Advertisement
ಪ್ರಶ್ನೋತ್ತರ ವೇಳೆಯಲ್ಲಿ ಎರಡು ಪ್ರಶ್ನೆಗಳು ಮುಗಿದ ಅನಂತರ ಈ ವಿಷಯ ಕೈಗೆತ್ತಿಕೊಂಡ ವಿಪಕ್ಷದ ಸದಸ್ಯರು ಸಚಿವ ಜಮೀರ್ ಅಹ್ಮದ್ ರಾಜೀನಾಮೆ ಇಲ್ಲವೇ ಕ್ಷಮೆಗೆ ಒತ್ತಾಯಿಸಿದರು. ಇದರಿಂದಾಗಿ ಸಭಾಪತಿ ಬಸವರಾಜ ಹೊರಟ್ಟಿ ಎರಡು ಬಾರಿ ಕಲಾಪವನ್ನು ಮುಂದೂಡಿದರು.
Related Articles
Advertisement
ಸಚಿವರ ಉತ್ತರದ ಅನಂತರವೂ ವಿಪಕ್ಷದ ಸದಸ್ಯರು ಪ್ರತಿಭಟನೆ ಮುಂದುವರಿಸಿದರು. ಆಗ 10 ನಿಮಿಷ ಕಲಾಪ ಮುಂದೂಡಿದ ಸಭಾಪತಿಗಳು ಸಂಧಾನ ಸಭೆ ನಡೆಸಿದರೂ ಫಲ ಸಿಗಲಿಲ್ಲ. ಕಲಾಪ ಅರಂಭವಾಗುತ್ತಿದ್ದಂತೆ ಮತ್ತೆ ಪ್ರತಿಭಟನೆಗೆ ಮುಂದಾದರು. ಇದರಿಂದ ಕೋಪಗೊಂಡ ಸಭಾಪತಿ ಹೊರಟ್ಟಿ, ಇದೇ ರೀತಿ ಮುಂದುವರಿದರೆ ಸದನವನ್ನು ಅನಿರ್ದಿಷ್ಟ ಅವಧಿಯವರೆಗೆ ಮುಂದೂಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಚಿವ ಜಮೀರ್ ಅಹ್ಮದ್ ಸಂವಿಧಾನದ ಹುದ್ದೆಗೆ ಅಗೌರವ ತೋರಿದ್ದಾರೆ. ಪೀಠಕ್ಕೆ ಧರ್ಮದ ಲೇಪನ ಮಾಡಿದ್ದಾರೆ. ಅವರು ಕೇವಲ ಒಂದು ಸಮುದಾಯದ ಅಥವಾ ಪಕ್ಷಕ್ಕೆ ಸೀಮಿತವಾದ ಸಚಿವರಲ್ಲ. ಈ ರೀತಿಯ ಹೇಳಿಕೆ ಮೂಲಕ ಅವರು ಘೋರ ಅಪರಾಧ ಮಾಡಿದ್ದಾರೆ. ಕೂಡಲೇ ಸರಕಾರ ಅವರ ರಾಜೀನಾಮೆ ಪಡೆಯಬೇಕು. ಇಲ್ಲವೇ ಸಚಿವರು ಕ್ಷಮೆ ಕೇಳಬೇಕು ಎಂದು ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ರಘುನಾಥ ಮಲ್ಕಾಪುರೆ, ರವಿಕುಮಾರ ಮೊದಲಾದವರು ಒತ್ತಾಯಿಸಿದರು.
ಸಭಾನಾಯಕ ಎನ್.ಎಸ್.ಭೋಸರಾಜು ಅವರು, ಇದು ಈ ಪೀಠಕ್ಕೆ ಸಂಬಂಧಿಸಿದ ವಿಷಯವಲ್ಲ. ಅವರು ಅಗೌರವ ತೋರಿಸಿಲ್ಲ. ಇದಲ್ಲದೆ ಸಚಿವರು ಸಹ ತಮ್ಮ ಉತ್ತರದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಹೇಳಿದರು. ಸಭಾನಾಯಕರು, ಸಚಿವರ ಉತ್ತರ ಹಾಗೂ ಸಭಾಪತಿಗಳ ಮನವಿಗೆ ಸ್ಪಂದಿಸದ ಬಿಜೆಪಿ ಸದಸ್ಯರು ಪ್ರತಿಭಟನೆ ಕೈಬಿಡಲಿಲ್ಲ. ಇದರ ಮಧ್ಯೆ ಸಭಾಪತಿಗಳು ಪ್ರಶ್ನೋತ್ತರ ಕಲಾಪ ಮುಂದುವರಿಸಿದಾಗ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.
ಬಿಜೆಪಿ ಸದಸ್ಯರ ಅನುಪಸ್ಥಿತಿಯಲ್ಲಿ ಎರಡು ಮಸೂದೆ ಅಂಗೀಕಾರಬಿಜೆಪಿ ಸದಸ್ಯರ ಅನುಪಸ್ಥಿತಿಯಲ್ಲಿ ವಿಧಾನಪರಿಷತ್‌ನಲ್ಲಿ ಎರಡು ಮಸೂದೆಗಳಿಗೆ ಯಾವುದೇ ಚರ್ಚೆ-ತಿದ್ದುಪಡಿ, ಸಲಹೆ ಇಲ್ಲದೆ ಅಂಗೀಕಾರ ನೀಡಲಾಯಿತು. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ)ಮಸೂದೆ ಹಾಗೂ ಕರಾವಳಿ ಅಭಿವೃದ್ಧಿ ಮಂಡಳಿ ಮಸೂದೆಗಳಿಗೆ ಒಪ್ಪಿಗೆ ದೊರೆಯಿತು. ಬರ ನಿರ್ವಹಣೆಯಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ, ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದ ಹಿನ್ನೆಲೆಯಲ್ಲಿ ಪ್ರಮುಖ ವಿಪಕ್ಷ ಸದಸ್ಯರ ಗೈರು ಹಾಜರಿಯಲ್ಲಿ ಯೋಜನೆ ಮತ್ತು ಸಾಂಖ್ಯೀಕ ಸಚಿವ ಡಿ. ಸುಧಾಕರ ಅವರು ಕರಾವಳಿ ಅಭಿವೃದ್ಧಿ ಮಂಡಳಿ ಮಸೂದೆ ಮಂಡಿಸಿ, ಕರಾವಳಿ ಪ್ರದೇಶದ ಸರ್ವತೋಮುಖ ಅಭಿವೃದ್ಧಿಯಿಂದಾಗಿ ಪ್ರಾಧಿಕಾರ ಎಂಬ ಬದಲಾಗಿ ಪ್ರದೇಶಾಭಿವೃದ್ಧಿ ಮಂಡಳಿ ಎಂದು ಬದಲಾಯಿಸಲಾಗಿದ್ದು, ಮಸೂದೆಗೆ ಅಂಗೀಕಾರ ನೀಡಬೇಕೆಂದು ಮನವಿ ಮಾಡಿದರು. ಮಸೂದೆ ಮಂಡಿಸಿದ ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ ಖರ್ಗೆ ಮಸೂದೆ ಅಂಗೀಕಾರಕ್ಕೆ ಮನವಿ ಮಾಡಿದರು. ಎರಡು ಮಸೂದೆಗಳಿಗೆ ಧ್ವನಿ ಮತದ ಮೂಲಕ ಅಂಗೀಕಾರ ನೀಡಲಾಯಿತು.