Advertisement

ಶಿಸ್ತುಬದ್ಧ ರಂಗಾಭಿವ್ಯಕ್ತಿ ಜಾಂಬವ

06:42 PM Aug 01, 2019 | mahesh |

ಶರದಋತು ಪೂರ್ಣಿಮೆಯ… ಪದ್ಯದ ಬೇಡಿಕೆಯ ಸ್ಥಾಯಿಭಾವದ ಅಭಿನಯದಲ್ಲಿ ಸ್ವಲ್ಪ ಪುನರಾವರ್ತನೆಯ ಭಾಗ ಅತಿಯಾದರೂ ವಾಚಿಕವನ್ನು ಗೌಣವಾಗಿಸಿ ಸನ್ನಿವೇಶದ ಆಶಯವನ್ನು ಸರಿತೂಗಿಸಿದ್ದು ನಿಲ್ಕೋಡುರವರ ರಂಗ ಜಾಣತನವನ್ನು ತೋರಿಸಿತು.

Advertisement

ರಂಗಸ್ಥಳ ಸಾಂಸ್ಕೃತಿಕ ಸೇವಾ ಮತ್ತು ಸಂಶೋಧನಾ ಟ್ರಸ್ಟ್‌ ಸಂಸ್ಥೆಯ ಸುಂದರ ಶೆಟ್ಟಿ ಸಂಸ್ಮರಣೆ ಮತ್ತು ಹಿರಿಯ ಕಲಾವಿದರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ಅಂಗವಾಗಿ ಜು.28ರಂದು ಉಡುಪಿ ಪುರಭವನದಲ್ಲಿ ಸಾಲಿಗ್ರಾಮ ಮೇಳದವರಿಂದ ಪ್ರದರ್ಶನಗೊಂಡ ಜಾಂಬವತಿ ಕಲ್ಯಾಣ ಪ್ರಸಂಗವು ಒಂದು ಕಾಲದಲ್ಲಿ ನಡುತಿಟ್ಟು ಯಕ್ಷಗಾನ ರಂಗ ಕಂಡ ಶತಮಾನದ ಇತಿಹಾಸದ ಶ್ರೇಷ್ಠ ಕಲಾವಿದ ಹಾರಾಡಿ ರಾಮನವರಾದಿಯಾಗಿ ಅತಿರಥ ಮಹಾರಥ ಕಲಾವಿದರಿಂದ ಅಭಿನಯಿಸಲ್ಪಟ್ಟು ಮೆರೆದ ಅಪೂರ್ವ ಪ್ರಸಂಗವಾಗಿದ್ದು , ಒಂದಷ್ಟು ಶಿಸ್ತುಬದ್ಧ ರಂಗಾಭಿವ್ಯಕ್ತಿಯಾಗಿ ಮೂಡಿ ಬಂದಿತು.

ಸತ್ರಾಜಿತ ರಾಜ ತಪಸಿನ ಮೂಲಕ ಪಡೆದ ಶ್ಯಮಂತಕ ಮಣಿಯು ಕಾಣೆಯಾದಾಗ ಶ್ರೀಕೃಷ್ಣನು ಸ್ವಯಂ ಸತ್ರಾಜಿತನ ಅನುಜ ಪ್ರಸೇನನನ್ನು ಕೊಂದು ಮಣಿಯನ್ನುಅಪಹರಿಸಿದ ಎಂಬ ಅಪವಾದಕ್ಕೆ ಸಿಲುಕಿದಾಗ ತನ್ನ ನಿರಪರಾಧಿತನವನ್ನು ಲೋಕ ಮುಖಕ್ಕೆ ಸಾಬೀತು ಪಡಿಸಲೋಸುಗ ಮಣಿ ಹಾಗೂ ಪ್ರಸೇನನನ್ನು ಹುಡುಕಿಕೊಂಡು ಹೋಗಿ ಮಣಿಯನ್ನು ಗಮ್ಯ ಸ್ಥಾನವನ್ನು ಸೇರಿಸುವ ಜೊತೆಗೆ ತ್ರೇತಾಯುಗದ ಜಾಂಬವನಿಗೆ ದ್ವಾಪರಯುಗದಲ್ಲಿ ರಾಮ ದರ್ಶನದ ಭಾಗ್ಯವನ್ನು ಕರುಣಿಸಬೇಕು ಎನ್ನುವ ಆಶಯ ಪ್ರಧಾನವಾಗಿ ಕೊನೆಯಲ್ಲಿ ಜಾಂಬವನ ಮಗಳು ಜಾಂಬವತಿಯನ್ನು ವರಿಸುವ ಕಥಾಭಾಗವೇ ಜಾಂಬವತಿ ಕಲ್ಯಾಣ.

ಬಲರಾಮ (ತುಂಬ್ರಿ ಭಾಸ್ಕರ ) ಪ್ರವೇಶದಿಂದ ಆರಂಭಗೊಂಡ ಕಥಾನಕವು ಬಲರಾಮ ಹಾಗೂ ನಾರದರ (ಕೆಕ್ಕಾರು ಆನಂದ ಭಟ್‌) ಸಂವಾದದಲ್ಲಿ ಉಭಯ ಪಾತ್ರಗಳ ಮನೋಸ್ಥಿತಿಯನ್ನು ತಮ್ಮ ವಾಚಿಕದಲ್ಲಿಮನಮುಟ್ಟುವಂತೆ ಶ್ರುತಪಡಿಸಿ ಪ್ರೇಕ್ಷಕರ ಸ್ಪಂದನೆ ಪಡೆದರು.

ಕೃಷ್ಣನಾಗಿ ನಿಲ್ಕೋಡು ಶಂಕರ ಹೆಗಡೆಯವರ ನಿರ್ವಹಣೆ ಉತ್ತಮವಾಗಿತ್ತು. ಸ್ತ್ರೀ ವೇಷಧಾರಿಯಾಗಿ ರಂಗದಲ್ಲಿ ರಂಜಿಸಿದಷ್ಟೇ ಪರಿಣಾಮಕಾರಿಯಾಗಿ ಕಟ್ಟುವೇಶದಲ್ಲೂ (ಪುರುಷ ವೇಷ) ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದು ವಿಶೇಷ .ಇದಕ್ಕೆ ಅವರ ಶ್ರುತಿ ಬದ್ಧ ಮಾತು ಹಾಗೂ ಪುರುಷ ವೇಷಕ್ಕೂ ಒಪ್ಪುವ ಸ್ವರ ಸಾಮರ್ಥ್ಯವೇ ಕಾರಣ. ಅಣ್ಣ ನೀನು ನನ್ನೆಲ್ಲ ಕೃತ್ಯದಲ್ಲೂ ನನ್ನನ್ನು ಬೆಂಬಲಿಸಿದವ ಹಾಗಾಗಿ ನಿನ್ನಲ್ಲಿ ನಾನು ಸುಳ್ಳು ಹೇಳಲಾರೆ ಅಂತ ಹೇಳುವಲ್ಲಿ ಕೃಷ್ಣ ಬಲರಾಮರೀರ್ವರ ಅಭಿನಯ ಮನೋಜ್ಞವಾಗಿತ್ತು. ಶರದಋತು ಪೂರ್ಣಿಮೆಯ… ಪದ್ಯದ ಬೇಡಿಕೆಯ ಸ್ಥಾಯಿಭಾವದ ಅಭಿನಯದಲ್ಲಿ ಸ್ವಲ್ಪ ಪುನರಾವರ್ತನೆಯ ಭಾಗ ಅತಿಯಾದರೂ ವಾಚಿಕವನ್ನು ಗೌಣವಾಗಿಸಿ ಸನ್ನಿವೇಶದ ಆಶಯವನ್ನು ಸರಿತೂಗಿಸಿದ್ದು ನಿಲ್ಕೋಡುರವರ ರಂಗ ಜಾಣತನವನ್ನು ತೋರಿಸಿತು.

Advertisement

ರಂಗದ ರಾಜ ಎಂದೇ ಖ್ಯಾತಿ ಗಳಿಸಿದ ಬಲ್ಕೂರು ಕೃಷ್ಣ ಯಾಜಿಯವರು ತನ್ನ ಗಟ್ಟಿ ಅಭಿನಯ, ಲೆಕ್ಕಾಚಾರದ ಕುಣಿತ ಹಾಗೂ ವಾಚಿಕದಿಂದ ಜಾಂಬವನ ಪಾತ್ರವನ್ನು ಸಮರ್ಪಕವಾಗಿ ಕಟ್ಟಿಕೊಟ್ಟಿ¨ªಾರೆ ಆದರೇ ಆರೋ ಎನ್ನಯ ಗುಹೆ… ಅನ್ನುವ ಪದವನ್ನು ಬಳಸಿಕೊಳ್ಳುವ ವೇಗದಲ್ಲಿ ಕೊಂಚ ತ್ವರಿತಗತಿಯನ್ನು ಹೊಂದಿದ್ದರೆ ಆ ಸನ್ನಿವೇಶವು ಇನ್ನೂ ಪರಿಣಾಮಕಾರಿಯಾಗುವಲ್ಲಿ ಅನೂಕೂಲವಾಗುತ್ತಿತ್ತು .

ಯುವ ಪ್ರತಿಭೆ ಸೌರಭ ಕೊಕ್ಕರ್ಣೇಯವರ ಜಾಂಬವತಿಯು ತಂದೆಯಾಗಿಹ…ಪದಕ್ಕೆ ಒಂದಷ್ಟು ಅನಗತ್ಯವಾಗಿ ಕುಣಿದುದನ್ನು ಹೊರತುಪಡಿಸಿದರೆ ಭವಿಷ್ಯವಿರುವ ಕಲಾವಿದ ಎನ್ನುವುದರಲ್ಲಿ ಎರಡು ಮಾತಿಲ್ಲ.

ಭಾಗವತರಾಗಿ ಚಂದ್ರಕಾಂತ ಮೂಡುಬೆಳ್ಳೆ ಮದ್ದಳೆಯಲ್ಲಿ ಎನ್‌. ಜಿ. ಹೆಗಡೆ ಹಾಗೂ ಚೆಂಡೆಯಲ್ಲಿ ಕೋಟ ಶಿವಾನಂದರ ಕೂಟದ ಹಿಮ್ಮೇಳವು ಒಂದು ಒಳ್ಳೆಯ ರಂಗ ಪ್ರಸಂಗ ಪ್ರಸ್ತುತಿಗೆ ಕಾರಣವಾಯಿತು.

ಕಾರ್ಯಕ್ರಮದಲ್ಲಿ ಯಕ್ಷಗಾನ ರಂಗದ ಹಿರಿಯ ಕಲಾವಿದರಾದ ಬಡಗಿನ ಬಣ್ಣದ ವೇಷಧಾರಿ ಎಲ್ಲಂಪಳ್ಳಿ ಜಗನ್ನಾಥ ಆಚಾರ್ಯ ಹಾಗೂ ತೆಂಕಿನ ಸ್ತ್ರೀ ವೇಷಧಾರಿಯಾದ ಗೋಣಿಬೀಡು ಸಂಜಯ ಕುರ್ಮಾ ಇವರನ್ನು ಸುಂದರ ಶೆಟ್ಟಿ ಸಂಸ್ಮರಣಾ ಪ್ರಶಸ್ತಿ ಪ್ರದಾನಮಾಡುವ ಮೂಲಕ ರಂಗಸ್ಥಳ ಸಂಸ್ಥೆಯು ಅರ್ಹರನ್ನು ಗುರುತಿಸಿದ ಗೌರವಕ್ಕೆ ಪಾತ್ರವಾಯಿತು.

ಸುರೇಂದ್ರ ಪಣಿಯೂರು

Advertisement

Udayavani is now on Telegram. Click here to join our channel and stay updated with the latest news.

Next