Advertisement

ಪುನೀತ್‌ ನೆನಪಿನಲ್ಲಿ ಜೇಮ್ಸ್‌ ಪ್ರಿ-ರಿಲೀಸ್‌

09:11 AM Mar 15, 2022 | Team Udayavani |

ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಅಭಿನಯದ “ಜೇಮ್ಸ್‌’ ಬಿಡುಗಡೆಗೆ ಕೌಂಟ್‌ಡೌನ್‌ ಶುರುವಾಗಿದೆ. ದಿನದಿಂದ ದಿನಕ್ಕೆ ಸ್ಯಾಂಡಲ್‌ವುಡ್‌ ಅಂಗಳಲ್ಲಿ ಮತ್ತು ಅಭಿಮಾನಿಗಳಲ್ಲಿ “ಜೇಮ್ಸ್‌’ ಫೀವರ್‌ ಜೋರಾಗುತ್ತಿದೆ. ಇದರ ಬೆನ್ನಲ್ಲೆ ಭಾನುವಾರ ಸಂಜೆ ಬೆಂಗಳೂರಿನ ಅರಮನೆ ಮೈದಾನದಲ್ಲಿ “ಜೇಮ್ಸ್‌’ ಚಿತ್ರತಂಡ “ಜೇಮ್ಸ್‌’ ಸಿನಿಮಾದ ಅದ್ಧೂರಿ ಪ್ರಿ-ರಿಲೀಸ್‌ ಇವೆಂಟ್‌ ಅನ್ನು ಹಮ್ಮಿಕೊಂಡಿತ್ತು. ಸುಮಾರು ಮೂರು ಗಂಟೆಗಳ ಕಾಲ ನಡೆದ “ಜೇಮ್ಸ್‌’ ಪ್ರಿ-ರಿಲೀಸ್‌ ಇವೆಂಟ್‌ನಲ್ಲಿ ವರನಟ ಡಾ. ರಾಜಕುಮಾರ್‌ ಕುಟುಂಬದ ಬಹುತೇಕ ಸದಸ್ಯರು, “ಜೇಮ್ಸ್‌’ ಚಿತ್ರದ ಕಲಾವಿದರು, ತಂತ್ರಜ್ಞರು ಮತ್ತು ಚಿತ್ರರಂಗದ ಅನೇಕ ಗಣ್ಯರು, ಸಾವಿರಾರು ಸಂಖ್ಯೆಯಲ್ಲಿ ಪುನೀತ್‌ ರಾಜಕುಮಾರ್‌ ಅಭಿಮಾನಿಗಳು ಭಾಗಿಯಾಗಿದ್ದರು. ಪುನೀತ್‌ ರಾಜಕುಮಾರ್‌ ಅವರೊಂದಿಗಿನ ಒಡನಾಟ, “ಜೇಮ್ಸ್‌’ ಚಿತ್ರದ ವಿಶೇಷತೆಗಳ ಬಗ್ಗೆ ಕಾರ್ಯಕ್ರಮದಲ್ಲಿ ಹಾಜರಿದ್ದ ಅನೇಕರು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡರು.

Advertisement

ಪ್ರಿ-ರಿಲೀಸ್‌ಗೆ ಅಭಿಮಾನಿಗಳ ದಂಡು

ಪುನೀತ್‌ ರಾಜಕುಮಾರ್‌ ಅಭಿಮಾನಿಗಳಿಗಾಗಿಯೇ “ಜೇಮ್ಸ್‌’ ಚಿತ್ರತಂಡ ಈ ಪ್ರಿ-ರಿಲೀಸ್‌ ಇವೆಂಟ್‌ ಆಯೋಜಿಸಿತ್ತು. ಕಾರ್ಯಕ್ರಮಕ್ಕಾಗಿ ಮುಂಚಿತವಾಗಿಯೇ ಅಭಿಮಾನಿಗಳಿಗೆ ಸುಮಾರು 3 ಸಾವಿರಕ್ಕೂ ಹೆಚ್ಚು ವಿಶೇಷ ಪಾಸ್‌ಗಳನ್ನು ವಿತರಣೆ ಮಾಡಲಾಗಿತ್ತು. ಒಂದು ಪಾಸ್‌ನಲ್ಲಿ ಇಬ್ಬರ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಕೊನೆಯ ಕ್ಷಣದಲ್ಲಿ ವಿತರಿಸಿದ ಪಾಸ್‌ಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಜಮಾಯಿಸಿ, “ಜೇಮ್ಸ್‌’ ಪ್ರಿ-ರಿಲೀಸ್‌ ಇವೆಂಟ್‌ ಕಣ್ತುಂಬಿಕೊಂಡರು. ಇನ್ನು ಕಾರ್ಯಕ್ರಮಕ್ಕಾಗಿ 100/40 ಅಳತೆಯ ಬೃಹತ್‌ ಸೆಟ್‌ ಅಳವಡಿಸಲಾಗಿದ್ದು, ವೇದಿಕೆ ಕಾರ್ಯಕ್ರಮವನ್ನು ಸುಮಾರು 18 ಎಲ್ ಇಡಿ ಸ್ಕ್ರೀನ್‌ಗಳಲ್ಲಿ ಪ್ರಸಾರವಾಗುತ್ತಿತ್ತು. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಲೈವ್‌ ಮೂಲಕವೂ “ಜೇಮ್ಸ್‌’ ಪ್ರಿ-ರಿಲೀಸ್‌ ಇವೆಂಟ್‌ ಬಿತ್ತರವಾಯಿತು.

ವರನಟ ರಾಜ್‌ ಕುಟುಂಬ ಭಾಗಿ

“ಜೇಮ್ಸ್‌’ ಪ್ರಿ-ರಿಲೀಸ್‌ ಇವೆಂಟ್‌ನಲ್ಲಿ ನಟರಾದ ಶಿವರಾಜಕುಮಾರ್‌, ರಾಘವೇಂದ್ರ ರಾಜಕುಮಾರ್‌, ಪುನೀತ್‌ ರಾಜಕುಮಾರ್‌ ಪತ್ನಿ ಅಶ್ವಿ‌ನಿ, ಸೋದರಿಯರಾದ ಲಕ್ಷ್ಮೀ, ಪೂರ್ಣಿಮಾ, ಎಸ್‌. ಎ ಚಿನ್ನೇಗೌಡ, ಎಸ್‌. ಎ ಗೋವಿಂದ ರಾಜ್‌, ನಟರಾದ ಶ್ರೀಮುರಳಿ, ವಿನಯ್‌ ರಾಜಕುಮಾರ್‌, ಧನ್ಯಾ, ಧೀರನ್‌ ರಾಮ್‌ಕುಮಾರ್‌ ಸೇರಿದಂತೆ ವರನಟ ಡಾ. ರಾಜಕುಮಾರ್‌ ಕುಟುಂಬದ ಬಹುತೇಕ ಸದಸ್ಯರು ಹಾಜರಿದ್ದು, ವೇದಿಕೆಯ ಮೇಲೆ ಪುನೀತ್‌ ಅವರನ್ನು ನೆನೆದರು.

Advertisement

ವೇದಿಕೆ ಮೇಲೆ ಅಪ್ಪು ನೆನಪು ಮೆಲುಕು

ನಾವು ಐದು ಜನ ಸಹೋದರ- ಸಹೋದರಿಯರು ಒಟ್ಟಿಗೆ ಇದ್ದೆವು. ಈಗ ನಮ್ಮ ಜೊತೆ ಒಬ್ಬ ಇಲ್ಲ. ಅದರಲ್ಲೂ ಚಿಕ್ಕವನಾಗಿದ್ದ ಅಪ್ಪು ಹೋಗಿದ್ದು ಎಂದೂ ಮಾಯದ ನೋವು. ಅಪ್ಪು ಎಲ್ಲರಿಗೂ ಮುದ್ದಿನ ಮಗನಾಗಿದ್ದ. ಎಲ್ಲರಿಗೂ ಅವನೆಂದರೆ ಅಚ್ಚು-ಮೆಚ್ಚು. ಅವನ ಅಗಲಿಕೆ ಯಾರಿಗೂ ಅರಗಿಸಿಕೊಳ್ಳಲು ಆಗಿಲ್ಲ. ಹೊರಗಿನಿಂದ ನೋಡುವುದಕ್ಕೆ ಚೆನ್ನಾಗಿಯೇ ಇರುತ್ತೇವೆ. ಶೂಟಿಂಗ್‌ಗೆ ಹೋಗುತ್ತೇವೆ. ಹಾಡುತ್ತೇವೆ, ಕುಣಿಯುತ್ತೇವೆ, ಡಬ್ಬಿಂಗ್‌ ಮಾಡುತ್ತೇವೆ. ಆದರೆ ಆ ನೋವು ಒಳಗಡೆಯೇ ಇದೆ. ಅಪ್ಪು ನಮ್ಮನ್ನು ಬಿಟ್ಟು ಹೋದ, ರಾಘು ಆರೋಗ್ಯ ಹೀಗೆ ಆಯಿತು. ಇವರಿಬ್ಬರೂ ನನಗಿಂತಲೂ ಚಿಕ್ಕವರು ಇವರನ್ನು ಹೀಗೆಲ್ಲ ನೋಡುವುದು ನನಗೆ ಹೇಗೆ ತಾನೆ ಸಾಧ್ಯ?

 ಶಿವರಾಜಕುಮಾರ್‌, ನಟ

ಅಪ್ಪು ಸಿನಿಮಾವನ್ನು ವಿಶ್ವದಾದ್ಯಂತ ಬಿಗ್‌ ಸ್ಕ್ರೀನ್‌ ಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಇದೇ ಕಾರಣದಿಂದ ಇಷ್ಟೊಂದು ಸ್ಕ್ರೀನ್‌ಗಳಲ್ಲಿ “ಜೇಮ್ಸ್’ ರಿಲೀಸ್‌ ಆಗುತ್ತಿದೆ. ಸಿನಿಮಾದಲ್ಲಿ ಅಪ್ಪು ಅವರನ್ನು ನೋಡುವಾಗ ಮನಸ್ಸು ಭಾರವಾಗುತ್ತದೆ. ಅಪ್ಪು ಹೃದಯದಿಂದ ನಗುತ್ತಿದ್ದರು. ಅದು ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವಂತಿತ್ತು. ಚಿಕ್ಕಂದಿನಿಂದ ಇಲ್ಲಿಯವರೆಗೂ ಅದೇ ನಗು ಅವರಲ್ಲಿತ್ತು. ಎಲ್ಲರನ್ನೂ ರಂಜಿಸುತ್ತ ಇದ್ದವರು, “ಜೇಮ್ಸ್’ ಚಿತ್ರದ ಪ್ರಿ-ರಿಲೀಸ್‌ ಇವೆಂಟ್‌ನಲ್ಲಿ ಇಲ್ಲ ಅಂದುಕೊಂಡಾಗ ತುಂಬ ದುಃಖವಾಗುತ್ತದೆ.

 ಪ್ರಿಯಾ ಆನಂದ್‌, “ಜೇಮ್ಸ್‌’ ನಾಯಕ ನಟಿ

ಬಹಳ ಪ್ರೀತಿಯಿಂದ ಅಪ್ಪು ಮಾಮ ಎನ್ನುತ್ತಿದ್ದೆ. ಅವರ ಸಿನಿಮಾಗಳನ್ನು ಬಹಳ ಇಷ್ಟಪಟ್ಟು ನೋಡುತ್ತಿದ್ದೆ. ಅವರ ಸಿನಿಮಾಗಳನ್ನು ನೋಡಿ ನೀವು ಹೇಗೆ ಪ್ರೇರಿತರಾಗುತ್ತೀರಿ ಅಂಥ ಯಾರೋ ಪ್ರಶ್ನೆ ಕೇಳಿದ್ದರು. ಏನೇ ಇನ್ಸ್‌ಫೈರ್‌ ಆದ್ರೂ, ಅವರ ತರ ಎರಡು ಸ್ಟೆಪ್‌ ಹಾಕೋಕೆ ಆಗಲ್ಲ, ಎರಡು ಫೈಟ್‌ ಮಾಡೋಕೆ ಆಗಲ್ಲ. ಇರೋದು ಒಬ್ರೇ ಪವರ್‌ಸ್ಟಾರ್‌. ಅವರು ಪುನೀತ್‌ ರಾಜಕುಮಾರ್‌ ಮಾತ್ರ. ಅವರ ಗುಣನಡತೆ ನೋಡಿ ಎಲ್ಲ ಕಲಾವಿದರೂ ಅನುಸರಿಸುವಂಥದ್ದು ಸಾಕಷ್ಟಿದೆ. ಅವರು ಮಾಡಿದ ಎಷ್ಟೋ ಕೆಲಸಗಳು ನಮಗೆ ಗೊತ್ತೇ ಇರಲಿಲ್ಲ. ನಮ್ಮ ಪಕ್ಕದಲ್ಲೇ ದೇವರಿದ್ದರು. ಅವರನ್ನು ಮತ್ತೂಬ್ಬ ದೇವರು ಕಿತ್ತುಕೊಂಡಿದ್ದಕ್ಕೆ ಬೇಜಾರಾಗುತ್ತಿದೆ.

 ಶ್ರೀಮುರಳಿ, ನಟ

Advertisement

Udayavani is now on Telegram. Click here to join our channel and stay updated with the latest news.

Next