ಲಂಡನ್: ನೂತನ ನಾಯಕ ಬೆನ್ ಸ್ಟೋಕ್ಸ್ ಮತ್ತು ನೂತನ ಕೋಚ್ ಬ್ರೆಂಡನ್ ಮೆಕಲಮ್ ಮಾರ್ಗದರ್ಶನದಲ್ಲಿ ಕಣಕ್ಕಿಳಿಯಲಿರುವ ಆತಿಥೇಯ ಇಂಗ್ಲೆಂಡ್ ತಂಡ ಲಾರ್ಡ್ಸ್ ಟೆಸ್ಟ್ ಪಂದ್ಯಕ್ಕೆ ಅಣಿಯಾಗಿದೆ.
ಪ್ರವಾಸಿ ನ್ಯೂಜಿಲ್ಯಾಂಡ್ ಎದುರಿನ ಪ್ರಥಮ ಟೆಸ್ಟ್ ಪಂದ್ಯ ಗುರುವಾರ ಇಲ್ಲಿ ಆರಂಭವಾಗಲಿದೆ.
ಅನುಭವಿ ವೇಗಿಗಳಾದ ಸ್ಟುವರ್ಟ್ ಬ್ರಾಡ್ ಮತ್ತು ಜೇಮ್ಸ್ ಆ್ಯಂಡರ್ಸನ್ ಅವರನ್ನು ಇಂಗ್ಲೆಂಡಿನ ಆಡುವ ಬಳಗಕ್ಕೆ ಸೇರಿಸಿಕೊಳ್ಳಲಾಗಿದೆ. ಇವರೊಂದಿಗೆ ಸೀಮ್ ಬೌಲರ್ ಮ್ಯಾಥ್ಯೂ ಪಾಟ್ಸ್ ಅವರಿಗೆ ಅವಕಾಶ ಸಿಕ್ಕಿದೆ. ಪಾಟ್ಸ್ ಆಡುತ್ತಿರುವ ಮೊದಲ ಟೆಸ್ಟ್ ಇದಾಗಿದೆ. ಇವರು ಇಂಗ್ಲೆಂಡಿನ 704ನೇ ಟೆಸ್ಟ್ ಆಟಗಾರನಾಗಲಿದ್ದಾರೆ.
ಜೂ. 2-27ರ ಅವಧಿಯಲ್ಲಿ ಇಂಗ್ಲೆಂಡ್-ನ್ಯೂಜಿಲ್ಯಾಂಡ್ ನಡುವೆ 3 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಉಳಿದೆರಡು ಪಂದ್ಯಗಳ ತಾಣ ಟ್ರೆಂಟ್‌ಬ್ರಿಜ್ ಮತ್ತು ಹೇಡಿಂಗ್ಲೆ.
ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್‌ಗೆ ಪ್ರವಾಸಗೈದಾಗ ಆ್ಯಂಡರ್ಸನ್ ಮತ್ತು ಬ್ರಾಡ್ ಅವರನ್ನು ಕೈಬಿಡಲಾಗಿತ್ತು. ಇದಕ್ಕೂ ಮುನ್ನ ಆಸ್ಟ್ರೇಲಿಯದಲ್ಲಿ ಆಡಲಾದ ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್ 0-4 ಆಘಾತಕ್ಕೊಳಗಾಗಿತ್ತು.
ಇಂಗ್ಲೆಂಡ್ ಆಡುವ ಬಳಗ: ಜಾಕ್ ಕ್ರಾಲಿ, ಅಲೆಕ್ಸ್ ಲೀಸ್, ಓಲೀ ಪೋಪ್, ಜೋ ರೂಟ್, ಜಾನಿ ಬೇರ್‌ಸ್ಟೊ, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿ.ಕೀ.), ಮ್ಯಾಥ್ಯೂ ಪಾಟ್ಸ್, ಜಾಕ್ ಲೀಚ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆ್ಯಂಡರ್ಸನ್.