Advertisement

ರಾಜಕುಮಾರ ನೀಡಿದ ನೆನಪುಗಳ ಭಂಡಾರ ..; ಜೇಮ್ಸ್ ನಿರ್ದೇಶಕರ ಮನದ ಮಾತು

11:04 AM Oct 29, 2022 | Team Udayavani |

ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌- ಇದು ಬರಿ ವ್ಯಕ್ತಿಯ ಹೆಸರಲ್ಲ ಒಂದು ಮಹಾನ್‌ ಶಕ್ತಿಯ, ವ್ಯಕ್ತಿತ್ವದ ಹೆಸರು ಎಂದು ಜಗತ್ತಿಗೆ ತಿಳಿದು ಒಂದು ವರುಷ …”ಕಾಣದಂತೆ ಮಾಯವಾದನು’ ಅವರೇ ನಟಿಸಿ ಹಾಡಿದ ಗೀತೆಯ ಸಾಲಿನಂತೆ ನೋಡನೋಡುತ್ತಲೇ ಅದೃಶ್ಯವಾದ ದೇವಮಾನವ…ಇವರೊಂದಿಗೆ ಜೀವಿಸಿದ ಜೀವಗಳೆಲ್ಲವೂ ಪುನೀತ… ದೈಹಿಕವಾಗಿ ಇಲ್ಲದಿದ್ದರೂ ಮಾನಸಿಕವಾಗಿ ಅವರ ಇರುವಿಕೆಯಲ್ಲಿಯೇ ದಿನಗಳು ಕಳೆದು ಹೋಗಿವೆ.

Advertisement

ಒಮ್ಮೆ ಕಣ್ಮುಚ್ಚಿ ಹಿಂದೆ ತಿರುಗಿ ನೋಡಿದರೆ ನೆನಪಿನ ಖಜಾನೆಯಲ್ಲಿ ಜನುಮಕ್ಕಾಗುವಷ್ಟು ನೆನಪುಗಳಿವೆ ..ಒಂದೊಂದು ನೆನಪುಗಳು ಶ್ರೇಷ್ಟ ವಿಶಿಷ್ಟ ..ಅಪ್ಪು ಅವರನ್ನು ಕೊನೆಯ ಬಾರಿ ಕಂಠೀರವ ಸ್ಟುಡಿಯೋದಲ್ಲಿ ಮಲಗಿಸಿದ್ದನ್ನು ನೋಡಿದಾಗ ತಾನು ಸಂಪಾದಿಸಿದ ಲಕ್ಷಾಂತರ ಜನ ಸಂಪತ್ತನ್ನು ದೊರೆ ಪ್ರದರ್ಶನಕ್ಕೆ ಇಟ್ಟಂತೆ, ದಾನವೇ ನಿಜವಾದ ಆಸ್ತಿ ಎಂದು ಮನುಕುಲಕ್ಕೆ ಹೊಸ ಸಂದೇಶ ಸಾರಿದಂತೆ, ದೈವಿಕ ಶಕ್ತಿಯನ್ನು ಅಪ್ಪು ಅವರ ನಗುವಿನಲ್ಲಿ ಪ್ರಜ್ವಲಿಸಿದಂತೆ… ಏನೇನೋ ಭಾವುಕ ಕಲ್ಪನೆಗಳು ಭಾಸವಾಗುತ್ತಿತ್ತು … ಅವಕಾಶ ಕೊಟ್ಟು, ಅನ್ನ ಕೊಟ್ಟು, ಪ್ರೀತಿ ಕೊಟ್ಟ ದೊರೆಯನ್ನು ಮಣ್ಣು ಮಾಡುವಾಗ ಮಣ್ಣು ಹಾಕುವ ಮನಸಾಗದೆ ಕೈಮುಗಿದು ಹೊರ ನಡೆದಿದ್ದೆ.

ಮನುಷ್ಯ ದೇವರಾಗಿದ್ದನ್ನು ಈ ಭೂಮಿ ಬಹಳಷ್ಟು ಬಾರಿ ಕಂಡಿದೆ. ಈ ಶತಮಾನದಲ್ಲಿ ವರನಟ ಡಾ. ರಾಜ್‌ ಕುಮಾರ್‌ ಅವರಿಗೆ ಮಾತ್ರ ಆ ಭಾಗ್ಯ ದೊರಕಿತು. ಈಗ ನಮ್ಮ ಅಪ್ಪು ದೇವರಾಗಿದ್ದಾರೆ. ಯಾವ ಮನುಷ್ಯನಲ್ಲಿ ಸರಳತೆ ವಿಧೇಯತೆ, ವಿನಯತೆ, ಪ್ರಾಮಾಣಿಕತೆ, ಸಜ್ಜನಿಕೆ ಇರುತ್ತದೆಯೋ ಅಂಥವರನ್ನು ದೈವಿಕತೆ ಆವರಿಸಿಕೊಳ್ಳುತ್ತದೆ.. ಅಪ್ಪು ಅವರಲ್ಲಿ ಇವೆಲ್ಲವೂ ಅತೀವವಾಗಿತ್ತು ಈಗ ಅಪ್ಪುರವರು ಅಭಿಮಾನಿಗಳ ಪಾಲಿಗೆ ದೇವರಾಗಿದ್ದಾರೆ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್‌, ವಿವೇಕಾನಂದರ ಪಕ್ಕ ನಮ್ಮ ರಾಜರತ್ನ ಕುಳಿತಿದ್ದಾರೆ.

ಇದನ್ನೂ ಓದಿ:“ಮಲೆಗಳಲ್ಲಿ ಮದುಮಗಳು’ ಬರಿಯ ಪುಸ್ತಕವಲ್ಲ…ಕುವೆಂಪು ಅವರು ಸೃಷ್ಟಿಸಿದ ಮಾಯಾಲೋಕ

ಜೊತೆಯಲ್ಲಿದ್ದವರಿಗೆ ತಿಳಿಯದಂತೆ ಮಾಡಿದ ದಾನ ಧರ್ಮಗಳು, ಅವರ ಅಗಲಿಕೆಯ ನಂತರ ಗೋಚರವಾಗಿದ್ದು ಅವರ ಸದ್ಗುಣವನ್ನು ಸಾರುತ್ತದೆ. ಪ್ರಚಾರ ಬಯಸದೆ ಮಾಡಿದ ಸಹಾಯಗಳೆಷ್ಟೋ ಲೆಕ್ಕಕ್ಕೆ ಸಿಕ್ಕಿದ್ದು ಕೆಲವು, ಸಿಗದಷ್ಟು ಹಲವು.. ಸಂಭಾವನೆ ಪಡೆಯದೆ ನಟಿಸಿದ ಜಾಹೀರಾತುಗಳು… ತಾವು ಹಾಡಿದ ಸಂಭಾವನೆಯನ್ನು ಟ್ರಸ್ಟ್‌ ಮುಖಾಂತರ ಅನಾಥಾಶ್ರಮಕ್ಕೆ ನೀಡಿದ್ದು, ಸಂಘ ಸಂಸ್ಥೆಗಳಿಗೆ ದೇಣಿಗೆ, ಸರ್ಕಾರಿ ಶಾಲೆಗಳನ್ನು ದತ್ತು ಕೊಂಡದ್ದು, ನಡೆಸುತ್ತಿದ್ದ ಗೋಶಾಲೆಗಳು, ಅನಾಥಾಶ್ರಮಗಳು, ವೃದ್ಧಾಶ್ರಮಗಳು, ಕೊರೊನಾ ಸಂದರ್ಭದಲ್ಲಿ ಸರ್ಕಾರಕ್ಕೆ ಹಣ ನೀಡಿದ್ದು… ಒಂದಾ, ಎರಡಾ ನೂರಾರು ಒಳ್ಳೆಯ ಕೆಲಸಗಳು..

Advertisement

ಕೊಪ್ಪಳದ ಮಲ್ಲಾಪುರ ಗ್ರಾಮದ ಶಾಲೆಗೆ 1ಲಕ್ಷ ರೂ ನೀಡಿದ ಸಂದರ್ಭಕ್ಕೆ ನಾನು ಸಾಕ್ಷಿಯಾಗಿದ್ದೆ. “ಪಿಆರ್‌ಕೆ’ ಸಂಸ್ಥೆ ಮುಖಾಂತರ ಹೊಸ ಕಲಾವಿದರಿಗೆ ಹೊಸ ನಿರ್ದೇಶಕರಿಗೆ ಆಸರೆಯಾದ ಬಗೆ, ಹೊಸ ಪ್ರತಿಭೆಗಳಿಗೆ ಹೊಸ ಸಿನಿಮಾಗಳಿಗೆ ಹೊಸ ಪ್ರಯೋಗಗಳಿಗೆ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದ ರೀತಿ, ಚಿತ್ರರಂಗವೇ ಕುಟುಂಬವೆಂದು ಭಾವಿಸಿ,ಯಾವ ಸಿನಿಮಾ ಗೆದ್ದರೂ ನಿಷ್ಕಲ್ಮಶವಾಗಿ ಅಭಿನಂದಿಸಿ ಖುಷಿಪಡುತ್ತಿ ಹೃದಯ ಅವರದು.

ಅಣ್ಣಾವರು, ಶಿವಣ್ಣನವರ ನಂತರ “ಗಂಧದಗುಡಿ’ಯನ್ನ ತಮ್ಮದೇ ದೃಷ್ಟಿಕೋನದಲ್ಲಿ ಅನ್ವೇಷಿಸಿ ಜೀವಿಸಿದ್ದಾರೆ. ಚಿತ್ರ ಬಿಡುಗಡೆಯಾಗಿದೆ ಅಪ್ಪುರವರು ನಿಮಗಾಗಿ ಕಾಯುತ್ತಿದ್ದಾರೆ. ಅವರ ಹುಟ್ಟುಹಬ್ಬದ ದಿನ “ಜೇಮ್ಸ್’ ಅವತಾರದಲ್ಲಿ ಚಿತ್ರಮಂದಿರದಲ್ಲಿ ಕಾಣಿಸಿಕೊಂಡಿದ್ದರು. ಮತ್ತೆ 1 ವರ್ಷದ ಅವರ ಪುಣ್ಯ ಸ್ಮರಣೆಯಲ್ಲಿ “ಗಂಧದ ಗುಡಿ’ ರೂಪದಲ್ಲಿ ಕಾಣಸಿಗುತ್ತಿರುವುದು ವಿಶೇಷ. ಅಪ್ಪುರವರು ಕನ್ನಡ ಮನಸ್ಸುಗಳಿಗೆ ಎಂದೆಂದಿಗೂ ಒಂದು ಶ್ರೇಷ್ಠ ಚರಿತ್ರೆ.

ಶಿವಣ್ಣ, ರಾಘಣ್ಣ, ಅಶ್ವಿ‌ನಿ ಪುನೀತ್‌ ರಾಜ್‌ ಕುಮಾರ್‌ರವರು ತಮ್ಮ ಎಲ್ಲ ದುಃಖವನ್ನು ತಮ್ಮೊಳಗೆ ಹಿಡಿದಿಟ್ಟುಕೊಂಡು ಎಲ್ಲಾ ಕಾರ್ಯಗಳನ್ನು, ಎಲ್ಲ ಕಾರ್ಯಕ್ರಮಗಳನ್ನು ಶ್ರೇಷ್ಠವಾಗಿ ನಡೆಸಿ ಕೊಟ್ಟಂತದ್ದು, ಯಾವ ಅಭಿಮಾನಿಯೂ ಮರೆಯಲಾರ. ಎಲ್ಲರಂತೆ ನಾನು ಚಿಕ್ಕ ವಯಸ್ಸಿನಿಂದ ಅಪ್ಪು ಅವರ ಅಭಿನಯಕ್ಕೆ ಅಭಿಮಾನಿ. ಅಣ್ಣಾವ್ರು ಹುಟ್ಟಿದ ತಾಲ್ಲೂಕು ಮತ್ತು ಜಿಲ್ಲೆಗೆ ಸೇರಿದವನು ಎನ್ನುವ ಹೆಮ್ಮೆ, ನನಗೆ ಸಿಕ್ಕ ಬಳುವಳಿ … ಕಾಲೇಜು ದಿನಗಳಲ್ಲಿ ಚಾಮುಂಡಿ ಬೆಟ್ಟ ಹತ್ತುವ ಸಂದರ್ಭದಲ್ಲಿ ಮೊದಲ ಬಾರಿ ನೇರವಾಗಿ ಅಪ್ಪು ಅವರ ದರ್ಶನ ಸಿಕ್ಕಿತ್ತು ಅನಂತರ “ಪೃಥ್ವಿ’ ಸಿನಿಮಾದ ಶೂಟಿಂಗ್‌ ನಲ್ಲಿ ಹತ್ತಿರದಿಂದ ಕಣ್ತುಂಬಿಕೊಳ್ಳುವ ಭಾಗ್ಯ ಸಿನಿಮಾ ಕ್ಷೇತ್ರದಲ್ಲಿ ನನ್ನನ್ನು ತೊಡಗಿಸಿಕೊಂಡ ನಂತರ ಬಹಳಷ್ಟು ಕಾರ್ಯಕ್ರಮದಲ್ಲಿ ನೋಡಿದ್ದರು, ಮಾತನಾಡಿಸುವ ಅವಕಾಶ ದೊರಕಿದ್ದು ನನ್ನ ಚೊಚ್ಚಲ ನಿರ್ದೇಶನದ ಸಿನಿಮಾ “ಬಹದ್ದೂರ್‌’ ಮುಹೂರ್ತ ಸಂದರ್ಭದಲ್ಲಿ ಕ್ಯಾಮೆರಾ ಚಾಲನೆ ಮಾಡಿ ಕೊಟ್ಟರು ಅಲ್ಲಿಂದ ಒಡನಾಟಕ್ಕೆ ಚಾಲನೆ ಸಿಕ್ಕಿತು.

ಸಿನಿಮಾಗೆ ಮೊದಲ ಬಾರಿ ತಮ್ಮ ಧ್ವನಿಯನ್ನು ಕತೆಯ ನಿರೂಪಣೆಗೆ ನೀಡಿದರು. ಸಿನಿಮಾ ಗೆದ್ದ ನಂತರ ಅಭಿನಂದಿಸಿದರು. “ಜೇಮ್ಸ್’ ಕತೆ ಕೇಳಿ ನಿರ್ದೇಶನದ ಅವಕಾಶ ನೀಡಿದರು. ಬೇರೆ ಸಿನಿಮಾಗಳಿಗೆ ನಾನು ಬರೆದ ಹಾಡುಗಳಿಗೆ ಧ್ವನಿ. ಹೀಗೆ ಒಂದಲ್ಲ ಒಂದು ವಿಷಯಕ್ಕಾಗಿ ಭೇಟಿ ನೀಡಿ ಅವರೊಂದಿಗೆ ಸಮಯ ಕಳೆಯುವ ಪುಣ್ಯ .. ಅವರ ಹುಟ್ಟುಹಬ್ಬಕ್ಕೆ ಜೇಮ್ಸ್ ಮೋಷನ್‌ ಪೋಸ್ಟರ್‌ ಲಾಂಚ್‌… ಅವರ ಮನೆಯ ಎಲ್ಲಾ ಕಾರ್ಯಕ್ರಮಗಳಿಗೆ ಆಹ್ವಾನ.. ದೀಪಾವಳಿಯ ಸ್ವೀಟ್‌ ಬಾಕ್ಸ್‌ ..

“ಪಿಆರ್‌ ಕೆ’ ಸಂಸ್ಥೆ ಶುರುವಾದ ನಂತರ ಅವರ ನಿರ್ಮಾಣದ ಸಿನಿಮಾಗಳ ಬಗ್ಗೆ ಚರ್ಚೆ ಅವರೊಂದಿಗೆ ಊಟ ಮಾಡುವ ಸೌಭಾಗ್ಯ, ಎಲ್ಲಾ ವಿಷಯಗಳನ್ನು ಅವರೊಂದಿಗೆ ಮುಕ್ತವಾಗಿ ಮಾತನಾಡುವ ಸಲಿಗೆ ಎಲ್ಲವೂ ಸಿಕ್ಕಿತು.ಅವರ ಅಪ್ಪುಗೆ ಎಂತಹವರಿಗೂ ಹೊಸ ಹುಮ್ಮಸ್ಸನ್ನು ನೀಡುವಂಥದ್ದು ಅವರು ಹೆಗಲ ಮೇಲೆ ಕೈಯಿಟ್ಟರೆ ಏನನ್ನಾದರೂ ಸಾಧಿಸಬಲ್ಲೇ ಎಂಬ ಪ್ರೇರಣೆ ಹಾಗೂ ಛಲ ಹುಟ್ಟುತ್ತಿತ್ತು..ಅವರ ನಟನೆಗೆ ಅಭಿಮಾನಿಯಾಗಿದ್ದ ನಾನು ನನಗೇ ತಿಳಿಯದೆ ಅವರ ವ್ಯಕ್ತಿತ್ವಕ್ಕೆ ಅಭಿಮಾನಿಯಾಗಿ ಹೋಗಿದ್ದೆ.

ಜೇಮ್ಸ್ ಸಿನಿಮಾ ಶುರುವಾದ ನಂತರ ಸತತ 2 ವರ್ಷ ಅವರೊಂದಿಗಿನ ಪಯಣ ನನ್ನ ಪೂರ್ವ ಜನ್ಮದ ಪುಣ್ಯದ ಫ‌ಲದಂತೆ ಭಾಸವಾಗುತ್ತದೆ. ಅವರಿಂದ ಕಲಿತದ್ದು ಅಪಾರ. ಜನುಮಕ್ಕಾಗುವಷ್ಟು ನೆನಪುಗಳ ಭಂಡಾರ ..

ಚೇತನ್‌ ಕುಮಾರ್‌, ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next