ಮದುರೈ/ಚೆನ್ನೈ: ಸಂಕ್ರಮಣ (ಪೊಂಗಲ್) ವೇಳೆಯ ಹೋರಿ ಪಳಗಿಸುವ ಅಪಾಯಕಾರಿ ಕ್ರೀಡೆಯಾದ “ಜಲ್ಲಿಕಟ್ಟು’, ಸುಪ್ರೀಂ ಕೋರ್ಟ್‌ನಿಂದ ನಿಷೇಧಕ್ಕೆ ಒಳಗಾದರೂ ರಾಜ್ಯದ ಕೆಲವೆಡೆ ನಡೆದಿದೆ. ಈ ನಡುವೆ, ಜಲ್ಲಿಕಟ್ಟು ಕ್ರೀಡೆಯನ್ನು ಸಕ್ರಮಗೊಳಿಸಲು ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅಧ್ಯಾದೇಶ ಹೊರಡಿಸಬೇಕು ಎಂದು ಡಿಎಂಕೆ ಆಗ್ರಹಿಸಿದ್ದರೆ, ಇಂಥ ಯಾವುದೇ ಅಧ್ಯಾದೇಶ ನಿರ್ಣಯ ಹೊರಬಿದ್ದರೆ ರಾಷ್ಟ್ರಪತಿ ಗಳು ಸಹಿ ಹಾಕಬಾರದು ಎಂದು ಪ್ರಾಣಿದಯಾ ಸಂಘಟನೆಗಳು ಆಗ್ರಹಿಸಿವೆ.
ಆದರೆ, “ಕೇಂದ್ರ ಸರಕಾರ ಈ ಬಗ್ಗೆ ಅಧ್ಯಾದೇಶ ಹೊರಡಿಸುವ ಸಾಧ್ಯತೆ ಇಲ್ಲ’ ಎಂದು ಮೂಲಗಳು ಹೇಳಿವೆ.
ಸುಪ್ರೀಂ ಕೋರ್ಟ್ ಆದೇಶ ವಿರೋಧಿಸಿ ಮದುರೈ ಬಳಿಯ ಕರೈಸಾಲಕುಲಂ ಎಂಬಲ್ಲಿ ಯುವಕರ ಗುಂಪೊಂದು ಸಾಂಕೇತಿಕವಾಗಿ ಜಲ್ಲಿಕಟ್ಟು ಕ್ರೀಡೆಯನ್ನು ಸಣ್ಣ ಪ್ರಮಾಣದಲ್ಲಿ ನಡೆಸಿತು. 5 ಹೋರಿಗಳು ಇದರಲ್ಲಿ ಭಾಗಿಯಾಗಿದ್ದವು. ಈ ವೇಳೆ ಸಂಘಟಕರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು.
ಇನ್ನು ಕೊಯಮತ್ತೂರು ಬಳಿಯ ಎಟ್ಟಿಮಾಡಿ ಎಂಬ ಗ್ರಾಮದಲ್ಲಿ ಇನ್ನೊಂದು ಅಪಾಯಕಾರಿ ಹೋರಿ ಕ್ರೀಡೆಯಾದ ಚಕ್ಕಡಿ ಓಟ ಸ್ಪರ್ಧೆಯನ್ನು ನ್ಯಾಯಾಲಯದ ಆದೇಶ ಮೀರಿ ನಡೆಸಲಾಯಿತು. ಈ ವೇಳೆ, “ಆಚರಣೆ, ಧಾರ್ಮಿಕ ನಂಬಿಕೆಗಳಲ್ಲಿ ಮೂಗು ತೂರಿಸಲು ಸರಕಾರ ಮತ್ತು ಸುಪ್ರೀಂ ಕೋರ್ಟ್ ಯಾರು?’ ಎಂದು ಜನರು ಪ್ರಶ್ನಿಸಿದರು.
ಡಿಎಂಕೆ ಸವಾಲು: ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಜಲ್ಲಿಕಟ್ಟು ಕ್ರೀಡೆಯನ್ನು ಸಕ್ರಮಗೊಳಿಸಿ ಅಧ್ಯಾದೇಶ ಹೊರಡಿಸಬೇಕು. ಇಲ್ಲದಿದ್ದರೆ ಅವರನ್ನು ತಮಿಳರು ಕ್ಷಮಿಸಲ್ಲ ಎಂದು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್ ಆಗ್ರಹಿಸಿದ್ದಾರೆ.
“ಮೋದಿ ಅವರಿಗೆ ನಟರಾದ ಅಮೀರ್ ಖಾನ್, ರಜನೀಕಾಂತ್, ಗೌತಮಿ ಅಂಥವರನ್ನು ಭೇಟಿ ಮಾಡಲು ಸಮಯವಿದೆ. ಇದಕ್ಕೆ ನನ್ನ ಯಾವುದೇ ತಕರಾರಿಲ್ಲ. ಆದರೆ ಜಲ್ಲಿಕಟ್ಟು ವಿಷಯದ ಬಗ್ಗೆ ಅಣ್ಣಾಡಿಎಂಕೆ ಸಂಸದರು ಭೇಟಿಯಾಗಲು ಯತ್ನಿಸಿದಾಗ ಅವಕಾಶ ನಿರಾಕರಿಸಿದ್ದೇಕೆ?’ ಎಂದು ಸ್ಟಾಲಿನ್ ಪ್ರಶ್ನಿಸಿದ್ದಾರೆ.
“ಮುಖ್ಯಮಂತ್ರಿ ಒ. ಪನ್ನೀರಸೆಲ್ವಂ ಅವರೂ ಈ ಬಗ್ಗೆ ಮೋದಿ ಅವರನ್ನು ಒತ್ತಾಯಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.