಐಪಿಟಿಎಫ್ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.
ನಗರದ ಬಸವಭವನ ಸಭಾಭವನದಲ್ಲಿ ನಡೆದ ಭಾರತ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ, ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವುದು, ನೂತನ ಶಿಕ್ಷಣ ನೀತಿಯಲ್ಲಿ ಲೋಪದೋಷ ಕೈಬಿಡಬೇಕು.
ಸರ್ಕಾರಿ ಶಾಲೆಗಳಿಗೆ ಅತಿಥಿ ಶಿಕ್ಷಕರ ಬದಲಾಗಿ ಕಾಯಂ ಶಿಕ್ಷಕರನ್ನು ನೇಮಕ ಮತ್ತು ರಾಷ್ಟ್ರದ ಎಲ್ಲ ನೌಕರರಿಗೆ ಕೇಂದ್ರ-ರಾಜ್ಯ ಸರ್ಕಾರದ ನೌಕರರೆಂಬ ಭೇದ-ಭಾವ ಮಾಡದೇ ಏಕರೂಪ ವೇತನ ಪದ್ಧತಿ ಜಾರಿಗೊಳಿಸಬೇಕು. ಶಿಕ್ಷಕ ವಿರೋಧಿ ನೀತಿ ಕೈ ಬಿಡುವುದು ಸೇರಿದಂತೆ ಎಲ್ಲ ಬೇಡಿಕೆ ಈಡೇರಿಕೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಾಗೆನ್ನವರ ಮಾತನಾಡಿ, ನಾಲ್ಕು ತಂಡಗಳಲ್ಲಿ ಭಾರತ ಯಾತ್ರೆ ಕನ್ಯಾಕುಮಾರಿಯಿಂದ ಆರಂಭಗೊಂಡಿದ್ದು ಕನ್ಯಾಕುಮಾರಿ, ಕೇರಳ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರಪ್ರದೇಶ, ಹರಿಯಾಣ ಮೂಲಕ ಸಂಚರಿಸಿ ಅ.5ರಂದು ನವದೆಹಲಿ ರಾಮಲೀಲಾ ಮೈದಾನ ತಲುಪಲಿದೆ ಎಂದರು.
ಕೆ. ನಾಗೇಶ, ಚಂದ್ರಶೇಖ ನುಗ್ಗೆಲಿ, ಡಾ| ವಿ.ಪಿ.ನಿರಂಜನಾರಾಧ್ಯ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸಿ.ಜೆ. ಕಡಕೋಳ ಮಾತನಾಡಿದರು.
ಅದ್ದೂರಿ ಸ್ವಾಗತ: ವಿಜಯಪುರ ರಸ್ತೆಯಲ್ಲಿರುವ ನಗರದ ಬನಶಂಕರಿ ತೋಟದ ಶಾಲೆ ಆವರಣದಿಂದ ಭಾರತ ಯಾತ್ರೆ ರಥವನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಸಾವಿರಕ್ಕೂ ಹೆಚ್ಚು ಶಿಕ್ಷಕರು ಬೈಕ್ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸರ್ಕಾರಿ ಜಿಜಿ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶಕ್ಕೆ ಯಾತ್ರೆ ಆಗಮಿಸಿತು.
ಈ ವೇಳೆ ಹರಿಗೋವಿಂದನ, ಸೀಮಾ ಮಾಥುರ, ಸಂಚಾಲಕಿ ಶಮಾದೇವಿ, ನವೀನ ಸಂಗ್ವಾ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಿ.ಬಿ. ಅಜ್ಜನ್ನವರ, ನರಸಿಂಹ ಕಲ್ಲೋಳ್ಳಿ, ಮಹಂತೇಶ ನರಸನಗೌಡರ, ಬಸವರಾಜ ಸಾವಳಗಿ, ವಿನೋದ ಮಾಸರೆಡ್ಡಿ, ಆರ್.ಎಸ್. ಕೋಳಿ ಇತರರಿದ್ದರು.