ಗಂಗಾವತಿ: ಪುನೀತ್ ರಾಜಕುಮಾರ ನಟನೆಯ ಕೊನೆಯ ಚಿತ್ರ ಜೇಮ್ಸ್ ರಾಜ್ಯಾದ್ಯಂತ ಯಶಸ್ವಯಾಗಿ ಪ್ರದರ್ಶನವಾಗುತ್ತಿದ್ದು ಕೆಲವೆಡೆ ಜೇಮ್ಸ್ ತೆಗೆದು ಅಥವಾ ಒಂದೆರಡು ಶೋಗಳನ್ನು ಕಾಶ್ಮೀರ್ ಫೈಲ್ಸ್ ಚಿತ್ರ ಪ್ರದರ್ಶನ ಮಾಡುವಂತೆ ರಾಜಕೀಯ ಮುಖಂಡರುಗಳು ಒತ್ತಡ ಹೇರುತ್ತಿದ್ದು ಜೇಮ್ಸ್ ತೆಗೆಯದಂತೆ ಚಿತ್ರಮಂದಿರ ಪ್ರದರ್ಶಕರಿಗೆ ಮನವಿ ಮಾಡಲಾಗಿದೆ ಎಂದು ಜೇಮ್ಸ್ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ತಿಳಿಸಿದರು.
ಅವರು ಮಂಗಳವಾರ ನಗರದ ಶಿವೆ ಟಾಕೀಸ್ ಗೆ ತೆಲುಗು ಚಿತ್ರ ನಟ ಎಂ. ಶ್ರೀಕಾಂತ ಜತೆಗೂಡಿ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ರಾಜ್ಯದ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಪ್ರಮುಖ ರಾಜಕೀಯ ಮುಖಂಡರನ್ನು ಭೇಟಿಯಾಗಿ ಜೇಮ್ಸ್ ಚಿತ್ರ ವೀಕ್ಷಿಸುವಂತೆ ಮನವಿ ಮಾಡಲಾಗಿದೆ. ಸಿದ್ದರಾಮಯ್ಯನವರು ಜೇಮ್ಸ್ ಚಿತ್ರ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿ ಕೆಲವೆಡೆ ಚಿತ್ರ ಪ್ರದರ್ಶನಕ್ಕೆ ಅಡ್ಡಿಯಾಗುತ್ತಿರುವ ಕುರಿತು ಸಾಮಾಜಿಕ ಜಾಲತಾಣ ಪರ ವಿರುದ್ಧ ಅಭಿಪ್ರಾಯ ವ್ಯಕ್ತವಾಗುತ್ತಿರುವ ಕುರಿತು ಕೇಳಿದರು ಆಗ ಈ ಬಗ್ಗೆ ತಮಗೆ ಗೊತ್ತಿಲ್ಲ. ಕೆಲವೆಡೆ ಜೇಮ್ಸ್ ಪ್ರದರ್ಶನವಾಗುವ ಚಿತ್ರಮಂದಿರಗಳಲ್ಲಿ ಕಾಶ್ಮೀರ್ ಫೈಲ್ಸ್ ಚಿತ್ರ ಪ್ರದರ್ಶನಕ್ಕೆ ಕೆಲ ಚಿತ್ರಮಂದಿರಗಳ ಮಾಲೀಕರು ತಮ್ಮನ್ನು ಕೇಳಿದ್ದು ಇದಕ್ಕೆ ನಿರಾಕರಿಸಲಾಗಿದೆ ಎಂದರು.
ಭರ್ಜರಿಯಾಗಿ ಜೇಮ್ಸ್ ಪ್ರದರ್ಶನವಾಗುವ ಸಂದರ್ಭದಲ್ಲಿ ಬೇರೆ ಸಿನೆಮಾ ಪ್ರದರ್ಶಿಸಿದರೆ ಬೇರೆ ಸಂದೇಶ ಹೋಗುತ್ತದೆ. ಆದ್ದರಿಂದ ದಯವಿಟ್ಟು ದಿವಂಗತ ಪುನೀತ ರಾಜಕುಮಾರ ಹಾಗೂ ಪುನೀತ್ ಅವರ ಅಭಿಮಾನಿಗಳಿಗೆ ಅವಮಾನವಾಗುವ ಯಾವುದೇ ಘಟನೆಗಳು ನಡೆಯಬಾರದು. ಈಗಾಗಲೇ ಜೇಮ್ಸ್ ತೆರೆ ಕಂಡು 6 ದಿನ ವಿಶ್ವದಾದ್ಯಂತ ಅತ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಉತ್ತಮ ಕಲೆಕ್ಷನ್ ಇದ್ದು ಕನ್ನಡಿಗರು ಸೇರಿ ವಿಶ್ವದ ಎಲ್ಲಾ ಪ್ರೇಕ್ಷಕರು ಜೇಮ್ಸ್ ಚಿತ್ರಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಡಾ|ಶಿವರಾಜಕುಮಾರ, ರಾಘವೇಂದ್ರರಾಜಕುಮಾರ ಹಾಗೂ ಅಶ್ವೀನಿ ಪುನೀತರಾಜಕುಮಾರ ಜೇಮ್ಸ್ ಚಿತ್ರ ಪ್ರದರ್ಶನದ ಬಗ್ಗೆ ದಿನವೂ ಮೊಬೈಲ್ ಕರೆ ಮಾಡಿ ವಿಚಾರಿಸುತ್ತಿದ್ದು ಜೇಮ್ಸ್ ನ್ನು ಕನ್ನಡಿಗರು ಯಶಸ್ವಿ ಮಾಡಲಿದ್ದಾರೆಂದರು.
ಈ ಸಂದರ್ಭದಲ್ಲಿ ಶಿವೆ ಚಿತ್ರಮಂದಿರ ಮಾಲೀಕ ಶಿವರಾಜಗೌಡ, ಬಿಜೆಪಿ ಮುಖಂಡರಾದ ಗಣೇಶ್ ಬಿಚ್ಚಾಲಿ, ಚನ್ನವೀರನಗೌಡ, ವಿನಯ್ ಪಾಟೀಲ್, ವಿರೇಶ ಸುಳೇಕಲ್, ದೇವಪ್ಪ ನಾಯಕ, ಮೇಕಾ ಸುಬ್ರಮಣ್ಯ, ಕೋಟೇಶ್ವರರಾವ್, ವೀರಭದ್ರರಾವ್ ಸೇರಿ ಅನೇಕರಿದ್ದರು.
ಪುನೀತರಾಜಕುಮಾರ ನಿಧನರಾಗಿಲ್ಲ. ಅವರು ಸಾಮಾಜಿಕ ಸೇವೆಗಳ ಮೂಲಕ ನಮ್ಮೊಂದಿಗಿದ್ದಾರೆ. ಕೊನೆಯ ಚಿತ್ರ ಜೇಮ್ಸ್ ನ್ನು ಈಗಾಗಲೇ ಅಪ್ಪು ಅಭಿಮಾನಿಗಳು ಯಶಸ್ವಿ ಮಾಡಿದ್ದು ಯಾವುದೋ ಕಾರಣಕ್ಕೆ ಜೇಮ್ಸ್ ಚಿತ್ರ ಪ್ರದರ್ಶನಕ್ಕೆ ಅಡ್ಡಿ ಮಾಡಬಾರದು. ಕನ್ನಡ ಭಾಷೆ ನೆಲ ಜಲದ ಬಗ್ಗೆ ಡಾ|ರಾಜಕುಮಾರ ಕುಟುಂಬಕ್ಕೆ ಹೆಚ್ಚಿನ ಕಾಳಜಿ ಇತ್ತು. ಅದನ್ನು ಕನ್ನಡ ಚಿತ್ರ ಪ್ರೇಕ್ಷಕರು ಮುಂದುವರಿಸಿ ಕೊಂಡು ಹೋಗಬೇಕು. ನಾನು ಸಹ ಜೇಮ್ಸ್ ನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದು ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರ್ಮಾಪಕ ಕಿಶೋರ ಪತ್ತಿಕೊಂಡ ಜತೆ ಸೇರಿ ಸಂಚರಿಸಿ ಜೇಮ್ಸ್ ಚಿತ್ರ ಪ್ರಮೋಟ್ ಮಾಡುತ್ತೇನೆ. ನಾನು ಸಹ ಕನ್ನಡಿಗ ಗಂಗಾವತಿ ನನ್ನ ಮಾತೃಭೂಮಿಯಾಗಿದೆ.
–ಎಂ. ಶ್ರೀಕಾಂತ ತೆಲುಗು–ಕನ್ನಡ ಚಿತ್ರ ನಟ.