ನವದೆಹಲಿ: ಜಾಮೀಯಾ ವಿವಿ ವಿದ್ಯಾರ್ಥಿಗಳ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು ಹತ್ತು ಮಂದಿಯನ್ನು ಮಂಗಳವಾರ ಬಂಧಿಸಿದ್ದಾರೆ. ಆದರೆ ಬಂಧಿತರು ವಿದ್ಯಾರ್ಥಿಗಳಲ್ಲ ಇವರೆಲ್ಲರಿಗೂ ಅಪರಾಧ ಹಿನ್ನೆಲೆ ಇದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಪೊಲೀಸರು ಭಾನುವಾರ ನಡೆದ ಪ್ರತಿಭಟನೆಯಲ್ಲಿ ಶಾಮೀಲಾಗಿದ್ದ 15 ಮಂದಿ ವಿರುದ್ಧ ಸೋಮವಾರ ಎಫ್ ಐಆರ್ ದಾಖಲಿಸಿದ್ದರು. ದಿಲ್ಲಿಯ ನ್ಯೂಫ್ರೆಂಡ್ಸ್ ಕಾಲೋನಿ ಸಮೀಪದಲ್ಲಿ ನಿಲ್ಲಿಸಿದ್ದ ನಾಲ್ಕು ಬಸ್ ಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದರು. ಘಟನೆಯಲ್ಲಿ ಆರು ಮಂದಿ ಪೊಲೀಸರು ಗಾಯಗೊಂಡಿದ್ದರು.
ಜಾಮೀಯಾ ನಗರದ ಸರಾಯಿ ಜುಲೇಮಾ ಪ್ರದೇಶದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಸಂಘರ್ಷ ನಡೆದಿತ್ತು. ಇದು ವಿಕೋಪಕ್ಕೆ ತಿರುಗಿದಾಗ ಪೊಲೀಸರು ಕ್ರಮಕ್ಕೆ ಮುಂದಾಗಿದ್ದರು. ಅಲ್ಲದೇ ಸುಮಾರು ನೂರು ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿ, ನಂತರ ಬಿಡುಗಡೆಗೊಳಿಸಿದ್ದರು.
ಸುದ್ದಿಗಾರರ ಜತೆ ಮಾತನಾಡಿದ ದಿಲ್ಲಿ ಪೊಲೀಸ್ ಕಮಿಷನರ್ ಚಿನ್ಮೋಯ್ ಬಿಸ್ವಾಸ್, ಸುಮಾರು 2ಸಾವಿರ ಮಂದಿ ಪ್ರತಿಭಟನೆಯಲ್ಲಿ ತೊಡಗಿದ್ದು, ನಂತರ ಹಿಂಸಾಚಾರಕ್ಕೆ ತಿರುಗಿತ್ತು. ಅಲ್ಲದೇ ಅವರೆಲ್ಲಾ ಸಾರ್ವಜನಿಕ ಸಾರಿಗೆ ಸಂಸ್ಥೆಯ ಬಸ್ ಗಳನ್ನು ಗುರಿಯಾಗಿರಿಸಿ ಬೆಂಕಿ ಹಚ್ಚಿ ಕಲ್ಲು ತೂರಾಟ ನಡೆಸಿದ್ದರು ಎಂದರು.
ಉದ್ರಿಕ್ತ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರಿಂದ ಆರು ಮಂದಿ ಪೊಲೀಸರು ಗಾಯಗೊಂಡಿದ್ದರು. ಹಿಂಸಾಚಾರದಲ್ಲಿ ಶಾಮೀಲಾದವರ ಗುರುತು ಪತ್ತೆಹಚ್ಚಲು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.