Advertisement
ಉಡುಪಿ ಜಿಲ್ಲೆಯ ಶಿರಿಯಾರ ಗ್ರಾಮದ ಹಿರಿಯ ಬಡಗು ತಿಟ್ಟಿನ ಯಕ್ಷಗಾನ ಕಲಾವಿದ ರಾಮಚಂದ್ರ ಶಾನುಭೋಗ್ ಅವರು 86ನೇ ವಯಸ್ಸಿನಲ್ಲಿ ಫೆ.5 ರಂದು ನಿಧನ ಹೊಂದಿದ್ದಾರೆ. ಯಕ್ಷರಂಗದ ಜನಪ್ರಿಯ ಬಯಲಾಟ ಮೇಳಗಳಾದ ಮಂದಾರ್ತಿ, ಮಾರಣಕಟ್ಟೆ, ಅಮೃತೇಶ್ವರಿ, ಪೆರ್ಡೂರು, ಹಾಲಾಡಿ, ಗುಂಡುಬಾಳ, ಕಮಲಶಿಲೆ ಮೇಳ ಸೇರಿದಂತೆ ಡೇರೆ ಮೇಳವಾದ ಇಡಗುಂಜಿ ಮೇಳದಲ್ಲೂ ಸುದೀರ್ಘ ಕಲಾಸೇವೆ ಗೈದವರು ಶಾನುಭೋಗರು.
Related Articles
Advertisement
ದಶಕಗಳ ಹಿಂದೆ ಸಣ್ಣ ಪಾತ್ರಗಳ ಮೂಲಕ ಮಂದಾರ್ತಿ ಮೇಳದಲ್ಲಿ ಕಲಾ ಜೀವನ ಆರಂಭಿಸಿದ ಶಾನುಭೋಗರು ದಿಗ್ಗಜ ಕಲಾವಿದರಾದ ಹಾರಾಡಿ ರಾಮಗಾಣಿಗರು, ಕುಷ್ಠ ಗಾಣಿಗರು, ನಾರಾಯಣ ಗಾಣಿಗರು,ಕುಂಜಾಲು ಶೇಷಗಿರಿ ಕಿಣಿ, ಜಾನುವಾರುಕಟ್ಟೆ ಗೋಪಾಲಕೃಷ್ಣ ಕಾಮತ್,ಶಿರಿಯಾರ ಮಂಜು ನಾಯಕ, ಕೆರೆಮನೆ ಮಹಾಬಲ ಹೆಗಡೆ, ಶಂಭು ಹೆಗಡೆ,ಮೂರೂರು ದೇವರು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಕುಂಜಾಲು ರಾಮಕೃಷ್ಣ ಮೊದಲಾದ ದಿಗ್ಗಜ ಕಲಾವಿದರೊಂದಿದೆ ಪಾತ್ರಗಳನ್ನು ನಿರ್ವಹಿಸಿ ಬಯಲಾಟ ಮತ್ತು ಡೇರೆ ಮೇಳಗಳಲ್ಲಿ ತನ್ನನ್ನು ತಾನು ಕಾಣಿಸಿಕೊಂಡು ಚಿರಪರಿಚಿತ ಕಲಾವಿದರಾಗಿದ್ದರು.
ಭೀಷ್ಮ ವಿಜಯ ಪ್ರಸಂಗದಲ್ಲಿ ಮೊದಲು ಪ್ರತಾಪಸೇನನ ಪಾತ್ರ ಮಾಡಿ ನಂತರ ಪರಶುರಾಮನ ಪಾತ್ರ ಮಾಡುತ್ತಿದ್ದರು. ಕೆರೆಮನೆ ಮಹಾಬಲ ಹೆಗಡೆ ಅವರೊಂದಿಗೆ ಭೀಷ್ಮನ ಇದಿರಾಗಿ ಪರಶುರಾಮನಾಗಿ ಸಮರ್ಥ ವಾದ ಮಂಡನೆ ಮಾಡಿ ಹಲವು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ವಿಶೇಷವಾಗಿ ಮಹಾಬಲ ಹೆಗಡೆ ಅವರು ಇವರನ್ನೇ ಇದಿರು ಪಾತ್ರಗಳಿಗೆ ಬಯಸುತ್ತಿದ್ದುದು ಇವರ ಸಾಮರ್ಥ್ಯಕ್ಕೆ ಉದಾಹರಣೆ. 12 ವರ್ಷಗಳ ಕಾಲ ಇಡಗುಂಜಿ ಮೇಳದಲ್ಲಿ ಹಲವು ಪಾತ್ರಗಳಿಗೆ ಜೀವ ತುಂಬಿದ್ದರು.
ತಮ್ಮಿಂದ ಕಿರಿಯ ಕಲಾವಿದರಿಗೆ ಅರ್ಥಗಾರಿಗೆಯನ್ನು ಹೇಳಿಕೊಟ್ಟು ಗುರು ಎನಿಸಿಯೂ ಸೈ ಎನಿಸಿಕೊಂಡವರು. ತಮ್ಮ ಪರಿಸರದ ಬಾಲಕರನ್ನು ಯಕ್ಷಗಾನ ರಂಗದ ಪರಿಚಯ ಮಾಡಿಸಿಕೊಟ್ಟವರು ಶಾನುಭೋಗರು. ಅನಿವಾರ್ಯವಾದಲ್ಲಿ ಸಖಿ ಸ್ತ್ರೀ ವೇಷಗಳನ್ನೂ ನಿರ್ವಹಿಸಿದ್ದರು. ಹಾಸ್ಯ ದಿಗ್ಗಜ ಕುಂಜಾಲು ರಾಮಕೃಷ್ಣ ಅವರ ಅನುಪಸ್ಥಿತಿಯಲ್ಲಿ ಹಾಸ್ಯ ಪಾತ್ರಗಳನ್ನೂ ನಿರ್ವಹಿಸಿ ಸೈ ಎನಿಸಿಕೊಂಡವರು.
ಯಕ್ಷಗಾನ ರಂಗದ ಮೊದಲ ರಾಷ್ಟ್ರ ಪ್ರಶಸ್ತಿ ವಿಜೇತ ಹಾರಾಡಿ ರಾಮಗಾಣಿಗ ಅವರೊಂದಿಗೆ ಹಲವು ಪಾತ್ರಗಳನ್ನು ನಿರ್ವಹಿಸಿದ ಹಿರಿಮೆ ಇವರದ್ದು.
ಸುಮಾರು ಐದೂವರೆ ದಶಕಗಳ ಕಾಲ ಯಕ್ಷರಂಗದಲ್ಲಿ ದಿಗ್ಗಜ ಕಲಾವಿದರೊಂದಿಗೆ ಒಡನಾಡಿಯಾಗಿ ಕಲಾಸೇವೆಗೈದ ಇವರು ಯಕ್ಷಗಾನ ಕ್ಷೇತ್ರದಲ್ಲಿ ತಮ್ಮದೇ ಆದ ವೈಶಿಷ್ಟ್ಯ ಪೂರ್ಣ ಪಾತ್ರಗಳಿಂದ ತನ್ನದೇ ಆದ ಛಾಪು ಮೂಡಿಸಿ ನೂರಾರು ಸನ್ಮಾನಗಳಿಗೆ ಭಾಜನರಾದವರು. ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.