Advertisement

ಅಪಾಯದಲ್ಲಿ ಜಾಲ್ಸೂರು ಸಿಆರ್‌ಸಿ ಕಾಲನಿ ವಸತಿಗೃಹಗಳು

12:05 PM Sep 01, 2018 | Team Udayavani |

ಜಾಲ್ಸೂರು: ಜಾಲ್ಸೂರಿನಲ್ಲಿರುವ ಕೆಎಫ್ಡಿಸಿ ನೌಕರರ ವಸತಿಗೃಹಗಳು ಬಿದ್ದು ಹೋಗುವ ಹಂತದಲ್ಲಿದ್ದು, ಅಪಾಯವನ್ನು ಆಹ್ವಾನಿಸುತ್ತಲಿದೆ. ಇಲ್ಲಿನ ನಿವಾಸಿಗಳು ಆತಂಕದಲ್ಲಿಯೇ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿವೆ. ಜಾಲ್ಸೂರಿನ ಕುಕ್ಕಂದೂರು ಪ್ರದೇಶದ 2 ಸಿಆರ್‌ಸಿ ಕಾಲನಿಯಲ್ಲಿ ನನೆಗುದಿಗೆ ಬಿದ್ದಿರುವ ಮನೆಗಳು ಇವೆ. ವಸತಿಗೃಹಗಳು ನಿರ್ಮಾಣಗೊಂಡು 40ರಿಂದ 45 ವರ್ಷಗಳೇ ಕಳೆದಿದ್ದರೂ, ದುರಸ್ತಿ ಕಾಣದೆ ಕಟ್ಟಡಗಳು ಸಂಪೂರ್ಣವಾಗಿ ಶಿಥಿಲಗೊಂಡಿವೆ. ಎಲ್ಲ ಮನೆಗಳ ಸ್ಥಿತಿ ಹೆಚ್ಚೇನೂ ಭಿನ್ನವಾಗಿಲ್ಲ. ಕೆಲವು ಮನೆಗಳ ಗೋಡೆಗಳು ಬೀಳುವ ಸ್ಥಿತಿಯಲ್ಲಿವೆ. ಈ ಕಾಲನಿಯಲ್ಲಿ ಒಟ್ಟು ಹತ್ತು ಬ್ಯಾರಕ್‌ಗಳಿವೆ. ಒಂದು ಬ್ಯಾರಕ್‌ ನಲ್ಲಿ ನಾಲ್ಕು ಮನೆಗಳಂತೆ ಇಲ್ಲಿ ಸುಮಾರು 40 ಮನೆಗಳಿವೆ.

Advertisement

ಬೀಳುವ ಹಂತದಲ್ಲಿ ಮನೆಗಳು
1968ರಲ್ಲಿ ನಿರ್ಮಾಣವಾದ ಕೆ.ಎಫ್.ಡಿ.ಸಿ. ಮನೆಗಳು 1971ರಿಂದ ವಾಸ್ತವ್ಯಕ್ಕೆ ತೆರೆದುಕೊಂಡಿದ್ದವು. ಮೇಲ್ಛಾವಣಿಗೆ ಹಾಕಿರುವ ಹಂಚುಗಳು ಬಹುತೇಕ ಒಡೆದು ಬಿದ್ದಿವೆ. ಇದರಿಂದ ಮಳೆ ನೀರು ಗೋಡೆ ಮೇಲೆ ಬಿದ್ದು ಹಾನಿಯಾಗುತ್ತಲಿದೆ. ಸದ್ಯಕ್ಕೆ ಟಾರ್ಪಲು ಹಾಸಿ ಮುಚ್ಚಲಾಗಿದೆ. ರಭಸದಿಂದ ಗಾಳಿ ಬೀಸಿದರೆ ಟಾರ್ಪಲು ಹಾರಿ ಹೋಗುವ ಆತಂಕವೂ ಇದೆ. ಕೈಯಿಂದ ಗಟ್ಟಿಯಾಗಿ ಎಳೆದರೆ ಕಿಟಕಿ ಹಾಗೂ ಬಾಗಿಲುಗಳು ಕೂಡ ಕಿತ್ತು ಬರುವಂತಿವೆ. ಮೇಲ್ಛಾವಣಿಯ ಮರದ ಸಲಕರಣೆಗಳು ಬಲ ಕಳೆದುಕೊಂಡಿದ್ದು, ಯಾವಾಗ ಬೀಳುವುದೆಂದು ಹೇಳಲಾಗದು.

ಮನೆಯೊಳಗೆ ಚರಂಡಿ ನೀರು
ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೆ ನೀರು ಮನೆಯೊಳಗೆ ನುಗ್ಗುತ್ತಿದೆ. ಮೇಲಿಂದ ಕೆಳಗೆ ನೀರು ಹರಿಯಲು ಮಾಡಿಸಿದ ಚರಂಡಿಯಲ್ಲಿ ಏರುಪೇರು ಗಳಿರುವುದರಿಂದ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ಹರಿದು ಬರುತ್ತಿದೆ. ಅಧಿಕಾರಿಗಳಿಗೆ ದೂರು ಕೊಟ್ಟರೂ ಏನೂ ಪ್ರಯೋಜನವಾಗಿಲ್ಲ ಎಂದು ನಿವಾಸಿಗರು ಆರೋಪಿಸಿದ್ದಾರೆ.

ನಿವಾಸಿಗಳು ಭೀತಿಯಿಂದಲೇ ದಿನ ಕಳೆಯುತ್ತಿದ್ದಾರೆ. ನಿದ್ದೆ ಮಾಡಲು ಹೆದರಿಕೆಯಾಗುತ್ತಿದೆ ಎಂದು ಅಲ್ಲಿನವರು ಆತಂಕ ವ್ಯಕ್ತಪಡಿಸುತ್ತಾರೆ. ಬೆಲೆಬಾಳುವ ವಸ್ತು, ಬಟ್ಟೆಗಳನ್ನು ಬ್ಯಾಗು ಹಾಗೂ ಬಾಕ್ಸ್‌ಗಳಲ್ಲಿ ತುಂಬಿಸಿಟ್ಟಿದ್ದಾರೆ. ಅಪಾಯ ಇಲ್ಲಿನವರು ಪೂರ್ವತಯಾರಿ ನಡೆಸಿದ್ದಾರೆ. ನೀರು ಎದುರಾದಾಗ ಮನೆಯಿಂದ ತೆರಳಲು ಸೋರುತ್ತಿರುವುದರಿಂದ ಮಕ್ಕಳು ಜಾರಿ ಬಿದ್ದು ಗಾಯಗೊಂಡಿದ್ದಾರೆ. ಚರಂಡಿ ವ್ಯವಸ್ಥೆಯಿಲ್ಲದೆ ಮಕ್ಕಳನ್ನು ಹೊರಗಡೆ ಆಟವಾಡಲು ಬಿಡಲು ಹೆದರಿಕೆಯಾಗುತ್ತಿದೆ. ಗ್ರಾಮಸಭೆಯಲ್ಲಿ ಹಾಗೂ ಸಂಬಂಧಪಟ್ಟವರಿಗೆ ದೂರು ಸಲ್ಲಿಸಲಾಗಿದೆ. ಶೀಘ್ರವಾಗಿ ಸ್ಪಂದಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಅಲ್ಲಿನ ನಿವಾಸಿಗರು ಎಚ್ಚರಿಸಿದ್ದಾರೆ.

ದುರಸ್ತಿ ಮಾಡಿಕೊಡಿ: ಆಗ್ರಹ 
ಬಹಳ ವರ್ಷಗಳಿಂದಲೂ ದುರಸ್ತಿಗೆ ಬೇಡಿಕೆ ಇಟ್ಟಿದ್ದೇವೆ. ಈವರೆಗೂ ಯಾರೂ ಗಮನಕೊಟ್ಟಿಲ್ಲ. ಆದಷ್ಟು ಬೇಗ ಮನೆಗಳ ದುರಸ್ತಿ ಕಾರ್ಯ ಮಾಡಿಕೊಡಬೇಕು. ಮನೆಯೊಳಗಡೆ ದಿನನಿತ್ಯ ಚರಂಡಿ ನೀರು ಹರಿದು ಬರುತ್ತಿದೆ. ಇದರಿಂದ ವಾಸಿಸಲು ತುಂಬಾ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಇದಕ್ಕೊಂದು ವ್ಯವಸ್ಥೆ ಮಾಡಬೇಕು ಎಂದು ಸಿಆರ್‌ಸಿ ಕಾಲನಿ ನಿವಾಸಿಗಳಾದ ಸೆಲ್ವರಾಜ್‌ ಮತ್ತು ಸತ್ಯಶಾಂತಿ ಆಗ್ರಹಿಸಿದ್ದಾರೆ.

Advertisement

ಯಾವುದೇ ದೂರು ಬಂದಿಲ್ಲ
ಮನೆಗಳ ದುರಸ್ತಿಯ ಕುರಿತು ಯಾವುದೇ ದೂರು ನಮಗೆ ಲಭ್ಯವಾಗಿಲ್ಲ. ಗ್ರಾಮಸಭೆಯಲ್ಲಿ ಪ್ರಸ್ತಾವವಾಗಿದೆ. ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ.
– ಶಿವರಾಮ್‌,
ಸಹಾಯಕ ಅಧಿಕಾರಿ ಅರಣ್ಯ ಅಭಿವೃದ್ಧಿ ಇಲಾಖೆ 

 ಪ್ರತ್ಯೇಕ ಸಮಿತಿ ರಚನೆ
ದುರಸ್ತಿ ಮಾಡಬೇಕಾದ ಮನೆಗಳ ಬಗ್ಗೆ ಅರ್ಜಿ ಹಾಕಿದರೆ ಮಾಡಿಕೊಡಲಾಗುವುದು. ಅದಕ್ಕಾಗಿಯೇ ಪ್ರತ್ಯೇಕ ಕಮಿಟಿ ರಚಿಸಲಾಗಿದೆ. ಹಲವು ಮನೆಗಳ ದುರಸ್ತಿಗೆ ಈಗಾಗಲೇ ತೊಡಗಿದ್ದೇವೆ. ಮಳೆ ನಿಂತ ಕೂಡಲೇ ಮಾಡಿಕೊಡಲಾಗುವುದು.
– ಉಮೇಶ್‌ ಅಚಾರ್‌,
ಚೀಫ್ ಎಂಜಿನಿಯರ್‌, ಅರಣ್ಯ ಅಭಿವೃದ್ಧಿ ಇಲಾಖೆ 

ಶಿವಪ್ರಸಾದ್‌ ಮಣಿಯೂರು

Advertisement

Udayavani is now on Telegram. Click here to join our channel and stay updated with the latest news.

Next