ರಮೇಶ್ ಬೇಗಾರ್ ನಿರ್ದೇಶನದ ಎರಡನೇ ಚಿತ್ರ “ಜಲಪಾತ’ದ ಮೊದಲ ಗೀತೆ ಇತ್ತೀಚೆಗೆ ಬಿಡುಗಡೆಯಾಯಿತು. ಹಿರಿಯ ಗಾಯಕ ನಗರ ಶ್ರೀನಿವಾಸ ಉಡುಪ ಈ ಹಾಡನ್ನು ಬಿಡುಗಡೆ ಮಾಡಿ ಶುಭ ಕೋರಿದರು.
ನಿರ್ದೇಶಕ ರಮೇಶ್ ಬೇಗಾರ್ ಸಾಹಿತ್ಯವಿರುವ “ಎದೆಯ ದನಿಯ ಹಾಡು ಕೇಳು…’ ಎಂಬ ಪರಿಸರದ ಕುರಿತಾಗಿ ಮೂಡಿಬಂದಿರುವ ಈ ಗೀತೆಗೆ ಸಾದ್ವಿನಿ ಕೊಪ್ಪ ಸಂಗೀತ ಸಂಯೋಜಿಸಿದ್ದು, ವಿಜಯ್ ಪ್ರಕಾಶ್ ಹಾಡಿಗೆ ಧ್ವನಿಯಾಗಿದ್ದಾರೆ.
ಇದೇ ವೇಳೆ ಹಾಡಿನ ಬಗ್ಗೆ ಮಾತನಾಡಿದ ನಿರ್ದೇಶಕ ರಮೇಶ್ ಬೇಗಾರ್, “”ಜಲಪಾತ’ ನನ್ನ ನಿರ್ದೇಶನದ ಎರಡನೇ ಚಿತ್ರ. ಈ ಸಿನಿಮಾದಲ್ಲಿ ಪರಿಸರ ಸಂರಕ್ಷಣೆಯ ಎಳೆಯೊಂದಿದೆ. ಸಿನಿಮಾದ ಕಥೆಯ ಆಶಯವನ್ನು ತಿಳಿಸುವ ಈ ಗೀತೆಯನ್ನು ಮೊದಲಿಗೆ ಬಿಡುಗಡೆ ಮಾಡಿದ್ದೇವೆ. ಈಗಾಗಲೇ ಪರಿಸರದ ಜಾಗೃತಿಯ ಬಗ್ಗೆ ಹಲವು ಹಾಡುಗಳು ಬಂದಿದೆ. ಆದರೆ ಈ ಹಾಡು ಅವೆಲ್ಲದಕ್ಕಿಂತ ಸ್ವಲ್ಪ ವಿಭಿನ್ನವಾಗಿದೆ. ಮೊದಲ ನುಡಿಯಲ್ಲಿ ಪರಿಸರ ನಮಗೆ ಏನೆಲ್ಲಾ ನೀಡಿದೆ ಎಂದು, ಎರಡನೇ ನುಡಿಯಲ್ಲಿ ನಮ್ಮಿಂದ ಪರಿಸರ ಏನಾಗುತ್ತಿದೆ ಎಂಬುದನ್ನು ಗೀತೆಯಲ್ಲಿ ಹೇಳಲಾಗಿದೆ’ ಎಂದರು. ಸಿನಿಮಾದ ಬಗ್ಗೆ ಮಾತನಾಡಿದ ನಿರ್ಮಾಪಕ ಟಿ. ಸಿ. ರವೀಂದ್ರ ತುಂಬರಮನೆ, “ಹಿರಿಯ ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ನನ್ನ ಗುರುಗಳು. ಪರಿಸರದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಅಂದುಕೊಳ್ಳುತ್ತಿದ್ದಾಗ, ಇಂಥದ್ದೊಂದು ಚಿತ್ರ ನಿರ್ಮಿಸುವ ಯೋಚನೆ ಬಂದಿತು. ಆನಂತರ ಅದಕ್ಕೆ ಸೂಕ್ತವಾದ ಕಥೆ, ಕಲಾವಿದರನ್ನು ಹುಡುಕಿ ಈ ಚಿತ್ರ ಮಾಡಲಾಯಿತು. ಈ ಚಿತ್ರದಲ್ಲಿ ಮಲೆನಾಡಿನ ಸೊಬಗಿದೆ. ಎಲ್ಲರ ಮನಮುಟ್ಟುವಂತ ವಿಷಯಗಳಿವೆ’ ಎಂದರು.
“ಚಿತ್ರದಲ್ಲಿ ಮೂರು ಹಾಡುಗಳು ಹಾಗೂ ಕೆಲವು ಬಿಟ್ಸ್‌ಗಳಿದೆ. ಈ ಹಾಡಿನ ಸಾಹಿತ್ಯ ನೋಡಿ ಈ ಹಾಡಿಗೆ ವಿಜಯ್ ಪ್ರಕಾಶ್ ಅವರ ಧ್ವನಿಯೇ ಸೂಕ್ತವೆನಿಸಿತು. ತಮ್ಮ ಕಾರ್ಯದೊತ್ತಡದ ನಡುವೆಯೂ ಈ ಹಾಡನ್ನು ಹಾಡಿದ ವಿಜಯ್ ಪ್ರಕಾಶ್ ಅವರಿಗೆ ಧನ್ಯವಾದ’ ಎಂದರು ಸಂಗೀತ ನಿರ್ದೇಶಕಿ ಸಾದ್ವಿನಿ ಕೊಪ್ಪ.
“ಜಲಪಾತ’ ಸಿನಿಮಾದಲ್ಲಿ ರಜನೀಶ್ ನಾಯಕನಾಗಿದ್ದು, ನಾಗಶ್ರೀ ಬೇಗಾರ್ ನಾಯಕಿಯಾಗಿದ್ದಾರೆ. ಪ್ರಮೋದ್ ಶೆಟ್ಟಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಬಹುತೇಕ ಮಲೆನಾಡಿದ ಕಲಾವಿದರು ಮತ್ತು ತಂತ್ರಜ್ಞರು ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ ಎಂಬುದು ಚಿತ್ರತಂಡದ ಮಾತು.
ಚಿತ್ರದ ನಾಯಕ ರಜನೀಶ್ ಹಾಗೂ ನಾಯಕಿ ನಾಗಶ್ರೀ ಬೇಗಾರ್ “ಜಲಪಾತ’ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಸದ್ಯ “ಜಲಪಾತ’ ಸಿನಿಮಾದ ಗೀತೆಯನ್ನು ಬಿಡುಗಡೆ ಮಾಡಿರುವ ಚಿತ್ರತಂಡ, ಸೆಪ್ಟೆಂಬರ್ ತಿಂಗಳಿನಲ್ಲಿ ಸಿನಿಮಾವನ್ನು ತೆರೆಗೆ ತರಲು ಯೋಜನೆ ಹಾಕಿಕೊಂಡಿದೆ.