ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕವನ್ನು ಪದೇಪದೆ ಕಾಡುವ ತಮಿಳುನಾಡು, ಇದೀಗ ಕರ್ನಾಟದವರೇ ಆಗಿರುವ ವಿ.ಸೋಮಣ್ಣ ಅವರಿಗೆ ಜಲಶಕ್ತಿ ರಾಜ್ಯ ಖಾತೆ ಸಚಿವ ಸ್ಥಾನ ನೀಡುವುದಕ್ಕೂ ಆಕ್ಷೇಪಿಸಿದೆ.
ತಮಿಳುನಾಡಿನ ಈ ಧೋರಣೆಗೆ ರಾಜ್ಯದ ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ ಆಕ್ಷೇಪ ಸರಿಯಲ್ಲ ಎಂದಿರುವ ಅವರು, ಸೋಮಣ್ಣ ಅವರು ಕೇಂದ್ರ ಸರಕಾರದಲ್ಲಿ ಸಚಿವರಾಗಿದ್ದಾರೆ. ಒಮ್ಮೆ ಸಚಿವರಾದ ಅನಂತರ ಅವರೀಗ ದೇಶದ ಸಚಿವರೇ ಹೊರತು, ಕರ್ನಾಟಕದ ಸಚಿವರಲ್ಲ. ರಾಜ್ಯಕ್ಕಷ್ಟೇ ಅವರು ಸೀಮಿತರಲ್ಲ ಎಂದರು.
ನಮ್ಮ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಮಿಕ ಸಚಿವರಿದ್ದಾಗ ಕಲಬುರಗಿಯಲ್ಲಿ ಇಎಸ್‌ಐ ಆಸ್ಪತ್ರೆ ಕಟ್ಟಿದರು. ಅದರಲ್ಲಿ ತಪ್ಪೇನಿದೆ? ಸೋಮಣ್ಣ ಸೇರಿದಂತೆ ಕರ್ನಾಟಕದಿಂದ ಆಯ್ಕೆಯಾಗಿರುವ ಐವರು ಸಚಿವರಿಂದ ನಮ್ಮ ರಾಜ್ಯಕ್ಕೆ ಒಳ್ಳೆಯದಾಗಲಿ, ರಾಜ್ಯದ ಅಭಿವೃದ್ಧಿಗೆ ಸಹಕಾರ ಸಿಗಲಿ ಎಂದು ನಾವೂ ಬಯಸುತ್ತೇವೆ ಎಂದರು.