Advertisement

ಸಾವಿರಾರು ಜಾನುವಾರು ಬೀದಿಪಾಲು

01:45 PM Aug 24, 2019 | Naveen |

ಜಮಖಂಡಿ: ಮಹಾರಾಷ್ಟ್ರದಲ್ಲಿ ಜು.27ರಿಂದ ಆ.18ರ ವರೆಗೆ ಸತತವಾಗಿ ಧಾರಾಕಾರ ಸುರಿದ ಮಳೆಯಿಂದ ತಾಲೂಕಿನ ಕೃಷ್ಣಾನದಿ ನಿರೀಕ್ಷೆಗೂ ಮೀರಿ ಹರಿದ ಪರಿಣಾಮ ಜನ-ಜಾನುವಾರುಗಳ ಸ್ಥಿತಿ ಚಿಂತಾಜನಕವಾಗಿದೆ. ಈಗ ಸಾವಿರಾರು ಜಾನುವಾರುಗಳಿಗೆ ಮೇವು ಕೊರತೆ ಕಂಡು ಬಂದಿದೆ.

Advertisement

ಕೃಷ್ಣಾನದಿ ಪ್ರವಾಹದಿಂದ ತಾಲೂಕಿನ ಕಂಕಣವಾಡಿ, ಮುತ್ತೂರ, ಮೈಗೂರ ಸಹಿತ 27 ಗ್ರಾಮಗಳ ರೈತರು ಮನೆ ಕಳೆದುಕೊಂಡಿದ್ದು, ಜಾನುವಾರುಗಳನ್ನು ರಸ್ತೆ ಬದಿಯಲ್ಲಿ ಸಾಕುತ್ತಿದ್ದಾರೆ. ಕಳೆದ ಒಂದು ವಾರದಿಂದ ಪ್ರವಾಹ ಇಳಿಮುಖವಾಗಿದ್ದರೂ ವಾಸಿಸಲು ಯೋಗ್ಯ ಸ್ಥಳ ಲಭಿಸದ ಕಾರಣ ಆಶ್ರಯ ಕೇಂದ್ರ, ರಸ್ತೆ ಬದಿಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ನಿರಾಶ್ರಿತರಿಗೆ ವಿದ್ಯಾರ್ಥಿಗಳ ವಿದ್ಯಾಭ್ಯಾಸ, ಜಾನುವಾರುಗಳ ರಕ್ಷಣೆ ದೊಡ್ಡ ಸವಾಲಾಗಿದೆ.

ತಾಲೂಕಿನ 42 ಕೇಂದ್ರಗಳಲ್ಲಿ 38,305 ಜಾನುವಾರಗಳಿದ್ದು, ಪ್ರತಿನಿತ್ಯ ಅಂದಾಜು 6 ಟನ್‌ ಮೇವು ಅವಶ್ಯಕತೆಯಿದೆ. ತಾಲೂಕಾಡಳಿತ ಶಕ್ತಿ ಮೀರಿ ನಿರಾಶ್ರಿತರ ರೈತರ ಜಾನುವಾರುಗಳಿಗೆ ಒಣ-ಹಸಿ ಮೇವು ವಿತರಿಸುತ್ತಿದೆ. ತಾಲೂಕಾಡಳಿತ ಆ.15ರವರೆಗೆ 23 ಲಕ್ಷ ರೂ.ಗಳಲ್ಲಿ ಜಾನುವಾರುಗಳಿಗೆ 6.02 ಟನ್‌ ಒಣಮೇವು ಮತ್ತು 16.67 ಟನ್‌ ಹಸಿಮೇವು ವಿತರಣೆ ಮಾಡಿದ್ದು, ಪರಿಹಾರ ಕೇಂದ್ರದಲ್ಲಿ 15 ಟನ್‌ ಹಸಿಮೇವು ಸಂಗ್ರಹವಿದೆ. ತಾಲೂಕಿನ ದಾನಿಗಳು ನಿರಾಶ್ರಿತರಿಗೆ ಜಾನುವಾರುಗಳಿಗೆ 5.7 ಒಣಮೇವು ಮತ್ತು 3.8 ಟನ್‌ ಹಸಿಮೇವನ್ನು ತಾಲೂಡಳಿತ ನಿರ್ಮಿಸಿರುವ ಪರಿಹಾರ ನಿಧಿ ನೀಡುವ ಮೂಲಕ ಮಾನವೀಯತೆ ಮೆರದಿದ್ದಾರೆ.

ತಾಲೂಕಿನಲ್ಲಿ ಕೃಷ್ಣಾನದಿ ಪ್ರವಾಹಕ್ಕೆ ಶಿರಗುಪ್ಪಿ ಗ್ರಾಮದ 3,750 ಜಾನುವಾರು, ಮೈಗೂರ-2,344, ಕಂಕಣವಾಡಿ-2,865, ಮುತ್ತೂರ-1,855, ಕಡಕೋಳ-2,901, ಸನಾಳ-738, ಆಲಗೂರ-2,154, ಶೂರಪಾಲಿ-3,000, ತುಬಚಿ-1,659, ಜಂಬಗಿ ಕೆ.ಡಿ.-755, ಜಂಬಗಿ ಬಿ.ಕೆ.-4,961, ಟಕ್ಕೋಡ-1,915, ಟಕ್ಕಳಕಿ-926, ಹಿರೇಪಡಸಲಗಿ-3,508, ನಾಗನೂರ-510, ಚಿಕ್ಕಪಡಸಲಗಿ 1,214, ಕವಟಗಿ-832, ಕುಂಚನೂರ-740, ಚಿನಗುಂಡಿ-140, ಬಿದರಿ-170, ಜನವಾಡ-250, ಕುಂಬಾರಹಳ್ಳ-535, ಅಡಿಹುಡಿ-38, ಜಮಖಂಡಿ ಗ್ರಾಮೀಣದಲ್ಲಿ 542 ಸಹಿತ 38,305 ಜಾನುವಾರುಗಳನ್ನು 42 ತಾತ್ಕಾಲಿಕ ಶೆಡ್‌ಗಳಲ್ಲಿ ಆಶ್ರಯ ಪಡೆದಿವೆ.

ತಾಲೂಕಾಡಳಿತ ಆಶ್ರಯ ಪಡೆದಿರುವ ಕೇಂದ್ರಗಳಲ್ಲಿ ಎಲ್ಲ ಜಾನುವಾರುಗಳಿಗೆ ಸರಿಯಾದ ರೀತಿಯಲ್ಲಿ ಒಣ ಮೇವು, ಹಸಿಮೇವು ವಿತರಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಎಲ್ಲ ಕಡೆ ಪ್ರವಾಹ ಸ್ಥಿತಿ ತಲೆದೂರಿರುವ ಹಿನ್ನೆಲೆಯಲ್ಲಿ ಸರಿಯಾದ ಸಮಯಕ್ಕೆ ಮೇವು ಲಭಿಸುತ್ತಿಲ್ಲ. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಮೇವು ಕೊರತೆ ನೀಗಿಸಲಾಗುತ್ತಿದೆ. ನಿರಾಶ್ರಿತರ ವ್ಯವಸ್ಥೆಗಾಗಿ 1 ಕೋಟಿ ಅನುದಾನ ಬಂದಿದೆ. ಜನರಿಗೆ, ಜಾನುವಾರುಗಳಿಗೆ ತೊಂದರೆ ಆಗದ ರೀತಿಯಲ್ಲಿ ತಾಲೂಕಾಧಿಕಾರಿಗಳು ಎಚ್ಚರಿಕೆ ವಹಿಸಿ ಕೆಲಸ ಮಾಡುತ್ತಿದ್ದಾರೆ. ಒಂದು ಜಾನುವಾರಕ್ಕೆ ಪ್ರತಿನಿತ್ಯ 15ರಿಂದ 20 ಕೆಜಿ ಮೇವು ವಿತರಣೆ ಮಾಡಲಾಗುತ್ತಿದೆ.
ಪ್ರಶಾಂತ ಚನಗೊಂಡ,
ಜಮಖಂಡಿ ತಹಶೀಲ್ದಾರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next