ಹೊಸದಿಲ್ಲಿ : ದಿಲ್ಲಿಯ ಜಾಮಾ ಮಸೀದಿಯ ಇಮಾಮ್ ಬುಖಾರಿ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದು “ದೇಶದಲ್ಲಿ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ನಿಮ್ಮ ಪಕ್ಷದ ನಿಲುವೇನು? ಎಂಬುದನ್ನು ಸ್ಪಷ್ಟಪಡಿಸಿ” ಎಂದು ಆಗ್ರಹಿಸಿದ್ದಾರೆ.
‘ಕಳೆದ ಏಳು ದಶಕಗಳಲ್ಲೇ ಈಗ ಪ್ರಧಾನಿ ಮೋದಿ ಸರಕಾರದಡಿ ದೇಶದಲ್ಲಿನ ಮುಸ್ಲಿಮರ ಸ್ಥಿತಿ ದಯನೀಯವಾಗಿದೆ’ ಎಂದು ಬುಖಾರಿ ದೂರಿದ್ದಾರೆ.
“ದೇಶದ ವಿವಿಧೆಡೆ ನಡೆದಿರುವ ಹೊಡೆದು ಸಾಯಿಸುವ ಗುಂಪು ಹಿಂಸೆಗೆ 64 ಅಮಾಯಕ ಮುಸ್ಲಿಮರು ಬಲಿಯಾಗಿದ್ದಾರೆ. ನಮ್ಮನ್ನು ಈ ರೀತಿಯಾಗಿ ನಡೆಸಿಕೊಳ್ಳುತ್ತಿರುವ ಸರಕಾರದ ವಿರುದ್ಧ ನಿಮ್ಮ ಧ್ವನಿ ಎಲ್ಲಿದೆ?” ಎಂದು ಇಮಾಮ್ ಬುಖಾರಿ ಅವರು ರಾಹುಲ್ ಗಾಂಧಿಯನ್ನು ತಮ್ಮ ಪತ್ರದಲ್ಲಿ ಪ್ರಶ್ನಿಸಿದ್ದಾರೆ.
“ದೇಶದಲ್ಲಿಂದು ಮುಸ್ಲಿಮ್ ಯುವರಿಕರಿಗೆ ಗಡ್ಡ ಬಿಟ್ಟು ತಲೆಗೆ ಶ್ವೇತ ವಸ್ತ್ರ ತೊಟ್ಟು ರಸ್ತೆಯಲ್ಲಿ ನಡೆದುಕೊಂಡು ಹೋಗುವುದೇ ಕಷ್ಟ ಎಂಬಂತಹ ಸ್ಥಿತಿ ತಲೆದೋರಿದೆ. ಜವಾಬ್ದಾರಿಯುತ ವಿರೋಧ ಪಕ್ಷವಾಗಿರುವ ನೀವು ಸರಕಾರದ ಮೇಲೆ ಈ ಬಗ್ಗೆ ಒತ್ತಡ ಹೇರುವುದನ್ನು ನಾವು ನಿರೀಕ್ಷಿಸುತ್ತೇವೆ” ಎಂದು ಬುಖಾರಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಮುಸ್ಲಿಮರ ಪಕ್ಷ ಎಂದು ರಾಹುಲ್ ಗಾಂಧಿ ಈಚೆಗೆ ಹೇಳಿದುದನ್ನು ಉರ್ದು ದೈನಿಕವೊಂದು ವರದಿ ಮಾಡಿತ್ತು. ಇದನ್ನು ಉಲ್ಲೇಖೀಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು “ಕಾಂಗ್ರೆಸ್ ಪಕ್ಷ ಮುಸ್ಲಿಮ್ ಪುರುಷದ್ದು ಮಾತ್ರವೇ ಅಥವಾ ಮುಸ್ಲಿಮ್ ಮಹಿಳೆಯರ ಪಕ್ಷವೂ ಆಗಿದೆಯೇ’ ಎಂದು ಪ್ರಶ್ನಿಸಿದ್ದರು. ಕಾಂಗ್ರೆಸ್ ಪಕ್ಷ ಮುಸ್ಲಿಮ್ ಮಹಿಳೆಯರ ಪಕ್ಷ ಅಲ್ಲ ಎನ್ನುವುದು ತ್ರಿವಳಿ ತಲಾಕ್ ವಿಷಯದಲ್ಲಿ ಬಹಿರಂಗವಾಗಿದೆ ಎಂದು ಮೋದಿ ಹೇಳಿದ್ದರು.
ಈ ವಿವಾದದ ಹಿನ್ನೆಲೆಯಲ್ಲಿ ಈಗ ಬುಖಾರಿ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.