ಸೌದಿಅರೇಬಿಯಾ: ಇಸ್ತಾಂಬುಲ್ ನಲ್ಲಿ ಸೌದಿ ಅರೇಬಿಯಾದ ರಾಯಭಾರಿ ಕಚೇರಿಯಲ್ಲಿ ಪತ್ರಕರ್ತ ಜಮಾಲ್ ಕಶೋಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಿಗೆ ಸೌದಿ ಅರೇಬಿಯಾ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿದೆ ಎಂದು ರಾಯಟರ್ಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಪತ್ರಕರ್ತ ಕಶೋಗಿ ಅಮೆರಿಕ ನಿವಾಸಿಯಾಗಿದ್ದು, ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಆಡಳಿತವನ್ನು ಕಟುವಾಗಿ ಟೀಕಿಸಿ ಬರೆಯುತ್ತಿದ್ದರು. ಪತ್ರಕರ್ತ ಕಶೋಗಿ ಹತ್ಯೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆಯಾಗಿತ್ತು. ಅಲ್ಲದೇ ಅಮೆರಿಕದ ಸಿಐಎ ಹಾಗೂ ಹಲವು ವಿದೇಶಗಳು ಕಶೋಗಿ ಹತ್ಯೆಯ ಹಿಂದೆ ಯುವರಾಜನ ಕೈವಾಡ ಇದೆ ಎಂದು ಆರೋಪಿಸಿದ್ದವು. ಆದರೆ ಸೌದಿ ಅರೇಬಿಯಾ ಅದನ್ನು ನಿರಾಕರಿಸಿತ್ತು.
ರಾಯಭಾರ ಕಚೇರಿಯಲ್ಲೇ ಹತ್ಯೆಗೈದು ದೇಹ ಸಿಗದಂತೆ ಮಾಡಿದ್ರು!
ಇಸ್ತಾಂಬುಲ್ ನಲ್ಲಿನ ಸೌದಿ ರಾಯಭಾರ ಕಚೇರಿಯಲ್ಲಿ ಕಶೋಗಿ ಅವರನ್ನು 2018ರ ಅಕ್ಟೋಬರ್ 2ರಂದು ಕೊನೆಯದಾಗಿ ಕಾಣಿಸಿಕೊಂಡಿದ್ದರು. ಕಶೋಗಿ ತನ್ನ ಮೊದಲ ಪತ್ನಿಗೆ ವಿಚ್ಚೇದನ ನೀಡಿದ್ದು, ಅದರ ಪ್ರಮಾಣ ಪತ್ರದ ದಾಖಲೆ ಪಡೆಯಲು ಸೌದಿ ರಾಯಭಾರ ಕಚೇರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ರಾಯಭಾರ ಕಚೇರಿಯೊಳಗೆ 15 ಮಂದಿ ತಂಡ ಕಶೋಗಿಯನ್ನು ಚಿತ್ರಹಿಂಸೆ ನೀಡಿ ಹತ್ಯೆಗೈದಿದ್ದರು. ರಾಜಕುಮಾರನ ವಿರುದ್ಧ ಬರೆಯುತ್ತಿದ್ದುದಕ್ಕೆ ಅವರ ಬೆರಳುಗಳನ್ನು ಕತ್ತರಿಸಿ, ಶಿರಚ್ಛೇದನ ಮಾಡಿದ್ದರು. ನಂತರ ದೇಹವನ್ನು ತುಂಡು, ತುಂಡಾಗಿ ಕತ್ತರಿಸಿ ಅದನ್ನು ಬಟ್ಟೆಯಲ್ಲಿ ಸುತ್ತಿ ಆ್ಯಸಿಡ್ ಹಾಕಿ ಕರಗಿಸಿಬಿಡುವ ಮೂಲಕ ದೇಹ ಸಿಗದಂತೆ ಮಾಡಿದ್ದರು!
ಸೌದಿ ಮೂಲದ ಪತ್ರಕರ್ತ ಕಶೋಗಿ ಟರ್ಕಿ ಮೂಲದ ಹತೀಸ್ ಸೆಂಗಿಝ್ ಎಂಬಾಕೆಯನ್ನು ವಿವಾಹವಾಗುವ ನಿಟ್ಟಿನಲ್ಲಿ ಮೊದಲ ಪತ್ನಿಗೆ ವಿಚ್ಚೇದನ ನೀಡಿದ್ದು, ಅದರ ದಾಖಲೆ ಪಡೆಯಲು ಇಸ್ತಾಂಬುಲ್ ನಲ್ಲಿರುವ ಸೌದಿ ರಾಯಭಾರ ಕಚೇರಿಗೆ ಭೇಟಿ ನೀಡಿದ್ದರು. ಈ ವೇಳೆಯಲ್ಲೇ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಟರ್ಕಿಯ ಅನ್ಡೋಲ್ ದೈನಿಕ ವರದಿ ಮಾಡಿತ್ತು.