ಗಣರಾಜ್ಯೋತ್ಸವದ ಪ್ರಯುಕ್ತ ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ “ಜೇಮ್ಸ್’ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆ ಆಗಿದೆ. ಈ ಹೊಸ ಪೋಸ್ಟರ್‌ನಲ್ಲಿ “ಜೇಮ್ಸ್’ ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ಭಾರತೀಯ ಸೇನೆಯ ಸೈನಿಕನ ರೂಪದಲ್ಲಿ ಕಾಣಿಸಿಕೊಂಡಿದ್ದು, ಕೈಯಲ್ಲಿ ರೈಫಲ್ ಹಿಡಿದು ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ.
ಜೊತೆಗೆ ಪೋಸ್ಟರ್‌ನಲ್ಲಿ “ಸಲಾಂ ಸೋಲ್ಜರ್, ದೇಶಕ್ಕೆ ನೀನೆ ಪವರ್’ ಎನ್ನುವ ಟ್ಯಾಗ್ ಲೈನ್ ಕಾಣಿಸುತ್ತದೆ. ಈ ಮೂಲಕ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರ ಪಾತ್ರದ ಕಿರು ಪರಿಚಯವನ್ನು ಚಿತ್ರತಂಡ ಮಾಡಿಕೊಟ್ಟಿದೆ. ಹಾಗಾಗಿ “ಜೇಮ್ಸ…’ ಸಿನಿಮಾದಲ್ಲಿ ಅಪ್ಪು ಸೈನಿಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಚರ್ಚೆ ಅಭಿಮಾನಿ ವಲಯದಲ್ಲಿ ಶುರುವಾಗಿದೆ.
“ಜೇಮ್ಸ್’ ಚಿತ್ರದ ಬಗ್ಗೆ ಟ್ವಿಟ್ಟರ್‌ನಲ್ಲಿ ಒಂದಷ್ಟು ಮಾಹಿತಿ ನೀಡಿರುವ ನಿರ್ದೇಶಕ ಚೇತನ್ ಕುಮಾರ್, “”ಜೇಮ್ಸ್’ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಭಾರತದಾದ್ಯಂತ ಏಕಕಾಲಕ್ಕೆ 5 ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ. ಕನ್ನಡದ ಜೊತೆಗೆ ಹಿಂದಿ, ಮಲಯಾಳಂ, ತಮಿಳು, ತೆಲುಗು ಭಾಷೆಗಳಲ್ಲೂ “ಜೇಮ್ಸ್’ ಬಿಡುಗಡೆಯಾಗಲಿದೆ. ಶೀಘ್ರದಲ್ಲಿಯೇ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಲಾಗುವುದು’ ಎಂದಿದ್ದಾರೆ.
ಇದನ್ನೂ ಓದಿ:ವೆಸ್ಟ್ ಇಂಡೀಸ್ ಸರಣಿ: ಹಲವು ಅಚ್ಚರಿಗಳೊಂದಿಗೆ ತಂಡ ಪ್ರಕಟ; ರೋಹಿತ್ ನಾಯಕ
“ಜೇಮ್ಸ್’ ಸಿನಿಮಾದ ಹೊಸ ಪೋಸ್ಟರನ್ನು ಹಂಚಿಕೊಂಡಿರುವ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ, ಗಣರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದ್ದಾರೆ. ಹಾಗೆ ನಟ ಶಿವರಾಜ್ ಕುಮಾರ್ ಕೂಡ “ಜೇಮ್ಸ್’ ಪೋಸ್ಟರ್ ಹಂಚಿಕೊಂಡು, “ಜೇಮ್ಸ್’ ರೂಪದಲ್ಲಿ ಅಪ್ಪು, ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.
ಇನ್ನು ಹೊಸದಾಗಿ ಬಿಡುಗಡೆಯಾಗಿರುವ “ಜೇಮ್ಸ್’ ಪೋಸ್ಟರ್‌ಗೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಫೇಸ್‌ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ “ಜೇಮ್ಸ್’ ಪೋಸ್ಟರ್ ವೈರಲ್ ಆಗುತ್ತಿದೆ. ಚಿತ್ರರಂಗದ ಅನೇಕ ತಾರೆಯರು, ಕಲಾವಿದರು, ನಿರ್ದೇಶಕರು, ತಂತ್ರಜ್ಞರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ತಮ್ಮ ಖಾತೆಯಲ್ಲಿ “ಜೇಮ್ಸ್’ ಪೋಸ್ಟರ್ ಹಂಚಿಕೊಳ್ಳುತ್ತಿದ್ದು, ಚಿತ್ರದ ಬಗ್ಗೆ ನಿರೀಕ್ಷೆಯ ಮಾತುಗಳನ್ನಾಡುತ್ತಿದ್ದಾರೆ.