ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ದಿ ಓವಲ್ ನಲ್ಲಿ ನಡೆಯಲಿದೆ. ಎರಡೂ ತಂಡಗಳು ಅಭ್ಯಾಸದಲ್ಲಿ ತೊಡಗಿದೆ. ಇಂಗ್ಲೆಂಡ್ ತಂಡ ನಾಲ್ಕನೇ ಪಂದ್ಯಕ್ಕಾಗಿ ಇಬ್ಬರು ವೇಗಿಗಳನ್ನು ಕರೆಸಿಕೊಂಡಿದೆ.
ಮಾರ್ಕ್ ವುಡ್ ಮತ್ತು ಕ್ರಿಸ್ ವೋಕ್ಸ್ ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಆದರೆ ಮೂರು ಪಂದ್ಯದಲ್ಲಿ ಆಡಿದ್ದ ಹಿರಿಯ ವೇಗಿ ಜೇಮ್ಸ್ ಆ್ಯಂಡರ್ಸನ್ ನಾಲ್ಕನೇ ಪಂದ್ಯದಲ್ಲಿ ಆಡುವ ಸಾಧ್ಯತೆ ಕಡಿಮೆ ಎನ್ನುತ್ತಿದೆ ವರದಿ.
ಇಂಗ್ಲೆಂಡ್ ತಂಡವು ಆ್ಯಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ನಡುವೆ ಆವರ್ತನ ಪದ್ದತಿ ಅನುಸರಿಸುತ್ತಿತ್ತು. ಒಂದು ಪಂದ್ಯದಲ್ಲಿ ಜಿಮ್ಮಿ ಆಡಿದರೆ ಮತ್ತೊಂದು ಪಂದ್ಯದಲ್ಲಿ ಬ್ರಾಡ್ ಆಡುತ್ತಿದ್ದರು. ಆದರೆ ಸರಣಿಯ ಆರಂಭದಲ್ಲೇ ಬ್ರಾಡ್ ಗಾಯಾಳಾದ ಕಾರಣ ಆ್ಯಂಡರ್ಸನ್ ಮೂರು ಪಂದ್ಯಗಳಲ್ಲೂ ಆಡಿದ್ದರು.
ಇದನ್ನೂ ಓದಿ:ರಣಜಿ ಟ್ರೋಫಿ: ಒಂದೇ ಗುಂಪಿನಲ್ಲಿ ಕರ್ನಾಟಕ, ಮುಂಬೈ, ದೆಹಲಿ ತಂಡಗಳು
ಸದ್ಯ ನಾಲ್ಕನೇ ಪಂದ್ಯದಲ್ಲಿ ಆ್ಯಂಡರ್ಸನ್ ಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ಮಾರ್ಕ್ ವುಡ್ ಮತ್ತು ಕ್ರಿಸ್ ವೋಕ್ಸ್ ತಂಡಕ್ಕೆ ಮರಳಿರುವ ಕಾರಣ ಬೌಲಿಂಗ್ ಪಡೆ ಬಲಿಷ್ಠವಾಗಿದೆ.
ಭಾರತೀಯ ನಾಯಕ ವಿರಾಟ್ ಕೊಹ್ಲಿಗೆ ಈ ಸರಣಿಯಲ್ಲಿ ಆ್ಯಂಡರ್ಸನ್ ದುಸ್ವಪ್ನವಾಗಿ ಕಾಡಿದ್ದರು. ಮೊದಲ ಪಂದ್ಯದ ಮೊದಲ ಎಸೆತದಲ್ಲೇ ವಿರಾಟ್ ಕೊಹ್ಲಿ ಆ್ಯಂಡರ್ಸನ್ ಎಸೆತಕ್ಕೆ ಔಟಾಗಿದ್ದರು.